ಮೈಸೂರು [ಆ.26]: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಸಾಕಾನೆ ಶಿಬಿರಗಳಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಮೊದಲ ತಂಡ ಸೋಮವಾರ ಮೈಸೂರು ಅರಮನೆ ಪ್ರವೇಶಿಸಲಿದೆ. 

ಮೊದಲ ತಂಡದಲ್ಲಿ ಆಗಮಿಸಿರುವ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಮತ್ತು ವರಲಕ್ಷ್ಮಿ ಆನೆಗಳು ಮೈಸೂರಿನ ಅಶೋಕಪುರದಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಸೋಮವಾರ ಬೆಳಗ್ಗೆ 10ಕ್ಕೆ ಅಲ್ಲಿ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ತರಲಾಗುವುದು. 

ಅರಮನೆ ಜಯಮಾರ್ತಾಂಡ ದ್ವಾರದ ಬಳಿಗೆ ಮಧ್ಯಾಹ್ನ ತಲುಪಲಿರುವ ಗಜಪಡೆಗೆ ಅರಮನೆ ಮಂಡಳಿಯಿಂದ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಎಸ್‌.ಎ. ರಾಮದಾಸ್‌, ಸಂಸದ ಪ್ರತಾಪ್‌ಸಿಂಹ ಭಾಗವಹಿಸಲಿದ್ದಾರೆ.