Asianet Suvarna News Asianet Suvarna News

ರೈತರಿಗೆ ಸಂತಸದ ಸುದ್ದಿ: ಅಡಕೆಗೆ ಬಂಪರ್‌ ಬೆಲೆ..!

ಅಡಕೆಗೆ ಸಾರ್ವಕಾಲಿಕ ದಾಖಲೆಯ ರು. 500ರ ಧಾರಣೆ| ಅಡಕೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನ, ಇನ್ನೆರಡು ತಿಂಗಳು ಗರಿಷ್ಠ ಧಾರಣೆ ಸ್ಥಿರತೆ ಸಂಭವ| ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ-ಪೂರೈಕೆ ಕೊರತೆ, ಇಂದಿನಿಂದ ಕ್ಯಾಂಪ್ಕೋದಲ್ಲೂ 500 ರು. ದರ| 

All time record price for Areca Nut grg
Author
Bengaluru, First Published Feb 10, 2021, 10:12 AM IST

ಮಂಗಳೂರು(ಫೆ.10): ​ ಅಡಕೆ ಮಾರುಕಟ್ಟೆಯಲ್ಲಿ ಹಳೆ ಅಡಕೆ (ಬಿಳಿ) ದರ ನಾಗಾಲೋಟದಲ್ಲಿ ಸಾಗುತ್ತಿದೆ. ಈ ದರ ಸಾರ್ವಕಾಲಿಕ ದಾಖಲೆಯ 500 ರು. ಮೀರುವ ಹಂತ ತಲುಪಿದೆ. ಈಗಾಗಲೇ ಖಾಸಗಿ ಮಾರುಕಟ್ಟೆಯಲ್ಲಿ ಹಳೆ ಅಡಕೆ ಕೇಜಿಗೆ 500 ರು. ತಲುಪಿದೆ. ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕೂಡ ಫೆ.10ರಿಂದ ಹಳೆ ಅಡಕೆ ಖರೀದಿ ದರವನ್ನು 500 ರು. ಎಂದು ಘೋಷಿಸಿದೆ. ಇದು ಅಡಕೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಕೃಷಿ ಮಾರುಕಟ್ಟೆ ತಜ್ಞರ ಪ್ರಕಾರ, ಇನ್ನು ಕನಿಷ್ಠ 2 ತಿಂಗಳ ಕಾಲ ಅಡಕೆ ದರ 500 ರು. ಆಸುಪಾಸಿನಲ್ಲಿ ಇರಲಿದೆ. ಗಣನೀಯ ಪ್ರಮಾಣದಲ್ಲಿ ಅಡಕೆ ಧಾರಣೆ ಇಳಿಕೆಯಾಗುವ ಸಂಭವ ಇಲ್ಲ ಎನ್ನುತ್ತಾರೆ. ಈ ಧಾರಣೆ ಅಡಕೆ ಬೆಳೆಗಾರರಿಗೆ ವರವಾಗಿ ಪರಿಣಮಿಸಿದರೂ, ಈ ಬಾರಿ ಅಡಕೆ ಫಸಲು ಪ್ರಮಾಣ ಶೇ.25ರಷ್ಟುಕಡಿಮೆಯಾಗಿದೆ. ಹಾಗಾಗಿ ಧಾರಣೆ ಏರಿಕೆಯ ಪ್ರಯೋಜನ ಎಲ್ಲ ಬೆಳೆಗಾರರಿಗೆ ತಲುಪುವುದು ಸಂದೇಹ. ಇದೇ ರೀತಿ ಕ್ಯಾಂಪ್ಕೋ ಸಹಿತ ಅಡಕೆ ಖರೀದಿದಾರರಲ್ಲಿ ಅಡಕೆ ದಾಸ್ತಾನು ಅಷ್ಟಾಗಿ ಇಲ್ಲ. ಆದರೆ ಉತ್ತರ ಭಾರತದಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಅಡಕೆ ದಾಸ್ತಾನು ಇಲ್ಲದೆ ಪೂರೈಕೆæ ಕುಂಠಿತವಾಗುತ್ತಿದೆ.

ಏನಿದು ಧಾರಣೆ ಏರುಗತಿ?:

ಕೊರೋನಾ ವೇಳೆಗೆ ಪಶ್ಚಿಮ ಬಂಗಾಳ, ನೇಪಾಳ, ಬಾಂಗ್ಲಾ, ಬರ್ಮಾ ಗಡಿ ಭಾಗಗಳಲ್ಲಿ ಅತ್ಯಂತ ಕಟ್ಟುನಿಟ್ಟು ಕ್ರಮಕ್ಕೆ ಮುಂದಾಗಿರುವುದರಿಂದ ಕಳ್ಳಮಾರ್ಗದಲ್ಲಿ ಭಾರತಕ್ಕೆ ಅಡಕೆ ಆಮದು ಆಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಹೊಸ ಅಡಕೆ ಬೆಳೆ ಶೇ.25ರಷ್ಟು ಕುಸಿತ ಕಂಡಿದೆ. ಒಂದು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ 400 ರು. ತಲುಪಿದಾಗ ಬಹುತೇಕ ಮಂದಿ ದಾಸ್ತಾನು ಇರಿಸಿದ ಹಳೆ ಅಡಕೆಯನ್ನು ಮಾರಾಟ ಮಾಡಿದ್ದರು. ಹೊಸ ಅಡಕೆಗೆ ಈಗ ಕಿಲೋಗೆ 415 ರು. ದರ ಇದೆ. ಆದರೆ ಇನ್ನಷ್ಟೆಒಣಗಿದ ಬಳಿಕ ಹೊಸ ಅಡಕೆ ಮಾರುಕಟ್ಟೆಪ್ರವೇಶ ಮಾಡಬೇಕಾಗಿದೆ. ಹಳೆ ಮತ್ತು ಹೊಸ ಅಡಕೆ ನಡುವೆ 75 ರು. ವರೆಗೆ ಅಂತರ ತಲುಪಿದೆ. ಬೆಳೆಗಾರರೂ ಅಡಕೆಯನ್ನು ನಿಯಮಿತವಾಗಿ ಮಾರುಕಟ್ಟೆಗೆ ಬಿಡದೇ ಇರುವುದು ಕೂಡ ಅಡಕೆ ಧಾರಣೆ ಏರುಗತಿ ಪಡೆಯಲು ಕಾರಣವಾಗಿದೆ ಎನ್ನುವುದು ಮಾರುಕಟೆ ತಜ್ಞರ ಅಂಬೋಣ.

'ಅಡಕೆ ಮಾದಕ ವಸ್ತುವೇ ಅಲ್ಲ' : ಡ್ರಗ್ಸ್ ಪಟ್ಟಿಯಿಂದ ಹೊರಕ್ಕೆ

ಶೇ.50 ತಲುಪಿದ ಬೇಡಿಕೆ:

ಈಗ ಧಾರಣೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಡಕೆ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಉತ್ತರ ಭಾರತದಲ್ಲಿ ಅಡಕೆಗೆ ಗರಿಷ್ಠ ಬೇಡಿಕೆ ಬರುತ್ತಿದೆ. ಇದು ಎಲ್ಲಿವರೆಗೆ ತಲುಪಿದೆ ಎಂದರೆ, ಶೇ.50ರಷ್ಟುಬೇಡಿಕೆ ಉತ್ತರ ಭಾರತದಿಂದ ಇದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಅಡಕೆ ಪೂರೈಸಲು ಇಲ್ಲಿ ದಾಸ್ತಾನು ಇಲ್ಲ. ಬೆಳೆಗಾರರು ಕೂಡ ಅಡಕೆಯನ್ನು ಮಾರುಟ್ಟೆಗೆ ತರುತ್ತಿಲ್ಲ.
ಹಳೆ ಅಡಕೆಗೆ ದರ ಏರುಗತಿಯಲ್ಲಿ ಇರುವುದರಿಂದ ಉತ್ತರ ಭಾರತದಲ್ಲೂ ಹಳೆ ಅಡಕೆ ದಾಸ್ತಾನು ಇರಿಸಿಲ್ಲ. ಈಗ ಹಳೆ ಅಡಕೆಯೂ ಸಿಗುತ್ತಿಲ್ಲ, ಹೊಸ ಅಡಕೆಯೂ ಬರುತ್ತಿಲ್ಲ. ಇದರಿಂದ ಸಹಜವಾಗಿ ಅಡಕೆಗೆ ದರ ಏರಿಕೆ ಆಗಿದೆ ಎನ್ನುತ್ತಾರೆ ಕ್ಯಾಂಪ್ಕೋ ಅಧಿಕಾರಿಗಳು.

ಇನ್ನಷ್ಟು ಕಾಲ ದರ ಮುಂದುವರಿಕೆ?!

ಮಾರುಕಟ್ಟೆ ತಜ್ಞರ ಪ್ರಕಾರ ಈಗ ಏರಿಕೆಯಾಗಿರುವ ಅಡಕೆ ದರ ಇನ್ನಷ್ಟುಕಾಲ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ. ಹಾಗಾದರೆ ಈ ಬಾರಿಯ ದರ ಏರಿಕೆ ಅಡಕೆ ಬೆಳೆಗಾರರಿಗೆ ಶುಕ್ರದೆಸೆ ತಂದೊಡ್ಡಿದಂತೆ.
ಕಳೆದ ಎರಡು ವರ್ಷಗಳಿಂದ ಅಡಕೆ ಫಸಲು ಇಳಿಮುಖ ಕಾಣುತ್ತಿದೆ. ಈ ಬಾರಿಯೂ ಅಡಕೆ ಫಸಲು ಕಡಿಮೆಯೇ. ಅಡಕೆ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಯಥಾಸ್ಥಿತಿಯಲ್ಲಿದೆ. ಅಡಕೆ ಧಾರಣೆ 350 ರು. ತಲುಪಿದಾಗಲೇ ಬೆಳೆಗಾರರು ಸ್ವಾಭಾವಿಕವಾಗಿ ಮಾರಾಟ ಮಾಡಲು ಆರಂಭಿಸಿದ್ದರು. ಈಗ ಏನಿದ್ದರೂ ಅಲ್ಪಸ್ವಲ್ಪ ದಾಸ್ತಾನು ಹೊಂದಿದವರಿದ್ದರೆ, ಅವರದ್ದು ಮತ್ತಷ್ಟುದರ ಏರಿಕೆಯ ಬಗ್ಗೆ ಕಾದು ನೋಡು ತಂತ್ರ. ಮ್ಯಾನ್ಮಾರ್‌ ರಾಜಕೀಯ ಬೆಳವಣಿಗೆ ಕೂಡ ಅಡಕೆ ಆಮದು ಪೂರ್ತಿ ಸ್ಥಗಿತಗೊಳ್ಳಲು ಕಾರಣವಾಗಿದೆ.

ಅಡಕೆಗೆ ಡ್ರಗ್ಸ್‌ ಪಟ್ಟ ಕಟ್ಟಿದ್ದಕ್ಕೆ ತೀವ್ರ ಆಕ್ರೋಶ: ಕ್ವಿಂಟಲ್‌ ಬೆಲೆ 5 ಸಾವಿರ ರು. ಕುಸಿತ!

ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇನ್ನಷ್ಟುಕಾಲ ಧಾರಣೆ ಇದೇ ಪ್ರಕಾರದಲ್ಲಿ ಏರುಗತಿಯಲ್ಲಿ ಇರಬಹುದು. ಒಂದು ವೇಳೆ ಗಡಿಯಲ್ಲಿ ಸಡಿಲಗೊಂಡರೆ, ಆಗ ಮಾತ್ರ ಆಮದು ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಧಾರಣೆ ಇಳಿಮುಖವಾಗಲೂ ಬಹುದು ಎನ್ನುತ್ತಾರೆ ಕೃಷಿ ಮಾರುಕಟ್ಟೆತಜ್ಞ ಡಾ.ವಿಘ್ನೇಶ್ವರ ವರ್ಮುಡಿ.

ಖಾಸಗಿ ಮಾರ್ಕೆಟ್‌ನಲ್ಲಿ ರು. 500 ದಾಟಿದ ದರ!!

ಖಾಸಗಿ ಮಾರುಕಟ್ಟೆಯಲ್ಲಿ ಅಡಕೆ ಮಾರಾಟ ದರ ಮಂಗಳವಾರ 500 ರು. ದಾಟಿಗೆ. ಸುಳ್ಯದ ಐವರ್ನಾಡು, ಬೆಳ್ಳಾರೆ, ಉಪ್ಪಿನಂಗಡಿ ಖಾಸಗಿ ಖರೀದಿದಾರರು ಅಡಕೆ ಕಿಲೋಗೆ 500 ರು.ನಿಂದ 510 ರು. ವರೆಗೆ ಖರೀದಿಸಿದ್ದಾರೆ. ಹೊಸ ಅಡಕೆಗೆ ಕಿಲೋಗೆ 400 ರು.ನಿಂದ 430 ರು. ವರೆಗೆ ತಲುಪಿದೆ. ಕ್ಯಾಂಪ್ಕೋದಲ್ಲಿ ಬುಧವಾರ ಹಳೆ ಅಡಕೆ ಡಬ್ಬಲ್‌ ಚೋಲ್‌ ಕಿಲೋಗೆ 505 ರು., ಸಿಂಗಲ್‌ ಚೋಲ್‌ಗೆ 500 ರು., ಹೊಸತಕ್ಕೆ 415 ರು. ದರ ನಿಗದಿಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಸ್ವದೇಶಿ ಮಂತ್ರವೇ ಅಡಕೆ ಧಾರಣೆ ಜಿಗಿಯಲು ಕಾರಣವಾಗಿದೆ. ವಿದೇಶಿ ಅಡಕೆ ಆಮದು ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ದರ ಏರಿಕೆ ಕಾಣುತ್ತಿದೆ. ಆಮದು ನೀತಿ ಸಡಿಲಗೊಳ್ಳದಿದ್ದರೆ, ಇದು ಕೆಲವು ಸಮಯ ವರೆಗೆ ಮುಂದುವರಿಯಬಹುದು ಎಂದು ಕೃಷಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ತಿಳಿಸಿದ್ದಾರೆ. 

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದೇಶದ ಗಡಿ ಭಾಗಗಳಿಂದ ಅಡಕೆ ಆಮದು ಆಗುತ್ತಿಲ್ಲ. ಅಲ್ಲದೆ ಉತ್ತರ ಭಾರತದಲ್ಲಿ ಅಡಕೆಗೆ ಹೇರಳ ಬೇಡಿಕೆ ವ್ಯಕ್ತವಾಗಿದೆ. ಇವು ಅಡಕೆ ಧಾರಣೆ ಕಿಲೋಗೆ 500 ರು. ತಲುಪಲು ಸಾಧ್ಯವಾಗಿದೆ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios