ಫ್ರಾನ್ಸ್‌ನ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್' ಸಹಭಾಗಿತ್ವದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಘಟಕ ಕೋಲಾರದಲ್ಲಿ ಚಾಲನೆಗೊಂಡಿದೆ. ಪ್ರಧಾನಿ ಮೋದಿಯಿಂದ ಉದ್ಘಾಟನೆಗೊಂಡ ಈ ಘಟಕ, ಮುಂದಿನ 20 ವರ್ಷಗಳಲ್ಲಿ 500 ಹೆಲಿಕಾಪ್ಟರ್‌ ತಯಾರಿಸುವ ಗುರಿ ಹೊಂದಿದೆ.

ಕೋಲಾರ (ಫೆ.17): ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಫ್ರಾನ್ಸ್ ಮೂಲದ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್' (ಟಿಎಎಸ್ಎಲ್) ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿರುವ ದೇಶದ ಪ್ರಪ್ರಥಮ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕಕ್ಕೆ ಇಂದು ಚಾಲನೆ ದೊರೆತಿದೆ. ಈ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 500 ಹೆಲಿಕಾಪ್ಟರ್‌ಗಳು ಸಿದ್ಧವಾಗಲಿದ್ದು, ಕರ್ನಾಟಕವು ಜಾಗತಿಕ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಮೋದಿ-ಮ್ಯಾಕ್ರೋನ್ ವರ್ಚುವಲ್ ಚಾಲನೆ:

ಮಂಗಳವಾರ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುವಲ್ ಮೂಲಕ ಘಟಕವನ್ನು ಉದ್ಘಾಟಿಸಿದರು. ವೇಮಗಲ್ ಘಟಕದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಮತ್ತು ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಉಪಸ್ಥಿತರಿದ್ದರು.

ದಾಖಲೆ ಅವಧಿಯಲ್ಲಿ ಯೋಜನೆ ಪೂರ್ಣ:

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ, 'ನಾನು ಕೈಗಾರಿಕಾ ಸಚಿವನಾದ ಮೇಲೆ ಈ ಯೋಜನೆಗೆ 17 ಎಕರೆ ಜಾಗವನ್ನು ನೀಡಲಾಗಿತ್ತು. ಕೇವಲ ಒಂದೂವರೆ ವರ್ಷದ ದಾಖಲೆ ಅವಧಿಯಲ್ಲಿ ಈ ಬೃಹತ್ ಘಟಕವು ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಲಾಖೆಗಳ ನಡುವಿನ ಸಮನ್ವಯ ಮತ್ತು ಅತ್ಯುತ್ತಮ ಮೂಲಸೌಕರ್ಯದಿಂದಾಗಿ ಈ ಚಾರಿತ್ರಿಕ ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಂಡಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

ಜಗತ್ತಿನ 4ನೇ ಅತಿದೊಡ್ಡ ಘಟಕ:

ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ನಂತರ ಜಗತ್ತಿನ ನಾಲ್ಕನೇ ಎಚ್125 (H125) ಹೆಲಿಕಾಪ್ಟರ್ ಅಂತಿಮ ಜೋಡಣೆ ಘಟಕ (Final Assembly Line) ಕರ್ನಾಟಕದಲ್ಲಿ ಆರಂಭವಾಗಿದೆ. ಇದು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿ ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗುವುದು ಮತ್ತು ಹಂತ ಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸಿ 500ರ ಗಡಿ ತಲುಪುವ ಗುರಿ ಹೊಂದಲಾಗಿದೆ.

ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿ:

ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಕರ್ನಾಟಕದ ಎಂಜಿನಿಯರಿಂಗ್ ಪರಿಣತಿಯನ್ನು ಗುರುತಿಸಿ ಈ ಯೋಜನೆಯನ್ನು ಇಲ್ಲಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ಘಟಕದಿಂದ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್ ಮತ್ತು ಎಂಜಿನ್ ಬಿಡಿಭಾಗಗಳ ತಯಾರಿಕಾ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (SME) ಹೆಚ್ಚಿನ ಅವಕಾಶಗಳು ಸಿಗಲಿವೆ. ಇದು ರಾಜ್ಯದ ಯುವಜನತೆಗೆ ಆಧುನಿಕ ತಂತ್ರಜ್ಞಾನ ವಲಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ವಿವರಿಸಿದರು.

ಏರ್ ಬಸ್ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಶೇ. 80 ರಷ್ಟು ಪಾಲು ಹೊಂದಿದ್ದು, ರಾಜ್ಯದಲ್ಲಿ ಇದರ ಉತ್ಪಾದನೆ ಆರಂಭವಾಗುತ್ತಿರುವುದು ರಕ್ಷಣಾ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ. ಕರ್ನಾಟಕ ಸರ್ಕಾರವು ಈ ಕ್ಷೇತ್ರದಲ್ಲಿ ಕೇಂದ್ರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಪಾಟೀಲ ಪುನರುಚ್ಚರಿಸಿದರು.