ಮೈಸೂರು ಸಾಮ್ರಾಜ್ಯದ ಉದಯಕ್ಕೂ 190 ವರ್ಷಗಳ ಮುಂಚೆ ಆರಂಭವಾದ ತೋಪಿನ ತಿಮ್ಮಪ್ಪ ಹರಿಸೇವೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇಂದು ಮಂಡ್ಯ ಜಿಲ್ಲೆಯಲ್ಲಿ ತೋಪಿನ ತಿಮ್ಮಪ್ಪನ 850ನೇ ವರ್ಷದ ಹರಿಸೇವೆ ಮಾಡಲಾಯಿತು. ಈ ದೇವರ ವಿಶೇಷತೆ ಏನೆಂದು ನೀವೂ ತಿಳಿಯಿರಿ.
ಮಂಡ್ಯ (ಜು.19): ರಾಜ್ಯದಲ್ಲಿ ಮೈಸೂರು ಸಾಮ್ರಾಜ್ಯ ಉದಯಕ್ಕೂ 190 ವರ್ಷಗಳಿಗಿಂತ ಮುಂಚಿತವಾಗಿಯೇ ಆರಂಭವಾಗಿದ್ದ ಅಲವಾಡಿ ತೋಪಿನ ತಿಮ್ಮಪ್ಪನ ಹರಿಸೇವೆಯನ್ನು 850 ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗಿದೆ. ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಅಬಲವಾಡಿಯಲ್ಲಿ ನೆಲೆಸಿರುವ, ಭವ್ಯ ಇತಿಹಾಸ ಪ್ರಸಿದ್ಧ 'ಶ್ರೀ ತೋಪಿನ ತಿಮ್ಮಪ್ಪ'ನ ಸನ್ನಿಧಿಯಲ್ಲಿ ಹರಿಸೇವೆ ಮಹೋತ್ಸವವನ್ನು ಸಡಗರ-ಸಂಭ್ರಮದಿಂದ ಜರುಗಿತು. ಪ್ರತಿ ವರ್ಷದಂತೆ ಆಷಾಢ ಮಾಸದಲ್ಲಿ ನಡೆಯುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು ಸಾಕ್ಷಿಯಾದರು.
850 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ
ಮಂಡ್ಯ ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದ ಮೈಸೂರು ಒಡೆಯರ್ ಸಾಮ್ರಾಜ್ಯವು 1366ರಲ್ಲಿ ಆರಂಭವಾಗಿದೆ. ಆದರೆ, ಮೈಸೂರು ಸಾಮ್ರಾಜ್ಯದ ಉದಯಕ್ಕೂ ಮುನ್ನ 190 ವರ್ಷಗಳ ಮುಂಚೆಯೇ ಅಂದರೆ 1176ರ ಆಸುಪಾಸಿನಲ್ಲಿ ಆರಂಭವಾದ ತೋಪಿನ ತಿಮ್ಮಪ್ಪನ ದೇವಸ್ಥಾನದ ಹರಿಸೇವೆಯು ಇಂದಿಗೂ ತಪ್ಪದೇ ನಡೆದುಕೊಂಡು ಬರುತ್ತಿದೆ. ಅಬಲವಾಡಿಯಲ್ಲಿರುವ ತೋಪಿನ ತಿಮ್ಮಪ್ಪ ದೇಗುಲವು ಈ ಭಾಗದ ಅತ್ಯಂತ ಹಳೆಯ ಮತ್ತು ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದಾಗಿದೆ. ಸುಮಾರು ಎಂಟೂವರೆ ಶತಮಾನಗಳ ಇತಿಹಾಸ ಹೊಂದಿರುವ ಈ ದೇವರು ಭಕ್ತರ ಕಷ್ಟಗಳನ್ನು ನೀಗಿಸುವ 'ಸಂಕಷ್ಟ ಹರ' ಎಂದೇ ನಂಬಲಾಗಿದೆ. ಪ್ರತಿ ವರ್ಷ ಆಷಾಢ ಮಾಸ ಬಂತೆಂದರೆ ಸಾಕು, ಇಲ್ಲಿ ಹರಿಸೇವೆಯ ಸಂಭ್ರಮ ಕಳೆಗಟ್ಟುತ್ತದೆ. ಈ ಬಾರಿಯೂ ಸಹ ಹರಿಸೇವೆಯ ಅಂಗವಾಗಿ ದೇವರಿಗೆ ವಿಶೇಷ ಪುಷ್ಪಾಲಂಕಾರ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಗಿತ್ತು.
ತಾವರೆ ಎಲೆ ಊಟದ ವಿಶಿಷ್ಟ ಪರಂಪರೆ
ಈ ಹರಿಸೇವೆಯ ಪ್ರಮುಖ ಆಕರ್ಷಣೆ ಎಂದರೆ ಅದು 'ತಾವರೆ ಎಲೆಯ ಅನ್ನಸಂತರ್ಪಣೆ'. ಸಾಮಾನ್ಯವಾಗಿ ಬಾಳೆ ಎಲೆ ಅಥವಾ ಪ್ಲೇಟ್‌ಗಳಲ್ಲಿ ಊಟ ಮಾಡುವುದು ರೂಢಿ. ಆದರೆ, ತೋಪಿನ ತಿಮ್ಮಪ್ಪನ ಸನ್ನಿಧಿಯಲ್ಲಿ ದೇವರಿಗೆ ಹರಿಸೇವೆ ಅರ್ಪಿಸಿದ ಬಳಿಕ ಭಕ್ತರಿಗೆ ತಾವರೆ ಎಲೆಯಲ್ಲಿ ಅನ್ನಪ್ರಸಾದವನ್ನು ಬಡಿಸಲಾಗುತ್ತದೆ. ದೇಗುಲದ ಮುಂಭಾಗ ಕುಳಿತು ತಾವರೆ ಎಲೆಯಲ್ಲಿ ಊಟ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಮಂಡ್ಯ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತ ಸಾಗರ ಹರಿದು ಬಂದಿತ್ತು.

ಸರತಿ ಸಾಲಿನಲ್ಲಿ ದರ್ಶನ
ಹರಿಸೇವೆಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಸ್ಥಾನವನ್ನು ತಳಿರು ತೋರಣಗಳಿಂದ ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಭಕ್ತರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಳಿಕ ದೇಗುಲದ ಆವರಣದಲ್ಲಿ ನಡೆದ ಸಾಮೂಹಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಭಕ್ತಿಯಿಂದ ತಾವರೆ ಎಲೆಯಲ್ಲಿ ಪ್ರಸಾದ ಸ್ವೀಕರಿಸಿದರು.
ಒಟ್ಟಾರೆಯಾಗಿ, ಮದ್ದೂರಿನ ಅಬಲವಾಡಿಯಲ್ಲಿ ನಡೆದ ಈ ಹರಿಸೇವೆಯು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಜನಪದ ನಂಬಿಕೆ ಮತ್ತು ಸಾಂಪ್ರದಾಯಿಕ ಸಂಸ್ಕೃತಿಯ ಬಿಂಬವಾಗಿ ಮಿಂಚಿತು.


