ಕೋಲಾರದ ಮೆಟ್ಟುಬಂಡೆ ಬಳಿ ನಡೆದ ಯಲ್ಲೇಶ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರೋಪಿ ಬಿಂದು ಕುಮಾರ್, ತನ್ನ ತಂಗಿಗೆ ಯಲ್ಲೇಶ್ ಕಿರುಕುಳ ನೀಡುತ್ತಿದ್ದ ಕಾರಣ, ತಾನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದಾನೆ.  

ಕೋಲಾರ: ಜಿಲ್ಲೆಯ ಮೆಟ್ಟುಬಂಡೆ ಬಳಿ ಸಂಭವಿಸಿದ ಭೀಕರ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಜನವರಿ 27ರಂದು ಯಲ್ಲೇಶ್ (41) ಎಂಬ ವ್ಯಕ್ತಿಯನ್ನು ನಿರ್ದಯವಾಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಂಕಿತ ಆರೋಪಿಯೊಬ್ಬ ಸ್ವತಃ ಪ್ರತ್ಯಕ್ಷವಾಗಿ ತಪ್ಪೊಪ್ಪಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ನರಸಾಪುರ ನಿವಾಸಿ ಸಂತೋಷ್ ಅವರ ಪುತ್ರ ಬಿಂದು ಕುಮಾರ್ ಎಂಬಾತನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಬಹಿರಂಗ ಹೇಳಿಕೆ ನೀಡಿದ್ದಾನೆ. “ಯಲ್ಲೇಶ್‌ನ ಕೊಲೆ ಮಾಡಿದ್ದು ನಾನೇ. ನನ್ನೊಂದಿಗೆ ಅಕ್ಷಯ್ ಮತ್ತು ಅಕ್ಷಯ್ ಅವರ ಸಹೋದರ ಕೂಡ ಇದ್ದರು” ಎಂದು ಬಿಂದು ಕುಮಾರ್ ಹೇಳಿಕೊಂಡಿದ್ದಾನೆ.

ತಂದೆ ಭಾಗಿಯಾಗಿಲ್ಲವೆಂದು ಸ್ಪಷ್ಟನೆ:

ಈ ಕೊಲೆ ಪ್ರಕರಣಕ್ಕೆ ತನ್ನ ತಂದೆ ಸಂತೋಷ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ ಬಿಂದು ಕುಮಾರ್, “ನನ್ನ ತಂದೆ ಸಂತೋಷ್ ಕಳೆದ ಎಂಟು ವರ್ಷಗಳಿಂದಲೇ ಮನೆ ಬಿಟ್ಟು ದೂರವಾಗಿದ್ದಾರೆ. ಈ ಘಟನೆಯಲ್ಲಿ ಅವರು ಭಾಗಿಯಾಗಿಲ್ಲ” ಎಂದು ಹೇಳಿದ್ದಾನೆ.

ತಪ್ಪೊಪ್ಪಿಗೆಯಲ್ಲಿ ಆರೋಪಿ ಬಿಂದು ಕುಮಾರ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ. “ಯಲ್ಲೇಶ್ ನನ್ನ ತಂಗಿಯ ಬಗ್ಗೆ ಅತ್ಯಂತ ಕೆಟ್ಟ ಹಾಗೂ ಅವಾಚ್ಯವಾಗಿ ಮಾತನಾಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಈ ವಿಷಯವಾಗಿ ಐದು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ” ಎಂದು ಆರೋಪಿಸಿದ್ದಾನೆ.

ಇದಲ್ಲದೆ, “ಯಲ್ಲೇಶ್ ನನ್ನ ಮೇಲೆ ಹಲ್ಲೆ ಮಾಡಿಸಿದ್ದ. ನಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ನೀಡಿದ್ದ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೇ ಆತ ಬೆದರಿಕೆ ಹಾಕಿದ್ದಾನೆ. ನಮ್ಮ ಜೀವಕ್ಕೆ ಅಪಾಯವಿದೆ ಎಂಬ ಮಾಹಿತಿ ನನಗೆ ಮುಂಚಿತವಾಗಿಯೇ ಲಭಿಸಿತ್ತು” ಎಂದು ಬಿಂದು ಕುಮಾರ್ ಹೇಳಿದ್ದಾನೆ.

ಕೊಲೆ ಮಾಡಿದ್ದು ಇದಕ್ಕಂತೆ!

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, “ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನು ಮೊದಲು ಕ್ರಮ ಕೈಗೊಳ್ಳಬೇಕಾಯಿತು. ಅದಕ್ಕಾಗಿ ಕೊಲೆ ಮಾಡಲು ತೀರ್ಮಾನಿಸಿದೆ” ಎಂದು ಆತ ಹೇಳಿಕೊಂಡಿದ್ದಾನೆ. ಜೊತೆಗೆ, “ಯಲ್ಲೇಶ್‌ನನ್ನು ಕಲ್ಲಿನಿಂದ ಅಲ್ಲ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಮಚ್ಚಿನೊಂದಿಗೆ ನಾವೇ ನ್ಯಾಯಾಲಯದ ಎದುರು ಶರಣಾಗುತ್ತೇವೆ” ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾನೆ.

ಇನ್ನೊಂದು ಮಹತ್ವದ ಅಂಶವೆಂದರೆ, ಯಲ್ಲೇಶ್, ಶಂಕಿತ ಆರೋಪಿ ಸಂತೋಷ್ ಅವರ ಪತ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದನೆಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿಯೇ ಕುಟುಂಬದೊಳಗಿನ ವೈಷಮ್ಯ ಮತ್ತು ದ್ವೇಷ ಈ ಭೀಕರ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಮೊದಲು ಯಲ್ಲೇಶ್ ಕೊಲೆ ಮಾಡಿಲ್ಲ ಎಂದು ತಂದೆ ಸಂತೋಷ್ ಸ್ಪಷ್ಟನೆ ನೀಡಿದ ನಂತರವೇ, ಅವರ ಪುತ್ರ ಬಿಂದು ಕುಮಾರ್ ಸ್ವತಃ ಮುಂದೆ ಬಂದು ಕೊಲೆ ಆರೋಪವನ್ನು ಒಪ್ಪಿಕೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪೊಪ್ಪಿಗೆ ವೀಡಿಯೋವನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಈ ಘಟನೆ ಭಾರೀ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.