ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಕೆಎಫ್‌ಡಿ ಪ್ರಕರಣ ಇದೀಗ ಜಿಲ್ಲೆಗೂ ಕಾಲಿಟ್ಟಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷದ ಮೊದಲ ಪ್ರಕರಣ ಕಾಣಿಸಿಕೊಂಡಿದೆ. 

ಶಿವಮೊಗ್ಗ (ಡಿ.16): ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಕೆಎಫ್‌ಡಿ ಪ್ರಕರಣ ಇದೀಗ ಜಿಲ್ಲೆಗೂ ಕಾಲಿಟ್ಟಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷದ ಮೊದಲ ಪ್ರಕರಣ ಕಾಣಿಸಿಕೊಂಡಿದೆ. ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಆರ್‌ಟಿಸಿಪಿಆರ್‌ನಲ್ಲಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ತಾಲೂಕಿನ ಕಾಡಂಚಿನ ಗ್ರಾಮವಾಗಿದ್ದು, ಈ ಹಿಂದೆಯು ಈ ಭಾಗದಲ್ಲಿ ಕೆಎಫ್‌ಡಿ ಪ್ರಕರಣಗಳು ಕಂಡುಬಂದಿವೆ.

ಕಳೆದ ತಿಂಗಳಷ್ಟೇ ಕೊಪ್ಪ ತಾಲೂಕಿನ ಗುಣವಂತೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿತ್ತು. ಮೊದಲನೆ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರಿಂದ ಅದನ್ನು ಆರೋಗ್ಯ ಇಲಾಖೆ ಪರಿಗಣಿಸಿರಲಿಲ್ಲ. ತೀರ್ಥಹಳ್ಳಿ ತಾಲೂಕಿನ ಅತ್ತಿಸರ ಗ್ರಾಮದ ಮಹಿಳೆಗೆ ಕೆಲ ದಿನಗಳಿಂದ ಶೀತ, ಜ್ವರ ಕಾಣಿಸಿಕೊಂಡಿತ್ತು. ಬುಧವಾರ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಅವರಿಗೆ ಕೆಎಫ್‌ಡಿ ಸೋಂಕು ಇರುವುದು ದೃಢಪಟ್ಟಿದೆ. ಶಿವಮೊಗ್ಗದಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭವಾಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ.

ಸಂಸದ ಪ್ರತಾಪ್‌ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ

ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಕೆಎಫ್‌ಡಿ ಪ್ರಕರಣ ತಗ್ಗಿದ್ದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಪ್ರತ್ರಿ ವರ್ಷವೂ ಮಲೆನಾಡಿಗರ ಜೀವ ಹಿಂಡುತ್ತಿರುವ ಮಂಗನ ಕಾಯಿಲೆಗೆ ಇಷ್ಟು ವರ್ಷವಾದರೂ ಸರ್ಕಾರದಿಂದ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಮಂಗನ ಕಾಯಿಲೆಗೆ ಓಬಿರಾಯನ ಕಾಲದ ಪದ್ಧತಿಯನ್ನೇ ನೆಚ್ಚಿಕೊಂಡು ಕುಳಿತಿದೆ. ಜಿಲ್ಲೆಯಲ್ಲಿ ಕೆಎಫ್‌ಡಿ ಕಾಣಿಸಿಕೊಳ್ಳುವ ಗ್ರಾಮಗಳಲ್ಲಿ ವ್ಯಾಕ್ಸಿನ್‌ ಹಾಕಲಾಗುತ್ತಿದ್ದು, ಕಳೆದ ಎರಡು ವರ್ಷದಿಂದ ಕೆಎಫ್‌ಡಿ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ವ್ಯಾಕ್ಸಿನ್‌ ನೀಡುವುದನ್ನು ನಿಲ್ಲಿಸಲಾಗಿದೆ.

ಶಿವಮೊಗ್ಗದಲ್ಲಿ ತಗ್ಗಿದ ಕೆಎಫ್‌ಡಿ ಪ್ರಕರಣ: ಜಿಲ್ಲೆಯಲ್ಲಿ ಈ ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಕಳೆದ ಎರಡು ವರ್ಷದಲ್ಲಿ ಕೆಎಫ್‌ಡಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. 2019ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್‌ಡಿಯಿಂದ ಸಾವನ್ನಪ್ಪಿದ್ದು ದೃಢಪಟ್ಟಿತ್ತು. 2020ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಎಫ್‌ಡಿ ಪೀಡಿತ ಪ್ರದೇಶದಲ್ಲಿ ಅಲರ್ಟ್‌: ಜಿಲ್ಲೆಯಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದ ಗ್ರಾಮಗಳಾದ ಸಾಗರ ತಾಲೂಕಿನ ಅರಳಗೋಡು ಸೇರಿದಂತೆ ಕಾರ್ಗಲ್‌, ತಾಳಗುಪ್ಪ, ಉಳ್ಳುರು, ಹೆಗ್ಗೋಡು, ತ್ಯಾಗರ್ತಿ, ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಕಟ್ಟೆಹಕ್ಲು, ಕನ್ನಂಗಿ, ದೇವಂಗಿ, ಅರಗ, ಅರಳಸುರಳಿ, ಹೊಸನಗರ ತಾಲೂಕಿನ ಕೊಡೂರು, ಮಾರುತಿಪುರ, ಹರಿದ್ರಾವತಿ, ಸಂಪೆಕಟ್ಟೆ, ನಿಟ್ಟೂರು ಸೇರಿದಂತೆ ಕೆಎಫ್‌ಡಿ ಪೀಡತ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಕೆಎಫ್‌ಡಿ ನಿಯಂತ್ರಣ ಹಿನ್ನೆಲೆ ತೆಗೆದುಕೊಳ್ಳಬೇಕಾದ ಹೆಚ್ಚಿನ ಕ್ರಮಗಳು, ಬೇಕಾಗುವ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಲು ಗ್ರಾಪಂ ಮಟ್ಟದ ಅಧಿಕಾರಿಗಳಿಂದ ಹಿಡಿದು ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ನಡೆಸಲಾಗುತ್ತಿದ್ದು, ಕೆಎಫ್‌ಡಿ ಪೀಡಿತ ತಾಲೂಕಗಳಿಗೆ ಡಿಎಂಪಿ ತೈಲ, ಕರಪತ್ರಗಳನ್ನು ಕಳುಹಿಸಿಕೊಡಲಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಕೆಲಸ: ಸಚಿವ ಜಮೀರ್‌

ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ೭೦೦ಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಒಬ್ಬರಿಗೆ ಮಾತ್ರ ಕೆಎಫ್‌ಡಿ ಪಾಸಿಟೀವ್ ಕಾಣಿಸಿದೆ. ರೋಗ ಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅವರಿಗೆ ಐದು ದಿನ ವೈದ್ಯರ ನಿಗಾದಲ್ಲಿ ಇರಿಸಿಕೊಂಡು ಅವರ ರಕ್ತ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗುವುದು. ಪಾಸಿಟಿವ್ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ.
-ಡಾ. ರಾಜೇಶ್ ಸುರಗಿಹಳ್ಳಿ, ಡಿಎಚ್ಒ ಶಿವಮೊಗ್ಗ