*   ಕ್ರಮವಾಗಿ 1.8, 2.1 ತೀವ್ರತೆ ದಾಖಲು*  ಜೂ.23 ರಂದು ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವ್ಯಾಪ್ತಿಗಳಲ್ಲಿ ಲಘು ಭೂಕಂಪನ*  ಜನರ ನಿದ್ದೆಗೆಡಿಸಿದ ಭೂಕಂಪನ  

ಮಡಿಕೇರಿ/ಸುಳ್ಯ(ಜು.02):  ಕೊಡಗು ಜಿಲ್ಲೆಯ ಗಡಿ ಗ್ರಾಮಗಳಾದ ಕರಿಕೆ ಮತ್ತು ಚೆಂಬು ಗ್ರಾಮ ವ್ಯಾಪ್ತಿ ಹಾಗೂ ಸುಳ್ಯದ ಗಡಿಯಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಭೂಕಂಪನವಾಗಿದ್ದು, ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ತಡರಾತ್ರಿ 1.15ರ ಸುಮಾರಿಗೆ ಭೂಮಿ ಕಂಪಿಸಿದೆ. ಕಂಪನದ ಅನುಭವಾಗುತ್ತಿದ್ದಂತೆ ಕೆಲವರು ಮನೆಯಿಂದ ಹೊರ ಬಂದಿದ್ದಾರೆ. ಸುಖ ನಿದ್ದೆಯ ಸಮಯವಾಗಿದ್ದರಿಂದ ಹಲವರಿಗೆ ಇದರ ಅನುಭವ ಆಗಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಪದೇ ಪದೆ ಭೂಕಂಪನವಾಗುತ್ತಿರುವುದು ಈ ಜನರ ನಿದ್ದೆಗೆಡಿಸಿದೆ.

ವಿಜಯಪುರ, ಕೊಡಗು ಸುತ್ತ ಮತ್ತೆ ಭೂಕಂಪನ: ರಿಕ್ಟರ್‌ನಲ್ಲಿ 2.4ರಷ್ಟು ತೀವ್ರತೆ

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಗಡಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸುಮಾರು 1.15ರ ವೇಳೆಗೆ ಭೂಕಂಪದ ಅನುಭವವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿತ್ತು. ಇದನ್ನು ಪರಿಶೀಲಿಸಿದಾಗ ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯ ಪ್ರಕಾರ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ. ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ರಿಕ್ಟರ್‌ ಮಾಪಕ 1.8 ರಷ್ಟು ಭೂಕಂಪನವಾಗಿರುವುದು ಪತ್ತೆಯಾಗಿದೆ. ಆ ಬಳಿಕ ಶುಕ್ರವಾರ ಬೆಳಗ್ಗೆ 10.47ರ ಸುಮಾರಿಗೂ ಕಂಪನದ ಅನುಭವವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಜೂ.23 ರಂದು ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವ್ಯಾಪ್ತಿಗಳಲ್ಲಿ ಲಘು ಭೂಕಂಪನವಾಗಿತ್ತು, ಇದಾದ ನಂತರ ಮತ್ತೆ 25ರಂದು ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ, ಭಾಗಮಂಡಲ ಮತ್ತು ದಕ್ಷಿಣ ಕನ್ನಡದ ಸುಳ್ಯಗಡಿಯಲ್ಲಿ ಭೂಕಂಪನವಾಗಿತ್ತು. 28ರಂದು ಮತ್ತೆ ಮೂರನೇ ಬಾರಿ ಮಡಿಕೇರಿ ಸೇರಿ ವಿವಿಧೆಡೆ ಭೂಕಂಪನ ಆಗಿತ್ತು.