ಪ್ರಜಾಸೇವಾ ಆಂದೋಲನದಲ್ಲಿ ಯುವಕನೊಬ್ಬ ರೈತರಿಗೆ ಹೆಣ್ಣು ಕೊಡಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾನೆ. ರೈತ ಯುವಕರಿಗೆ ವಧು ಸಿಗುತ್ತಿಲ್ಲ, ಇದನ್ನು 6ನೇ ಗ್ಯಾರಂಟಿಯಾಗಿ ಘೋಷಿಸಿ ಎಂದು ಆತ ಕೇಳಿಕೊಂಡಿದ್ದಾನೆ. ಈ ವಿಚಿತ್ರ ಬೇಡಿಕೆ ಕೇಳಿ ಸಭಾಂಗಣದಲ್ಲಿ ನಗು ಹೊಮ್ಮಿತು.

ಮೈಸೂರು: ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಯುವಕನೋರ್ವ ರೈತರಿಗೆ ಹಣ್ಣು ಕೊಡಿಸಿ ಎಂದು ಸಿಎಂಗೆ ಮನವಿ ಮಾಡಿದ ಪ್ರಸಂಗ ನಡೆಯಿತು.

ರೈತರಿಗೆ ಹೆಣ್ಣು ಸಿಗುತ್ತಿಲ್ಲ

ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ತರಿಕಲ್ಲು ಗ್ರಾಮದ ಶಿವಕುಮಾರ್‌ ಎಂಬ ಯುವಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಲಿಖಿತ ಅರ್ಜಿ ಸಲ್ಲಿಸಿ, ರೈತರಿಗೆ ಹೆಣ್ಣು ಸಿಗುತ್ತಿಲ್ಲ. ತಮ್ಮ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾಗಿ ಇದನ್ನು ಘೋಷಿಸಬೇಕು ಎಂದರು.

ಲಕ್ಷಾಂತರ ಮಂದಿ ರೈತರ ಜೀವನದ ಪ್ರಶ್ನೆ

ದಯವಿಟ್ಟು ನಮ್ಮ ರಾಜ್ಯದಲ್ಲಿ ಅದೇ ಸಮಸ್ಯೆಯಾಗಿದೆ. ಸುಮಾರು 35- 40 ವರ್ಷವಾದರೂ ಹೆಣ್ಣು ಸಿಗುತ್ತಿಲ್ಲ. ಅನೇಕ ರೈತ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ. ಮಠ, ಮನೆ ಎಲ್ಲಾ ಇದ್ದರೂ ಹೆಣ್ಣು ಕೊಡುವುದಿಲ್ಲ. ಇದು ಲಕ್ಷಾಂತರ ಮಂದಿ ರೈತರ ಜೀವನದ ಪ್ರಶ್ನೆ ಎಂದು ಅವಲತ್ತುಕೊಂಡರು.

ಕಷ್ಟಪಟ್ಟು ಬೆಳೆಯುವ ರೈತರಿಗೆ ಹೆಣ್ಣು ಇಲ್ಲ, ಇದು ನನ್ನ ಒಬ್ಬನ ಸಮಸ್ಯೆ ಅಲ್ಲ, ಇಡೀ ರಾಜ್ಯದ ಎಲ್ಲಾ ರೈತ ಮಕ್ಕಳ ಸಮಸ್ಯೆ. ರೈತರ ತಂದೆ ತಾಯಿ ಕೂಡ ಮಕ್ಕಳು ಮದುವೆ ಆಗಿಲ್ಲ ಎಂದು ಕೊರಗುತ್ತಿದ್ದಾರೆ ಎಂದರು.

ಈ ವೇಳೆ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿತು. ‘ಎಲ್ಲಾ ವಿಧಾನಸೌಧ ಕಚೇರಿಯಲ್ಲಿಯೇ ಇರಬೇಕೆಂದು ಕೇಳುತ್ತಾರಾ’ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು. ನಂತರ ‘ಬಿಡಪ್ಪ ಶಿವಕುಮಾರ್‌ ಪ್ರತ್ಯೇಕವಾಗಿ ಯೋಜನೆ ಮಾಡೋಣ’ ಎಂದರು.