ಮಂಡ್ಯ(ಆ.31): ಮದ್ದೂರು ತಾಲೂಕಿನ ದೇಶಹಳ್ಳಿ ಸಮೀಪದ ಐತಿಹಾಸಿಕ ಮದ್ದೂರು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಕಜವೇ ರಾಜ್ಯಾಧ್ಯಕ್ಷ ರಮೇಶ್‌ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಒಡಲು ತುಂಬಿ ಬಳುಕುತ್ತಿರುವ ಮದ್ದೂರು ಕೆರೆಗೆ ನವಧಾನ್ಯ, ಬಳೆ ಬಿಚ್ಚೋಲೆ, ರವಿಕೆ ಕಣ, ಹರಿಶಿನ ಕುಂಕುಮ ಹಾಗೂ ತಾಂಬೂಲ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡುವ ಮೂಲಕ ಎರಡು ವರ್ಷದ ನಂತರ ಕೆರೆ ತುಂಬಿದ ಸಂಭ್ರಮ ಆಚರಿಸಿದರು.

ಕೆರೆಗಳ ಹೂಳು ತೆಗೆದು ದುರಸ್ತಿ ಮಾಡಲು ಆದ್ಯತೆ:

ಈ ವೇಳೆ ಮಾತನಾಡಿ ಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಸುಮಾರು 925 ಎಕರೆ ಪ್ರದೇಶ ನಿರ್ಮಾಣಗೊಂಡಿರುವ ಮದ್ದೂರು ಕೆರೆ, 3985 ಎಕರೆ ಜಮೀನುಗಳಿಗೆ ನೀರುಣಿಸುವ ಕೆರೆಯಾಗಿದೆ. ವರುಣನ ಕೃಪೆಯಿಂದ ಈ ಬಾರಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದೆ. ನಾಲೆಯ ಮೂಲಕ ಹರಿದು ಬಂದ ನೀರು ಕೆರೆಗೆ ಸೇರಿ ಭರ್ತಿಯಾಗಿದೆ ಎಂದರು.

ಜಿಲ್ಲೆಯ ಜೀವನಾಡಿ ಕಾವೇರಿಗೆ 4ನೇ ಬಾರಿಗೆ ಬಾಗಿನ ಅರ್ಪಿಸಿದ ಸಿಎಂ

ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಪ್ರದಾಯಬದ್ಧವಾಗಿ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗುತ್ತಿದೆ ಎಂದರು. ಸರ್ಕಾರ ಕೆರೆಗಳ ಹೂಳು ತೆಗೆದು ನಾಲೆಗಳ ದುರಸ್ತಿ ಮಾಡಲು ಮೊದಲ ಆದ್ಯತೆ ನೀಡಬೇಕು. ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸಿ ಅಂತರ್ಜಲ ಹೆಚ್ಚಳ ಮಾಡಬೇಕು. ಕಾವೇರಿ ನೀರಾವರಿ ನಿಗಮ ಟಾಸ್ಕ್‌ ವರ್ಕ್ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಸಿದರು.

KRS ಸುರಕ್ಷತೆ: ಮಂಡ್ಯದಲ್ಲಿ ಗಣಿಗಾರಿಕೆಗೆ ಅನಿರ್ದಿಷ್ಟಾವಧಿ ನಿಷೇಧಾಜ್ಞೆ

ಉತ್ತರ ಕರ್ನಾಟಕ ನೆರೆ ಹಾವಳಿಯಿಂದ 18 ಜಿಲ್ಲೆಗಳ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೇಂದ್ರ ಸರ್ಕಾರ ಕೇವಲ ವೈಮಾನಿಕ ಸಮೀಕ್ಷೆ ನಡೆಸುವುದನ್ನು ಬಿಟ್ಟು ನೆರೆ ಪರಿಹಾರವಾಗಿ ಕನಿಷ್ಠ 25 ಸಾವಿರ ಕೋಟಿ ಬಿಡುಗಡೆ ಮಾಡುವ ಮೂಲಕ ಅವರ ನೆರೆವಿಗೆ ಧಾವಿಸಬೇಕು ಎಂದು ರಮೇಶ್‌ ಗೌಡ ಆಗ್ರಹಿಸಿದರು. ಕಜವೇ ರಾಜ್ಯ ಉಪಾಧ್ಯಕ್ಷ ರಂಜಿತ್‌ ಗೌಡ, ಕಾರ್ಯದರ್ಶಿ ಬೆಂಕಿ ಶ್ರೀಧರ್‌, ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್‌ ಮತ್ತಿತರರಿದ್ದರು.