ಮೈಸೂರು[ಆ.28]: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಅರ್ಜುನನ (ಆನೆ) ತೂಕ ಬರೋಬ್ಬರಿ 5,800 ಕೆ.ಜಿ.

59 ವರ್ಷದ ಅರ್ಜುನ ಸತತ 8ನೇ ಬಾರಿ ಅಂಬಾರಿ ಹೊರಲು ಸಿದ್ಧವಾಗಿದ್ದು, ದಸರೆಯಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಆನೆಗಳ ತೂಕವನ್ನು ಮಂಗಳವಾರ ನಡೆಸಲಾಯಿತು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಅವುಗಳ ತೂಕ ಪರಿಶೀಲಿಸಲಾಯಿತು. ಇವುಗಳ ಪೈಕಿ ಅಂಬಾರಿ ಹೊರುವ ಅರ್ಜುನ 5,800 ಕೆ.ಜಿ. ಹೊಂದಿದ್ದು, ಎಲ್ಲಾ ಆನೆಗಳಿಗಿಂತ ಹೆಚ್ಚಿನ ತೂಕ ಹೊಂದಿದ್ದಾನೆ. ಕಳೆದ ವರ್ಷವೂ ಅರ್ಜುನನೇ ಎಲ್ಲರಿಗಿಂತ ತೂಕವಿದ್ದ.

ಮೈಸೂರು ಅರಮನೆಗೆ ದಸರಾ ಗಜಪಡೆ

ಉಳಿದಂತೆ 53 ವರ್ಷದ ಅಭಿಮನ್ಯು 5145 ಕೆ.ಜಿ, 36 ವರ್ಷದ ಧನಂಜಯ 4460 ಕೆ.ಜಿ., 49 ವರ್ಷದ ಈಶ್ವರ 3995 ಕೆ.ಜಿ, 63 ವರ್ಷದ ವರಲಕ್ಷ್ಮಿ 3510 ಕೆ.ಜಿ ಹಾಗೂ 62 ವರ್ಷದ ವಿಜಯ ಆನೆಯು 2825 ಕೆ.ಜಿ. ತೂಕವಿದೆ. ಆನೆಗಳು ವಾಪಸ್‌ ಕಾಡಿಗೆ ಮರುಳುವಾಗಲೂ ಅವುಗಳ ತೂಕ ಪರಿಶೀಲಿಸಲಾಗುತ್ತದೆ.

460 ಕೆ.ಜಿ. ಹೆಚ್ಚಳ:

ಕಳೆದ ವರ್ಷ ಅರಮನೆಗೆ ಆಗಮಿಸಿದಾಗ 5650 ಕೆ.ಜಿ. ತೂಕವಿದ್ದ ಅರ್ಜುನ, ವಾಪಸ್‌ ಕಾಡಿಗೆ ಮರುಳುವಾಗ 6110 ಕೆ.ಜಿ. ಆಗಿದ್ದ. ಒಟ್ಟು 460 ಕೆ.ಜಿ. ತೂಕ ಹೆಚ್ಚಳವಾಗಿತ್ತು.