ಶಿವಮೊಗ್ಗ: ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ
ಸಾಗರ ತಾಲೂಕಿನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ತೋಟಗಾರಿಕೆ ನಿರ್ದೇಶಕ ರಮೇಶ್ ಜೆ.ಎಲ್. ಹೇಳಿದರು. ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಬಂದು ತಗ್ಗಿದ್ದರೂ, ಈಗ ಅಡಕೆಗೆ ರೋಗ ಬಾಧಿಸುವ ಭೀತಿ ಎದುರಾಗಿದೆ.
ಶಿವಮೊಗ್ಗ(ಆ.16): ಸಾಗರ ತಾಲೂಕಿನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ತೋಟಗಾರಿಕೆ ನಿರ್ದೇಶಕ ರಮೇಶ್ ಜೆ.ಎಲ್. ಹೇಳಿದರು.
ತಾಲೂಕಿನ ಭೀಮನಕೋಣೆ ಗ್ರಾಪಂ ವ್ಯಾಪ್ತಿಯ ಶೆಡ್ತಿಕೆರೆ, ವರದಾಮೂಲ ಅಡಕೆ ತೋಟಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲೂಕಿನ ಕೆಲವು ಭಾಗಗಳ ಅಡಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಳೆರೋಗದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆನಾಶವಾಗುವ ಲಕ್ಷಣ ಕಂಡು ಬಂದಿದೆ.
ಅಡಕೆ ತೋಟಗಳಲ್ಲಿ ವಿಪರೀತವಾಗಿ ಕೊಳೆ ಕಾಣಿಸಿಕೊಂಡಿದೆ. ಬೆಳೆಗಾರರು ಮೂರ್ನಾಲ್ಕು ಬಾರಿ ಔಷಧಿ ಸಿಂಪಡಣೆ ಮಾಡಿದ್ದರೂ ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ. ತಾಲೂಕಿನ ಕಲ್ಮನೆ, ಹೆಗ್ಗೋಡು, ಹಂಸಗಾರು, ಹೊಸಳ್ಳಿ, ಕೈತೋಟ, ಸಾಲೆಕೊಪ್ಪ ಭಾಗದಲ್ಲಿ ಸಂಚರಿಸಿ ಅಡಕೆ ತೋಟಗಳಿಗೆ ಭೇಟಿ ನೀಡಿದ್ದು ಕೊಳೆರೋಗದಿಂದ ಬೆಳೆಗಾರರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದರು.
ಶಿವಮೊಗ್ಗ: ಘಟ್ಟಪ್ರದೇಶದಲ್ಲಿ ತುಂತುರು ಮಳೆ ಆರಂಭ
ಅಡಕೆ ಬೆಳೆಗಾರರು ಮುಂಜಾಗೃತಾ ಕ್ರಮವಾಗಿ ತೋಟಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡುವ ಜೊತೆಗೆ ಬಸಿಗಾಲುವೆ ನಿರ್ಮಾಣ ಮಾಡಿ ತೋಟದಲ್ಲಿ ಸಂಗ್ರಹವಾಗಿರುವ ನೀರನ್ನು ಹೊರಗೆ ಹಾಕಬೇಕು. ಕೊಳೆ ರೋಗ ತಗುಲಿ ಉದುರಿದ ಅಡಕೆಯನ್ನು ಹೆಕ್ಕಿ ತೆಗೆದು ತೋಟದಿಂದ ಹೊರಕ್ಕೆ ಹಾಕಬೇಕು. ಬೆಳೆಗಾರರಿಗೆ ಶೇ. 50ರಿಯಾಯಿತಿ ದರದಲ್ಲಿ ಮೈಲುತುತ್ತ ಮತ್ತು ಸುಣ್ಣವನ್ನು ನೀಡಲಾಗುತ್ತಿದ್ದು, ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಮಾಜಿ ಕಾರ್ಯದರ್ಶಿ ವ.ಶಂ. ರಾಮಚಂದ್ರ ಭಟ್ ಮಾತನಾಡಿ, ಕಳೆದ ವರ್ಷ ವಿಪರೀತ ಬಿಸಿಲಿನಿಂದ ಅಡಕೆ ತೋಟಕ್ಕೆ ಹಳದಿ ಎಲೆ ಕಾಯಿಲೆ ಬಂದಿತ್ತು. ಈ ಸಂದರ್ಭದಲ್ಲಿ ನೂರಾರು ಅಡಕೆ ಮರಗಳು ನಾಶವಾಗಿದ್ದವು. ಈ ವರ್ಷ ವಿಪರೀತ ಮಳೆಯಿಂದಾಗಿ ಕೊಳೆರೋಗದ ಜೊತೆಗೆ ಅನೇಕ ತೋಟಗಳಲ್ಲಿ ಅಡಕೆ ಮರಗಳು ಮುರಿದು ಬಿದ್ದಿವೆ. ಅಡಕೆ ಬೆಳೆಗಾರರು ತೀವ್ರ ಸಂಕಷ್ಟಎದುರಿಸುತ್ತಿದ್ದು, ರಾಜ್ಯ ಸರ್ಕಾರ ಗಮನ ಹರಿಸುವಂತೆ ಕೋರಿದರು.
ಪಿಎಲ್‌ಡಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಮಂಜುನಾಥ್ ಪಿ., ಟಿ.ಆರ್. ಗಣಪತಿ, ಲಕ್ಷ್ಮಿನಾರಾಯಣ, ರಾಮಚಂದ್ರ, ಸಂತೋಷ್, ರಾಜು ಶೆಟ್ಟಿತೋಟಗಾರಿಕೆ ಇಲಾಖೆಯ ರುದ್ರೇಶ್, ನಮಿತಾ, ಗ್ರಾಮ ಲೆಕ್ಕಿಗ ಭೀಮಣ್ಣ ಹಾಜರಿದ್ದರು.