ಸಿಎಂ ಬದಲಾವಣೆ ಚರ್ಚೆಯ ನಡುವೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ಡಿಕೆಶಿ ವ್ಯಂಗ್ಯ ಹಾಗೂ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ನಾಯಕತ್ವ ಬದಲಾವಣೆ ವದಂತಿಗಳನ್ನು ಮಾಧ್ಯಮ ಸೃಷ್ಟಿ ಎಂದರು.

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸೃಷ್ಟಿಸಿರುವ ಸಂಚಲನದ ನಡುವೆಯೇ, ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ವಿಜಯಪುರದಲ್ಲಿ ಇಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ಯತೀಂದ್ರ, ಎಂಬಿ ಪಾಟೀಲ್ ಹೈಕಮಾಂಡ್ ಅಲ್ಲ

'ನಮ್ಮ ತಂದೆಯೇ ಐದು ವರ್ಷ ಸಿಎಂ ಆಗಿರುತ್ತಾರೆ' ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಎಂ.ಬಿ. ಪಾಟೀಲ್, 'ಇಲ್ಲಿ ಯತೀಂದ್ರ ಅಥವಾ ಎಂ.ಬಿ. ಪಾಟೀಲ್ ಇಂಪಾರ್ಟೆಂಟ್ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತ್ರ ಸುಪ್ರೀಂ. ಸ್ವತಃ ಸಿದ್ದರಾಮಯ್ಯನವರೇ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹಲವು ಬಾರಿ ಹೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಏನು ತೀರ್ಮಾನಿಸುತ್ತಾರೋ ಅದೇ ಅಂತಿಮ' ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಟೀಕೆಗೆ ತಿರುಗೇಟು: ಯಡಿಯೂರಪ್ಪ ಅಧಿಕಾರಾವಧಿ ನೆನಪಿಸಿದ ಸಚಿವರು

ಕಾಂಗ್ರೆಸ್ ನವರು ಗದ್ದುಗೆಗಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಬಿಜೆಪಿಯ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಂದ ನಾವು ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಆಡಳಿತಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದವರು. ಯಡಿಯೂರಪ್ಪನವರನ್ನು ಒಂದು ಟರ್ಮ್ ಪೂರ್ಣಗೊಳಿಸಲು ಬಿಡಲಿಲ್ಲ. ಆದರೆ, ಸಿದ್ದರಾಮಯ್ಯನವರು ಈ ಹಿಂದೆ ಐದು ವರ್ಷ ಪೂರೈಸಿ, ಈಗ ಮತ್ತೆ ಎರಡೂವರೆ ವರ್ಷ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ' ಎಂದು ತಿರುಗೇಟು ನೀಡಿದರು.

ಯತೀಂದ್ರ ಹೈಕಮಾಂಡ್ ಎಂಬ ಡಿಕೆಶಿ ವ್ಯಂಗ್ಯದ ಕುರಿತು ಪ್ರತಿಕ್ರಿಯೆ

ಡಿ.ಕೆ. ಶಿವಕುಮಾರ್ ಅವರು ಯತೀಂದ್ರ ಅವರನ್ನೇ ಹೈಕಮಾಂಡ್ ಎಂದು ವ್ಯಂಗ್ಯವಾಡಿರುವ ವಿಚಾರಕ್ಕೆ ಉತ್ತರಿಸಿದ ಪಾಟೀಲ್, 'ಯತೀಂದ್ರ ಅವರು ಒಂದು ಹೇಳಿಕೆ ಕೊಟ್ಟ ಮೇಲೆ ಡಿಕೆಶಿ ಅವರು ಹಾಗೆ ಹೇಳಿರಬಹುದು. ಆದರೆ ನಮ್ಮ ಪಾಲಿಗೆ ದೆಹಲಿಯ ನಾಯಕರೇ ಹೈಕಮಾಂಡ್. ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ದಿನಾಂಕಗಳ ಬಗ್ಗೆ ಹರಡಿರುವ ವದಂತಿಗಳನ್ನು ತಳ್ಳಿಹಾಕಿದ ಎಂ.ಬಿ. ಪಾಟೀಲ್, ಸಂಕ್ರಾಂತಿ ಆಯ್ತು, ದೀಪಾವಳಿ ಆಯ್ತು, ಈಗ ಶಿವರಾತ್ರಿಗೆ ಬದಲಾವಣೆ ಆಗಲಿದೆ ಎನ್ನುವುದೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿ. ಅಂತಹ ಯಾವುದೇ ಬೆಳವಣಿಗೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

YouTube video player