ಪಾಕಿಸ್ತಾನದ ಉಗ್ರ ಶಹಜಾದ್ ಭಟ್ಟಿ ಗ್ಯಾಂಗ್ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಬೀದರ್‌ನ ಭಾಲ್ಕಿ ತಾಲೂಕಿನ ವಿಶಾಲಕುಮಾರ ಮೇತ್ರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ಪರಿಶೀಲಿಸಿದಾಗ ದೇಶ ವಿರೋಧಿ ಚಟುವಟಿಕೆಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿಯ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.

ಬೀದರ್‌: ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಳ್ಳ ಸಾಗಣೆದಾರರ ಜೊತೆ ನೇರ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದಲ್ಲಿ ವಿಶಾಲಕುಮಾರ ಮೇತ್ರೆ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಭಾಲ್ಕಿ ಗ್ರಾಮೀಣ ವೃತ್ತದ ಸಿಪಿಐ ಹಣಮರಡ್ಡೆಪ್ಪ ನೇತೃತ್ವದ ಪೊಲೀಸ್‌ ತಂಡ, ಅಕ್ಟೋಬರ್‌ 2ರಂದು ಸಂಜೆ ಏಣಕೂರು ಗ್ರಾಮದ ಶಾಲೆಯ ಹಿಂಭಾಗದಲ್ಲಿದ್ದ ಮನೆಯ ಬಳಿ ಮಲಗಿದ್ದ ಆರೋಪಿಯನ್ನು ಬಂಧಿಸಿದ್ದು, ಬೆಂಗಳೂರಿನ ಅಡಿಷನಲ್‌ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ (ವಿಶೇಷ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆಘಾತಕಾರಿ ವಿಚಾರ ಬಹಿರಂಗ

ಬಿಬಿಎ ಪದವಿ ಅಪೂರ್ಣಗೊಳಿಸಿದ್ದ ಮೇತ್ರೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹಲವು ಕುತೂಹಲಕಾರಿ ಮತ್ತು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಆತನ ಮೊಬೈಲ್‌ ಫೋನ್‌ ವಶಪಡಿಸಿಕೊಂಡು ಪರಿಶೀಲಿಸಿದಾಗ ಉಗ್ರರ ಜೊತೆಗೆ ಆತ ನಂಟು ಹೊಂದಿರುವ ಅಂಶ ಸಂಪೂರ್ಣ ಬಯಲಾಗಿದೆ.

ಆತ ಇನ್‌ಸ್ಟಾಗ್ರಾಮ್‌ ಹಾಗೂ ವಾಟ್ಸಾಪ್‌ ಮೂಲಕ ಪಾಕಿಸ್ತಾನ ಮೂಲದ ಶಹಜಾದ್‌ ಭಟ್ಟಿ (ಭಾರತದ ಗೃಹ ಸಚಿವಾಲಯದಿಂದ ಘೋಷಿತವಾದ ಘೋಷಿತ ಭಯೋತ್ಪಾದಕ), ಆತನ ಸಹಚರರಾದ ರಾಣಾ ಹುನೇನ್‌, ನೋಮಿ ಖಾನ್‌ ಹಾಗೂ ಭಾರತದ ವಿವಿಧ ರಾಜ್ಯಗಳ ಶಸ್ತ್ರಾಸ್ತ್ರ ಏಜೆಂಟ್‌ಗಳೊಂದಿಗೆ ನಡೆಸಿದ್ದ ದೇಶ ವಿರೋಧಿ ಸಂಭಾಷಣೆಗಳು ಪತ್ತೆಯಾಗಿವೆ.

ಪ್ರಚೋದನಕಾರಿ ವೀಡಿಯೊಗಳು ಹಾಗೂ ಪೋಸ್ಟ್

‘Rahe Haq’ ಮತ್ತು ‘RANA BHAI 333’ ಎಂಬ ವಾಟ್ಸಾಪ್‌ ಚಾನೆಲ್‌ಗಳಲ್ಲಿ ಈತ ಸಕ್ರಿಯನಾಗಿದ್ದು, ದೇಶ ವಿರೋಧಿ, ಭಾರತದ ಸಮಗ್ರತೆ, ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ವೀಡಿಯೊಗಳು ಹಾಗೂ ಪೋಸ್ಟ್‌ಗಳನ್ನು ವೀಕ್ಷಿಸುತ್ತಿದ್ದುದು ದೃಢಪಟ್ಟಿದೆ. ಅಲ್ಲದೆ, ಡಿಸೆಂಬರ್ 2025ರಿಂದಲೇ ಈತ ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ ಮತ್ತು ಖರೀದಿಗಾಗಿ ಪಾಕಿಸ್ತಾನದ ನೆಟ್‌ವರ್ಕ್‌ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದ ಅಂಶ ಕೂಡ ಬಯಲಾಗಿದೆ.

ಈತನ ವಿರುದ್ಧ ಖಟಕಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಕಾನೂನುಬಾಹೀರ ಚಟುವಟಿಕೆಗಳ ತಡೆ ಕಾಯ್ದೆ-1967 ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌-2023) ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ನನಗೆ ಹೆಣ್ಣು ಹುಡುಕಿಕೊಡಿ ಸಿಎಂ ಸಾರ್‌: ಅರ್ಜಿ ಕೊಟ್ಟ ಯುವರೈತ, ಇದು 6ನೇ ಗ್ಯಾರಂಟಿ ಮಾಡಿ