Mangaluru; ಭೂ ಸ್ವಾಧೀನಕ್ಕೆ ಸರ್ವೇಗೆ ಬಂದವನ್ನು ತಡೆದು ವಾಪಸ್ ಕಳುಹಿಸಿದ ಗ್ರಾಮಸ್ಥರು!
ಕೈಗಾರಿಕೆ ವಲಯಕ್ಕೆ ಭೂ ಸ್ವಾಧೀನ ಹಿನ್ನೆಲೆ ಖಾಸಗಿ ವ್ಯಕ್ತಿಗಳು ಸರ್ವೇಗೆ ಮುಂದಾದ ವೇಳೆ ಗ್ರಾಮಸ್ಥರು ಮತ್ತು ಹೋರಾಟಗಾರರು ತಡೆದು ವಾಪಾಸ್ ಕಳುಹಿಸಿದ ಘಟನೆ ದ.ಕ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜು.2): ಕೈಗಾರಿಕೆ ವಲಯಕ್ಕೆ ಭೂ ಸ್ವಾಧೀನ (land acquisition ) ಹಿನ್ನೆಲೆ ಖಾಸಗಿ ವ್ಯಕ್ತಿಗಳು ಸರ್ವೇಗೆ ಮುಂದಾದ ವೇಳೆ ಗ್ರಾಮಸ್ಥರು ಮತ್ತು ಹೋರಾಟಗಾರರು ತಡೆದು ವಾಪಾಸ್ ಕಳುಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಬಳ್ಕುಂಜೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಸರ್ವೇ (survey) ನಡೆಸುತ್ತಿದ್ದ ತಂಡವನ್ನು ತಡೆಯಲಾಗಿದ್ದು, ತಾಲೂಕಿನ ಬಳ್ಕುಂಜೆ, ಕರ್ನಿರೆ, ಕೊಲ್ಲೂರು ಗ್ರಾಮದಲ್ಲಿ ನಿವೃತ್ತ ಉಪತಹಶೀಲ್ದಾರ್ ಮೂಲಕ ಸರ್ವೇ ನಡೆಸಲಾಗುತ್ತಿತ್ತು. 2008 ರಲ್ಲಿ ನಿವೃತ್ತರಾಗಿರುವ ಉಪ ತಹಶೀಲ್ದಾರ್ ಚಂದ್ರ ಮೋಹನ್ ನೇತೃತ್ವದ ತಂಡ ಈ ಸರ್ವೇ ನಡೆಸ್ತಾ ಇತ್ತು. ಕೆಐಡಿಬಿ ಬಳಿ ಸಿಬ್ಬಂದಿ ಕೊರತೆ ಹಿನ್ನೆಲೆ ಖಾಸಗಿ ವ್ಯಕ್ತಿಗೆ ಸರ್ವೇ ಗುತ್ತಿಗೆ ನೀಡಲಾಗಿದ್ದು, ಹೀಗಾಗಿ ಸುರತ್ಕಲ್ ನ ಸಂತೋಷ್ ಎಂಬ ಗುತ್ತಿಗೆದಾರನಿಂದ ನಿವೃತ್ತ ಅಧಿಕಾರಿ ಮೂಲಕ ಸರ್ವೇ ನಡೆಸಲಾಗುತ್ತಿತ್ತು.
ಮಂಗಳೂರಿನಲ್ಲಿ ಮುಳುಗಿದ ಹಡಗಿನಿಂದ ತೈಲ ಸೋರಿಕೆ, ಸ್ಥಳೀಯರಿಗೆ ಆರೋಗ್ಯ ಸಮಸ್ಯೆ!
ಹೀಗಾಗಿ ಇವರನ್ನು ತಡೆದ ಗ್ರಾಮಸ್ಥರು ಸರ್ವೇ ಆದೇಶ ಪ್ರತಿ, ಕೆಐಡಿಬಿ ಅಥವಾ ಜಿಲ್ಲಾಡಳಿತ ನೀಡಿರುವ ಗುರುತು ಚೀಟಿ ತೋರಿಸಲು ಆಗ್ರಹಿಸಿದ್ದು, ಬಳಿಕ ಸರ್ವೇ ತಡೆದು ವಾಪಾಸ್ ಕಳುಹಿಸಿದ್ದಾರೆ. ಇವರನ್ನು ವಿಚಾರಿಸಿದಾಗ, "ಕೆಐಡಿಬಿಯವರ ಬಳಿ ಸಿಬ್ಬಂದಿ ಕೊರತೆ ಇರುವುದರಿಂದ ಭೂಸ್ವಾಧೀನಾಧಿಕಾರಿ ಬಿನೋಯ್ ಅವರು ಸಮೀಕ್ಷೆ ನಡೆಸುವ ಗುತ್ತಿಗೆಯನ್ನು ಖಾಸಗಿ ಏಜನ್ಸಿ ಹೊಂದಿರುವ ಸುರತ್ಕಲ್ ನ ಸಂತೋಷ್ ಅವರಿಗೆ ನೀಡಿರುತ್ತಾರೆ. ಅವರು ನಿವೃತ್ತ ಅಧಿಕಾರಿಯಾಗಿರುವ ನಮ್ಮನ್ನು ಈ ಕೆಲಸಕ್ಕೆ ನೇಮಿಸಿದ್ದಾರೆ. ನಾವು ಮನೆ ಮನೆಗೆ ತೆರಳಿ ಮನೆ, ಜಮೀನಿನ ಪೂರ್ತಿ ವಿವರ ಪಡೆದು ಅದನ್ನು ದಾಖಲಿಸಿಕೊಂಡು ಸಹಿ ಪಡೆಯುತ್ತೇವೆ. ಕುಟುಂಬ ಸದಸ್ಯರನ್ನು ಮನೆ ಮುಂಭಾಗ ನಿಲ್ಲಿಸಿ ಪಟ ತೆಗೆಯುತ್ತೇವೆ" ಎಂದು ತಿಳಿಸಿದ್ದಾರೆ.
ಕೊಡಗು, ಸುಳ್ಯದಲ್ಲಿ ಮತ್ತೆ 2 ಬಾರಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ
ಈ ರೀತಿ ಸಮೀಕ್ಷೆ ನಡೆಸಲು, ನೀವು ಬರೆದದ್ದಕ್ಕೆ ಜನರ ಸಹಿ ಪಡೆಯಲು ನಿಮಗೆ ಗುತ್ತಿಗೆ ನೀಡಿರುವುದರ ಆದೇಶ ಪ್ರತಿ, ಅದಕ್ಕಾಗಿ ಕೆಐಡಿಬಿ ಅಥವಾ ಜಿಲ್ಲಾಡಳಿತ ನಿಮಗೆ ನೀಡಿರುವ ಗುರುತು ಚೀಟಿ ತೋರಿಸಿ ಅಂದಾಗ, ಅದ್ಯಾವುದು ನಮಗೆ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿ ಖಾಸಗಿ ವ್ಯಕ್ತಿಗಳು ಸರಕಾರದ ಆದೇಶ, ಗುರುತು ಚೀಟಿ ಇಲ್ಲದೆ ಊರೊಳಗಡೆ ಬಂದು ಮನೆ, ಜಮೀನಿನ ಮಾಹಿತಿ ಸಂಗ್ರಹಿಸುವುದು, ಫೋಟೋ, ಸಹಿ ಪಡೆಯವುದು ಅಕ್ರಮ ಎಂದು ವಾದಿಸಿ, ಗ್ರಾಮ ಪಂಚಾಯತ್ ನ ಗಮನಕ್ಕೆ ತರದೆ, ಗುರುತು ಪತ್ರ, ಸರಕಾರದ ಆದೇಶದ ಪ್ರತಿ ಇಲ್ಲದೆ ಗಣತಿಯ ಉದ್ದೇಶಕ್ಕೆ ಗ್ರಾಮಕ್ಕೆ ಪ್ರವೇಶ ಮಾಡಬಾರದು, ಅಮಾಯಕ ಗ್ರಾಮಸ್ಥರನ್ನು ವಂಚಿಸುವುದನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿ ವಾಪಾಸು ಕಳುಹಿಸಲಾಗಿದೆ.
ಬಹುದಿನಗಳ ಬೇಡಿಕೆ: ಮಂಗಳೂರು-ದೆಹಲಿ ನೇರ ವಿಮಾನ ಯಾನ ಆರಂಭ
ಜಿಲ್ಲಾಡಳಿತ ಭೂಸ್ವಾಧೀನಕ್ಕೆ ಸಂಬಂಧಿಸಿ ತಪ್ಪು ದಾರಿ ಅನುಸುರಿಸುತ್ತಿರುವುದನ್ನು ಹೋರಾಟಗಾರರು ಖಂಡಿಸಿದ್ದಾರೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದ್ದು, ಮೂರು ಗ್ರಾಮಗಳ 1,091 ಎಕರೆ ಭೂಮಿ ಭೂ ಸ್ವಾಧೀನಕ್ಕೆ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. 2022 ಮಾ.21ರಂದು 1,091 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸಿರೋ ಗ್ರಾಮಸ್ಥರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.