ಬಾಗಲಕೋಟೆಯ ನವನಗರದಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದೆ. ಆದರೆ, ಮಗುವನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ, ಪೋಷಕರು ಆಕೆಯ ದೇಹವನ್ನು ಗಂಟೆಗಟ್ಟಲೆ ಉಪ್ಪಿನಲ್ಲಿ ಮುಳುಗಿಸಿಟ್ಟು ವಿಫಲ ಪ್ರಯತ್ನ ನಡೆಸಿದ ದಾರುಣ ಘಟನೆ ನಡೆದಿದೆ.
ಬಾಗಲಕೋಟೆ (ಜೂ.8): ಎದುರಿನ ಮನೆಯ ನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38 ರಲ್ಲಿ ನಡೆದಿದೆ. ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ. ಆದರೆ, ಮಗುವಿನ ಸಾವಿನ ನಂತರ ಆಕೆಯನ್ನು ಬದುಕಿಸಲು ಪೋಷಕರು ನಡೆಸಿದ ವಿಲಕ್ಷಣ ಪ್ರಯತ್ನ ಮತ್ತು ಮೂಢನಂಬಿಕೆಯ ನಡೆ ಈಗ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್‌ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಪ್ಪಿನಲ್ಲಿ ಮುಳುಗಿಸಿದರೆ ಮಗು ಬದುಕುತ್ತದೆ ಎಂಬ ನಂಬಿಕೆ!
ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಹೀಗಾಗಿ, ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದಾರೆ.
ಮಗುವಿನ ಶವವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದ ಮೇಲೂ ಪೋಷಕರ ಈ ಪ್ರಯತ್ನ ನಿಂತಿರಲಿಲ್ಲ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲೇ ನಡೆದ ಈ ದೃಶ್ಯವನ್ನು ನೋಡಿ ಅಲ್ಲಿದ್ದವರು ಮರುಕ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಮತ್ತೆ ಜೀವ ಬರಬಹುದು ಎಂಬ ಆಸೆಯಿಂದ ಪೋಷಕರು ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪವಾಡಗಳು ನಡೆಯದಿದ್ದಾಗ ಮತ್ತು ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದಿದ್ದಾಗ ಪೋಷಕರು ನಿರಾಶೆಗೊಂಡಿದ್ದಾರೆ.

ಕೊನೆಗೆ ವೈದ್ಯರ ಸಲಹೆ ಮೇರೆಗೆ ಶವ ಹೊರಕ್ಕೆ
ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿ, ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ವೈದ್ಯರ ಮಾತನ್ನು ಕೇಳಿದ ಕುಟುಂಬಸ್ಥರು ಕೊನೆಗೂ ಮಗುವಿನ ದೇಹವನ್ನು ಉಪ್ಪಿನಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆಗೆ (Post-Mortem) ಒಪ್ಪಿಗೆ ಸೂಚಿಸಿದ್ದು, ತಂದಿದ್ದ ಉಪ್ಪನ್ನು ಹೊರಗಡೆ ಎಸೆದಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಶವಪರೀಕ್ಷೆ ಕಾರ್ಯ ನಡೆದಿದೆ.


