ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ತತ್ವಾರವಿದ್ದರೂ ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿಯ ರೈತ ಪರಮೇಶ್ವರಪ್ಪ ಅವರ ಜಮೀನಿನಲ್ಲಿ ಕೊಳವೆ ಬಾವಿ ತೋಡಿದಾಗ 260 ಅಡಿಗೆ 6 ಇಂಚು ನೀರು ಚಿಮ್ಮಿದೆ. ಇದು ಸುತ್ತಮುತ್ತಲಿನ ರೈತರಲ್ಲಿ ಅಚ್ಚರಿ ಮತ್ತು ಹರ್ಷ ತಂದಿದೆ.
ಬಿ.ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟು ನಾಡಿನಾದ್ಯಂತ ಬರ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದ್ದು, ಅದಕ್ಕೆ ಅತ್ಯಂತ ಹಿಂದುಳಿದ ಹರಪನಹಳ್ಳಿ ತಾಲೂಕು ಸಹ ಹೊರತೇನಲ್ಲ, ಇಂತಹ ಸಂಕಷ್ಟ ಸ್ಥಿತಿಯಲ್ಲಿ ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ಗಂಗೆ ಮುಗಿಲಿಗೆ ಚಿಮ್ಮಿ ಎಲ್ಲರನ್ನು ಚಿಕಿತಗೊಳಿಸಿದ್ದಾಳೆ.
260 ಅಡಿಗೆ ಆರು ಇಂಚು ನೀರು
ವಟ್ಲಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ ಎಂಬುವವರ 5ಎಕರೆ ಜಮೀನಿನಲ್ಲಿ ಕಳೆದ ಭಾನುವಾರ ಬೆಳಗ್ಗೆ ಬೋರವೇಲ್ ಕೊರೆಸಲು ಪ್ರಾರಂಭಿಸಿದಾಗ ಕೇವಲ 260 ಅಡಿಗೆ ಆರು ಇಂಚು ನೀರು ಚಿಮ್ಮಿ ಎಲ್ಲರೂ ಮುಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ತುಂಗಭದ್ರಾ ನದಿ ತೀರದಲ್ಲಿಯೇ ಅನೇಕ ಬೋರುಗಳು ವಿಫಲಗೊಂಡಿವೆ, ಇನ್ನು ಕೆಲವು 2 ರಿಂದ 3 ಇಂಚು ನೀರು ಬಿದ್ದಿವೆ, ಪರಮೇಶ್ವರಪ್ಪನವರು 5 ಎಕರೆ ಜಮೀನಿನಲ್ಲಿ ಈಗಾಗಲೇ ಒಂದು ಬೋರು ಇದ್ದು, ಅದು 4 ಇಂಚು ಮಾತ್ರ ಇತ್ತು, ರಾಗಿ ಬೆಳೆ ತೆಗೆದುಕೊಂಡು ಇದೀಗ ಮೆಕ್ಕೆಜೋಳ ಬಿತ್ತಲು ಸಿದ್ಧತೆ ಮಾಡಿಕೊಂಡಾಗ ನೀರು ಸಾಲುವುದಿಲ್ಲ ಎಂದು ಇನ್ನೊಂದು ಬೋರು ಹಾಕಿಸೋಣ ಎಂಬ ಯೋಜನೆ ಬಂದು ಬೋರು ಹಾಕಿಸಲು ಮುಂದಾಗಿದ್ದಾರೆ. ಆದರೆ ಈ ಎರಡನೇ ಬೋರು 260 ಅಡಿ ಹೋದಾಗ ಬರಬ್ಬೊರಿ 6 ಇಂಚು ಗಂಗೆ ಆಕಾಶಕ್ಕೆ ಚಿಮ್ಮಿದಾಗ ರೈತ ಪರಮೇಶ್ವರಪ್ಪ ಹಾಗೂ ಇತರ ರೈತರು ಬಾಯಿಯ ಮೇಲೆ ಕೈ ಇಟ್ಟು ಕೊಂಡು ಚಿಕಿತರಾಗುವುದರ ಜತೆಗೆ ಸಂತಸಗೊಂಡಿದ್ದಾರೆ.
ನದಿ ನೀರಿನ ಹರಿವು ಕಡಿಮೆಯಾಗಿದೆ, ಎಲ್ಲೆಡೆ ಬರ ತಾಂಡವವಾಡುತ್ತಿದೆ, ಅಂತಹದರಲ್ಲಿ ಆರು ಇಂಚು ನೀರು ಬಿದ್ದಿರುವುದು ಆಶ್ಚರ್ಯ ಹಾಗು ಸಂತಸ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಆಶ್ಚರ್ಯ ಮತ್ತು ಸಂತಸ
ನಮ್ಮ ತಂದೆ ಪರಮೇಶ್ವರಪ್ಪನವರು 4 ಇಂಚು ಇದ್ದ ಮೊದಲಿನ ಬೋರ ಮೂಲಕ 5 ಎಕರೆ ಜಮೀನಿಗೆ 15 ದಿನ ನೀರು ಹಾಯಿಸುತ್ತಿದ್ದರು, ಆದ್ದರಿಂದ ನೀರು ಸಾಲಲ್ಲ ಎಂದು ಇನ್ನೊಂದು ಬೋರು ಹಾಕಿಸಲು ಚಿಂತಿಸಿ ಬೋರು ಹಾಕಿಸಿದಾಗ ಬರಗಾಲದಲ್ಲೂ ಕೇವಲ 260 ಅಡಿಗೆ 6 ಇಂಚು ನೀರು ಬಿದ್ದು ಆಶ್ಚರ್ಯ ಮತ್ತು ಸಂತಸವಾಗಿದೆ.
ಕೆ.ಸಂತೋಷ, ರೈತ ಪರಮೇಶ್ವರಪ್ಪನವರ ಪುತ್ರ
















