- Home
- Karnataka Districts
- ಮಗಳನ್ನ ಲವ್ ಮ್ಯಾರೇಜ್ ಮಾಡಿಕೊಂಡ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಂಡ್ಯದ ಮಾವ! ಪುತ್ರಿ ಬದುಕಿಗೆ ಬೆಂಕಿಯಿಟ್ಟ ಅಪ್ಪ!
ಮಗಳನ್ನ ಲವ್ ಮ್ಯಾರೇಜ್ ಮಾಡಿಕೊಂಡ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಂಡ್ಯದ ಮಾವ! ಪುತ್ರಿ ಬದುಕಿಗೆ ಬೆಂಕಿಯಿಟ್ಟ ಅಪ್ಪ!
ಮಂಡ್ಯದಲ್ಲಿ, ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾದ ಮಗಳ ಮೇಲಿನ ಕೋಪದಿಂದ ತಂದೆಯೊಬ್ಬರು ಅಳಿಯನ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಮನೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.

ಮಂಡ್ಯ (ಫೆ.21): ಪ್ರೀತಿ-ಪ್ರೇಮದ ವಿಚಾರವು ಜಿಲ್ಲೆಯಲ್ಲಿ ರಕ್ತಪಾತ ಮತ್ತು ಆಸ್ತಿ ನಾಶಕ್ಕೆ ಕಾರಣವಾಗುತ್ತಿರುವ ಘಟನೆಗಳು ನಿಲ್ಲುತ್ತಿಲ್ಲ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನು ಮದುವೆಯಾದ ಮಗಳ ನಡೆಯಿಂದ ಆಕ್ರೋಶಗೊಂಡ ತಂದೆಯೊಬ್ಬರು, ಸಾಕ್ಷಾತ್ ತನ್ನ ಅಳಿಯನ ಮನೆಗೇ ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ವಿನೋದ್ ಮತ್ತು ಪಕ್ಕದ ಮನೆಯ ಯುವತಿ ಕಾವ್ಯ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಕಾವ್ಯಳ ಕುಟುಂಬದವರು, ವಿಶೇಷವಾಗಿ ಆಕೆಯ ತಂದೆ ಚನ್ನೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮನೆಯವರ ಆಕ್ಷೇಪವನ್ನು ಲೆಕ್ಕಿಸದ ಜೋಡಿ, ಕಳೆದ ಗುರುವಾರ (ಫೆಬ್ರವರಿ 19) ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದರು.
ತನ್ನ ಮಗಳು ತನ್ನಿಚ್ಛೆಗೆ ವಿರುದ್ಧವಾಗಿ ವಿನೋದ್‌ನನ್ನು ಮದುವೆಯಾದದ್ದು ಚನ್ನೇಗೌಡರ ಕೋಪವನ್ನು ನೆತ್ತಿಗೇರಿಸಿತ್ತು. ಇದೇ ದ್ವೇಷದಲ್ಲಿ ಇಂದು ಬೆಳಿಗ್ಗೆ ವಿನೋದ್ ಅವರ ಮನೆಗೆ ನುಗ್ಗಿದ ಚನ್ನೇಗೌಡ, ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಇಡೀ ಮನೆಯನ್ನು ಆವರಿಸಿಕೊಂಡಿದೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ವೇಳೆ ಮನೆಯೊಳಗೆ ಯಾರಾದರೂ ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ಬೆಂಕಿಯ ಅಬ್ಬರಕ್ಕೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬೆಲೆಬಾಳುವ ಬಟ್ಟೆಗಳು, ವರ್ಷಕ್ಕೆ ಶೇಖರಿಸಿಟ್ಟಿದ್ದ ಅಡುಗೆ ಸಾಮಾಗ್ರಿಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬಡ ಕುಟುಂಬದ ವಿನೋದ್ ಈಗ ಬೀದಿಗೆ ಬೀಳುವಂತಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು, ಗಾಯದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರೀತಿ ಮತ್ತು ಮದುವೆಯಂತಹ ವೈಯಕ್ತಿಕ ನಿರ್ಧಾರಗಳಿಗೆ ಈ ರೀತಿ ಹಿಂಸಾತ್ಮಕ ರೂಪ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

