ಮಂಡ್ಯ(ಆ.31): ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿರುವ ಗಣಿಗಾರಿಕೆಗೆ ಸಂಪೂರ್ಣ ಕಡವಾಣ ಹಾಕಲು ಜಿಲ್ಲಾಡಳಿತ ಸಮರ ಸಾರಿದೆ. ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯದ ಸೂಚನೆ ಇದೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಠಿಣ ಕ್ರಮ ಜರುಗಿಸಿ ಎಂದು ಆದೇಶ ಮಾಡಿದ್ದಾರೆ.

ರೈತರು, ಹೋರಾಟಗಾರರು ಸದಾ ಎಚ್ಚರಿಕೆ ನೀಡಿದ್ದಾರೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟು ಮುಲಾಜಿಲ್ಲದೇ ಡ್ಯಾಂನ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಿಎಂ ಆದೇಶದಂತೆ ಅನಿರ್ದಿಷ್ಟಾವಧಿಗೆ ನಿಷೇಧ ಹೇರಲು ಜಿಲ್ಲಾಡಳಿತ ಮುಂದಾಗಿದೆ.

ಮೊದಲ ಹೆಜ್ಜೆಯಾಗಿ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಆಸುಪಾಸಿನಲ್ಲಿ ಅಂದರೆ ಕೆಆರ್‌ಎಸ್‌ ಆಣೆಕಟ್ಟೆಯ 20 ಕಿಮೀ ವ್ಯಾಪ್ತಿಯಲ್ಲಿ ಅನಿರ್ಧಿಷ್ಟಾವಧಿಗೆ ಗಣಿ ನಿಷೇಧ ಹೇರಲು ನಿರ್ಧರಿಸಿ ಆದೇಶ ಹೊರಡಿಸಿದೆ. ಈ ವಿಷಯವನ್ನು ತಿಳಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಗಣಿಗಾರಿಕೆಯಿಂದ ಕೆಆರ್‌ಎಸ್‌ ಡ್ಯಾಂಗೆ ಗಂಡಾಂತರ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಬೇಬಿ ಬೆಟ್ಟಸೇರಿದಂತೆ 20 ಕಿ.ಮೀ ಸುತ್ತಮುತ್ತ ಗಣಿಗಾರಿಕೆಯನ್ನೇ ಸಂಪೂರ್ಣ ಬಂದ್‌ ಮಾಡಲು ನಿಶ್ಚಯ ಮಾಡಿದ್ದೇವೆ ಎಂದರು.

ಪರಿಣಾಮಗಳ ಅವಲೋಕನ:

ಕೆಆರ್‌ಎಸ್‌ ಸುತ್ತಮುತ್ತಲಿನ 20 ಕಿಮೀ. ವ್ಯಾಪ್ತಿಯಲ್ಲಿ ಅನಿರ್ಧಿಷ್ಟಾವಧಿಗೆ ಗಣಿಗಾರಿಕೆ ಸಂಪೂರ್ಣ ಬಂದ್‌ ಮಾಡಿದರೆ ಆಗುವ ಪರಿಣಾಮಗಳನ್ನು ನಾವು ಅವಲೋಕನ ಮಾಡಿದ್ದೇವೆ. ಆಣೆಕಟ್ಟೆಯ ಸುರಕ್ಷತೆ ಬಹಳ ಮುಖ್ಯ. ಹೀಗಾಗಿ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯೂ ಇದೆ ಎಂದು ಹೇಳಿದರು.

ಗಣಿಗಾರಿಕೆಯಿಂದ ಅಪಾಯ:

ಬೇಬಿ ಬೆಟ್ಟದ ಸುತ್ತಮುತ್ತ ಹತ್ತಾರು ವರ್ಷಗಳಿಂದಲೂ ಗಣಿಗಾರಿಕೆ ನಡೆಯುತ್ತಿದೆ. ಇತ್ತೀಚೆಗೆ ಕಲ್ಲು ಸಿಡಿಸಲು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಿಕೆ ಮಾಡುತ್ತಿದ್ದಾರೆ. ಗಣಿ ಮಾಲೀಕರುಗಳು ಹೆಚ್ಚು ಸ್ಫೋಟಕ ಬಳಿಕೆ ಮಾಡಿದರೆ ಕೆಆರ್‌ಎಸ್‌ ಡ್ಯಾಮ…ಗೆ ಅಪಾಯ ಕಟ್ಟಿಟ್ಟಬುತ್ತಿ. ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿಗಳೂ ಕೂಡ ಡ್ಯಾಂ ಸುರಕ್ಷತೆಯ ಬಗ್ಗೆ ಜಾಗೃತಿ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಡ್ಯಾಂ ವ್ಯಾಪ್ತಿಯಲ್ಲಿ ಆಗಾಗ್ಗೆ ಭಾರೀ ಪ್ರಮಾಣದ ಸರಣಿ ಶಬ್ದ ಕೇಳಿ ಬರುತ್ತಿದೆ. ಕಳೆದ ಆಗಸ್ಟ್‌ ಎರಡನೇ ವಾರದಲ್ಲೂ ಸರಣಿ ಶಬ್ದಗಳು ಕೇಳಿ ಬಂದ ಡ್ಯಾಂ ವ್ಯಾಪ್ತಿಯಲ್ಲಿ ನಡುಕವುಂಟಾಗಿದ್ದು ಅನುಭವ ಬಂದಿದೆ ಎಂದು ಅಧಿಕಾರಿಗಳು ವರದಿ ಆಧರಿಸಿ ಸೆ.4ರವರೆಗೆ ಕಲ್ಲು ಗಣಿ ಚಟುವಟಿಕೆ ನಿರ್ಬಂಧಿಸಿದ್ದ ನಿಷೇಧಾಜ್ಞೆಯ ಆದೇಶವನ್ನು ಜಿಲ್ಲಾಡಳಿತ ಇದೀಗ ಅನಿರ್ಧಿಷ್ಟಾವಧಿಗೆ ವಿಸ್ತರಿಸಿದೆ ಎಂದು ವಿವರಿಸಿದರು.

ನಿಷೇಧಾಜ್ಞೆಗೆ ಒಳಪಡುವ ಹಳ್ಳಿಗಳು:

ಆಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಆಗಸ್ಟ್‌ 28ರಿಂದ 144 ಸೆಕ್ಷನ್‌ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಈಗ ಶಾಶ್ವತವಾಗಿ ಮುಂದುವರೆಯಲಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಇರುತ್ತದೆ.

ಮಂಡ್ಯ : ಸಂಸದೆ ಸುಮಲತಾ ಬಳಿ ಅಳಲು ತೋಡಿಕೊಂಡ JDS ಅನರ್ಹ ಶಾಸಕ

ಕಲ್ಲು ಗಣಿಗಾರಿಕೆ ಕಾರಣಕ್ಕಾಗಿ ಡ್ಯಾಂ ಬಳಿ ಭಾರಿ ಪ್ರಮಾಣದ ಶಬ್ದ ಕೇಳಿ ಬರುತ್ತದೆ ಎಂದು ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ತಹಸೀಲ್ದಾರ್‌ ವರದಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಅಂಶಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಶಾಶ್ವತ ಗಣಿಗಾರಿಕೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿದ್ದಾರೆ.