ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಸೂರು..!
ಶಿವಮೊಗ್ಗ ಜಿಲ್ಲೆಯಲ್ಲಿ 2,563 ಅಂಗನವಾಡಿ ಕೇಂದ್ರಗಳಿವೆ. 2171 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದ 392 ಕಟ್ಟಡಗಳಿಗೆ ಸ್ವಂತ ಸೂರಿಲ್ಲ. ಶಾಲಾ ಕಟ್ಟಡಗಳಲ್ಲಿ 109, ಸಮುದಾಯ ಭವನದಲ್ಲಿ 66, ಮಹಿಳಾ ಮಂಡಳಿ ಕಟ್ಟಡದಲ್ಲಿ 4, ಯುವಕರ ಸಂಘದ ಕಟ್ಟಡದಲ್ಲಿ 3, ಬಾಡಿಗೆ ಕಟ್ಟಡಗಳಲ್ಲಿ 283 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ(ಡಿ.20): ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಕಡೆಗೆ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಮಗುವಿನ ಕಲಿಕೆ ಆರಂಭದ ಮೊದಲ ದೇಗುಲವೆಂದೇ ಕರೆಯಲ್ಪಡುವ ಅಂಗನವಾಡಿ ಕೇಂದ್ರದ ಕಲಿಕಾ ತಳಹದಿ ವ್ಯವಸ್ಥೆ ಹತ್ತುಹಲವು ಸಮಸ್ಯೆಗಳಿಂದ ಕುಸಿಯುತ್ತಿದೆ.
ಜಿಲ್ಲೆಯಲ್ಲಿ 2,563 ಅಂಗನವಾಡಿ ಕೇಂದ್ರಗಳಿವೆ. 2171 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದ 392 ಕಟ್ಟಡಗಳಿಗೆ ಸ್ವಂತ ಸೂರಿಲ್ಲ. ಶಾಲಾ ಕಟ್ಟಡಗಳಲ್ಲಿ 109, ಸಮುದಾಯ ಭವನದಲ್ಲಿ 66, ಮಹಿಳಾ ಮಂಡಳಿ ಕಟ್ಟಡದಲ್ಲಿ 4, ಯುವಕರ ಸಂಘದ ಕಟ್ಟಡದಲ್ಲಿ 3, ಬಾಡಿಗೆ ಕಟ್ಟಡಗಳಲ್ಲಿ 283 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಶಿವಮೊಗ್ಗ: ಚಡ್ಡಿ ಜೇಬಿನೊಳಗೆ ಕೈ ಹಾಕಿ 37 ಸಾವಿರ ಎಗರಿಸಿದ ಚಾಲಾಕಿ ಕಳ್ಳ..!
ಬಾಡಿಗೆ ಕಟ್ಟಡಗಳಲ್ಲಿ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ದಾಸ್ತಾನು ಕೊಠಡಿ, ಕಾಂಪೌಂಡ್ ಮತ್ತಿತರ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಮಕ್ಕಳ ಕಲಿಕೆಗೆ ಭದ್ರ ಬುನಾದಿಯಾಗಬೇಕಾದ ಅಂಗನವಾಡಿ ಶಿಕ್ಷಣ ಅಭದ್ರ ಸ್ಥಿತಿಯಲ್ಲಿರುವುದು ಪೋಷಕರ ಕಳವಳಕ್ಕೆ ಕಾರಣವಾಗಿದೆ.
3ರಿಂದ 6 ವರ್ಷಗಳ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಲಿಕಾ ಸ್ನೇಹಿ ವಾತಾವರಣ ಅಗತ್ಯ. ಗಾಳಿ- ಬೆಳಕೇ ಇಲ್ಲದ ಬಾಡಿಗೆ ಕಟ್ಟಡಗಳ ಕತ್ತಲ ಕೋಣೆಯಲ್ಲಿ ಸಿಗುತ್ತಿರುವ ಶಿಕ್ಷಣ ಪುಟ್ಟ ಮಕ್ಕಳಿಗೆ ಉಸಿರುಗಟ್ಟಿಸುತ್ತಿದೆ. ಎಷ್ಟೋ ಅಂಗನವಾಡಿಗಳಲ್ಲಿ ಆಟಿಕೆಗಳನ್ನು ಮಕ್ಕಳಿಗೆ ಕೊಡದೇ, ಚೀಲಗಳಿಗೆ ಹಾಕಿ ಸಜ್ಜೆ ಮೇಲೆ ಇಟ್ಟಿದ್ದಾರೆ ಎಂಬುದು ಹಲವು ಪೋಷಕರ ದೂರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳು ₹4 ಸಾವಿರ ಅನುದಾನ ನೀಡುತ್ತಿದೆ. ಆದರೆ, ಕಳೆದ ಜುಲೈನಿಂದ ಸರ್ಕಾರ ಅನುದಾನ ಬಂದಿಲ್ಲ. ಕೆಲವು ಕಡೆಗಳಲ್ಲಿ ಬಾಡಿಗೆ ಪಾವತಿಸದ ಕಾರಣ ಜಾಗ ಖಾಲಿ ಮಾಡುವಂತೆ ಕಟ್ಟಡ ಮಾಲೀಕರು ಒಂದೆಡೆ ಒತ್ತಡ ಹೇರುತ್ತಿದ್ದಾರೆ. ಈಗ ಸರ್ಕಾರದಿಂದ ಅನುದಾನ ಬಂದಿದೆ ಎನ್ನುತ್ತಿದ್ದಾರೆ. ಪ್ರತಿ ತಿಂಗಳು ಬಾಡಿಗೆ ಕಟ್ಟದಿದ್ದರೆ ಕಟ್ಟಡ ಮಾಲೀಕರು ಸುಮ್ಮನಿರಲ್ಲ. ಹೀಗಾಗಿ, ಕೆಲವೊಮ್ಮೆ ನಾವು ಸಾಲ ಮಾಡಿ ಬಾಡಿಕೆ ಕಟ್ಟುತ್ತೇವೆ. ಕರೆಂಟ್ ಬಿಲ್ ಕಟ್ಟುವುದು ಗೋಳಾಗಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.
ಕೆಲವು ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲವಾಗಿವೆ. ಮಣ್ಣಿನಗೋಡೆ, ಮರದ ಮೇಲ್ಛಾವಣಿ, ಹೆಂಚು ಎಲ್ಲವೂ ಹಾನಿ ಗೀಡಾಗಿದೆ. ಸಿಡಿಪಿಒ, ಮೇಲ್ವಿಚಾರಕರು ಅಂಗನವಾಡಿಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸುತ್ತಿಲ್ಲ. ಇದನ್ನೆಲ್ಲ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳಿಗೆ ಅಂಗನವಾಡಿ ಕೇಂದ್ರಗಳ ಸುಧಾರಣೆಯ ಆಸಕ್ತಿಯಿಲ್ಲ. ಅಂಗನವಾಡಿ ಮಕ್ಕಳು ವೋಟ್ ಬ್ಯಾಂಕ್ ಆಗಿದ್ದರೆ, ಎಲ್ಲ ಸೌಲಭ್ಯ ದೊರಕುತ್ತಿತ್ತೇನೋ ಎಂದು ಪೋಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮೊದಲ ಮಂಗನ ಕಾಯಿಲೆ ಪತ್ತೆ: ಜನರಲ್ಲಿ ಆತಂಕ
ಬಾಡಿಗೆ ಹೆಚ್ಚಳ ಅಗತ್ಯ: ಅಧ್ಯಕ್ಷೆ
ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಬಿ.ಪ್ರೇಮ ಹೇಳುವಂತೆ, ಬಾಡಿಗೆ ಕಟ್ಟಡಕ್ಕೆ ಸರ್ಕಾರ ಪ್ರತಿ ತಿಂಗಳು ನೀಡುವ ಬಾಡಿಗೆ ದರ ಕಡಿಮೆ ಇದೆ. ನಗರದ ಪ್ರದೇಶದಲ್ಲಿ ₹4 ಸಾವಿರ ನೀಡುತ್ತಿದೆ. ಈ ದರಕ್ಕೆ ಸಿಗುವ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರಗಳು ನಡೆಯಬೇಕಾಗಿದೆ. ಹಲವು ಅಂಗನವಾಡಿ ಕೇಂದ್ರಗಳು ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿವೆ. ಆರಂಭದಿಂದಲೂ ಒಂದೇ ಬಾಡಿಗೆ ದರ ನೀಡುತ್ತಿದೆ. ಆದರೆ, ಬಾಡಿಗೆ ಕಟ್ಟಡ ಮಾಲೀಕರು ಪ್ರತಿವರ್ಷ ಬಾಡಿಗೆ ದರದಲ್ಲಿ ಹೆಚ್ಚಳ ಮಾಡುತ್ತಿದ್ದಾರೆ. ಇದು ಅಂಗನವಾಡಿ ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಬಾಡಿಗೆ ದರ ಹೆಚ್ಚಿಸಬೇಕು ಎನ್ನುತ್ತಾರೆ.
ಜಿಲ್ಲೆಯಲ್ಲಿ ಹೊಸದಾಗಿ 100 ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ನಗರದ ಹೆಚ್ಚಿನ ಅಂಗನವಾಡಿಗಳಿಗೆ ನಿವೇಶನದ ಕೊರತೆ ಇದೆ. ಶಾಲೆ, ಸಮುದಾಯ ಭವನಗಳಲ್ಲಿ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಅವುಗಳನ್ನು ನಡೆಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ನೀಡಿದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಶಿವಮೊಗ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ ತಿಳಿಸಿದ್ದಾರೆ.