Kerur Riot: ಗುಂಪು ಘರ್ಷಣೆಯಲ್ಲಿನ ಗಾಯಾಳುಗಳಿಗೆ ಬಸವಣ್ಣನ ವಚನ ಹೇಳಿದ ಎಡಿಜಿಪಿ ಅಲೋಕ್ ಕುಮಾರ್
ಕೆರೂರ ಗುಂಪು ಘರ್ಷಣೆ ಪ್ರಕರಣ ಹಿನ್ನೆಲೆ ಬಾಗಲಕೋಟೆಯ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗಳಿರುವ ಆಸ್ಪತ್ರೆಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿ, ಬಸವಣ್ಣನವರ ವಚನ ಹೇಳುವ ಮೂಲಕ ಪರಿವರ್ತನೆ ಮಾಡಲು ಮುಂದಾದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.21): ಕೆರೂರ ಗುಂಪು ಘರ್ಷಣೆ ಪ್ರಕರಣ ಹಿನ್ನೆಲೆ ಬಾಗಲಕೋಟೆಯ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗಳಿರುವ ಆಸ್ಪತ್ರೆಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿ, ಬಸವಣ್ಣನವರ ವಚನ ಹೇಳುವ ಮೂಲಕ ಪರಿವರ್ತನೆ ಮಾಡಲು ಮುಂದಾದರು. ಹೌದು! ಎಡಿಜಿಪಿ ಅಲೋಕ್ ಕುಮಾರ್ ಎರಡು ದಿನ ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿದ್ದು, ನಗರಕ್ಕೆ ಆಗಮಿಸುತ್ತಲೇ ಪೋಲಿಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಾದ್ಯಂತ ಇರುವ ಪ್ರಮುಖ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಸಾರ್ವಜನಿಕರ ಸಭೆಯನ್ನ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಎಡಿಜಿಪಿ ಅಲೋಕ್ ಕುಮಾರ್ ಮುಂದೆ ತಿಳಿಸಿದರು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೂರ ಘಟನೆಯಲ್ಲಿನ ಗಾಯಾಳುಗಳಿಗೆ ಬಸವಣ್ಣನವರ ವಚನ ಹೇಳಿ ಕ್ಲಾಸ್: ನಗರದಲ್ಲಿ ರೌಂಡಪ್ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಕೆರೂರ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಗಾಯಾಳುಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಒಂದೆಡೆ ಅವರ ಯೋಗಕ್ಷೇಮ ವಿಚಾರಣೆ ಒಂದೆಡೆಯಾದರೆ, ಮತ್ತೊಂದೆಡೆ ನಯವಾಗಿ ಕ್ಲಾಸ್ ತೆಗೆದುಕೊಂಡು ಬಸವಣ್ಣನವರ ವಚನ ಹೇಳುವ ಮೂಲಕ ಬುದ್ಧಿವಾದ ಮಾತು ಹೇಳಿದರು. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಹೇಳಿದ್ದಾರೆ. ಆದರೆ ಅದನ್ನು ಮರೆತುಬಿಟ್ಟಿದ್ದಾರೆ ಈಗ, ಹೀಗೆಲ್ಲ ಆಗಬಾರದು ತಪ್ಪು, ಬಸವಣ್ಣನವರ ತತ್ವಾದರ್ಶ ಈಗ ಮರೆತು ಬಿಟ್ಟಿದ್ದಾರೆ. ಯಾರ ಮೇಲೂ ಏನು ಒತ್ತಡ ಹಾಕಬಾರದು ಎಂದು ವಚನದ ಸಾರಾಂಶ ಹೇಳುತ್ತ ಬುದ್ಧಿವಾದ ಹೇಳಿದರು.
ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಘಟನೆಯ ಹಿಂದೆ ಎಸ್‌ಡಿಪಿಐ ಕೈವಾಡ: ಕಾಶಪ್ಪನವರ ಆರೋಪ
ಮದುವೆಯಾಗಿ ಇಲ್ಲವಾದರೆ ನಮ್ಮ ಪೋಲಿಸರಿಗೆ ಹೇಳಿ ಮದುವೆ ಮಾಡಿಸುತ್ತೇವೆಂದ ಎಡಿಜಿಪಿ: ಇತ್ತ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಮದುವೆ ಆಗಿದೆಯಾ ಎಂದ ಪ್ರಶ್ನಿಸಿದ ಅಲೋಕ್ ಕುಮಾರ್, ಇಲ್ಲ ಎಂದ ಗಾಯಾಳು ಅರುಣ ತಿಳಿಸಿದಾಗ, ಮದುವೆ ಆಗಬೇಕ್ರಿ... ಮದುವೆ ಆದ್ರೆ ಹೀಗಾಗೋದಿಲ್ಲ, ಮದುವೆ ಆದರೆ ಜವಾಬ್ದಾರಿ ಬರುತ್ತೆ. ಬೇಗ ಮದುವೆ ಆಗಿ ಇಲ್ಲವಾದರೆ ನಮ್ಮ ಪೋಲಿಸರಿಗೆ ಹೇಳ್ತೀವಿ ಮಾಡ್ತಾರೆ ಎಂದು ಹಾಸ್ಯ ಮಾಡಿ, ನಿಮ್ಮ ಸಂಬಂಧಿಗಳಿಗೆ ಹೇಳಿ ಮದುವೆ ಮಾಡಿಸೋಣ ಎಂದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಎಡಿಜಿಪಿ ಎದುರು ಕಣ್ಣೀರಿಟ್ಟ ಗಾಯಾಳು ತಾಯಿ: ಇದೇ ಸಮಯದಲ್ಲಿ ಮಿರ್ಜಿ ಆಸ್ಪತ್ರೆಯಲ್ಲಿ ಗೋಪಾಲನ ಯೋಗಕ್ಷೇಮ ವಿಚಾರಿಸೋ ವೇಳೆ ಆತನ ತಾಯಿ ಜಯಶ್ರೀ ಕಣ್ಣೀರು ಹಾಕಿರುವ ಘಟನೆ ಸಹ ನಡೆಯಿತು. ನಾವು ಬಡವರಿದ್ದೇವೆ ಸರ್, ಘಟನೆ ನಡೆದಾಗಿನಿಂದ ಆಸ್ಪತ್ರೆಯಲ್ಲಿಯೇ ಇದ್ದೇವೆ. ಇದ್ದ ಮೂರು ಮಕ್ಕಳಲ್ಲಿ ಒಬ್ಬ ಈಗ ಹಾಸಿಗೆ ಹಿಡಿದಿದ್ದಾನೆ. ಅವರಿವರನ್ನ ಬೇಡಿ ಹಣ ಕೂಡಿಸಿ ಚಿಕಿತ್ಸೆ ನೀಡಿಸಿದ್ದೇವೆ. ಆರೋಪಿಗಳನ್ನ ಬಂಧಿಸಿದ್ದಾರೋ ಬಿಟ್ಟಿದ್ದಾರೋ ನಮಗೆ ಗೊತ್ತಿಲ್ಲ ಎಂದು ಜಯಶ್ರೀ ಎಂಬುವ ತಾಯಿ ಕಣ್ಣೀರಿಟ್ಟು ಅಧಿಕಾರಿಗಳ ತಮ್ಮ ನೋವು ತೊರ್ಪಡಿಸಿಕೊಂಡರು. ಬಳಿಕ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದೇವೆ, ಸಮಾಧಾನದಿಂದ ಇರಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಸಮಾಧಾನ ಪಡಿಸಿದರು.
ಕೆರೂರ ಘಟನೆ 26 ಜನರ ಅರೆಸ್ಟ್-ಯಾರೇ ತಪ್ಪು ಮಾಡಿದ್ರೂ ಕ್ರಮ: ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಕೆರೂರ ಘಟನೆ ಸಂಭಂಧ 26 ಜನರನ್ನ ಬಂಧಿಸಲಾಗಿದೆ. ಆರೋಪಿ ಯಾಸೀನ್ ಬಂಧನವಾಗಬೇಕಿದೆ. ಆದಷ್ಟು ಬೇಗ ಆರೋಪಿ ಬಂಧಿಸಲು ಎಸ್.ಪಿಗೆ ಸೂಚಿಸಿದ್ದೇನೆ. ಕೆಲವೆಡೆ ಸಿಸಿಟಿವಿ ಆಧರಿಸಿ ಆರೋಪಿಗಳ ದಸ್ತಗೀರ್ ಆಗಿದೆ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮವಾಗಲಿದೆ. ಇದರಲ್ಲಿ ಪಿಎಸ್ಐ ಪಾತ್ರ ಇದ್ದರೂ ಸಹ ಕ್ರಮ ಕೈಗೊಳ್ಳುತ್ತೇವೆ. ಎರಡೂ ಗುಂಪಿನ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಸ್ಥಳದಲ್ಲಿದ್ದ ಪೋಲಿಸ ಸಿಬ್ಬಂದಿಯನ್ನು ಸಹ ವಿಚಾರಣೆ ಮಾಡುತ್ತೇನೆ. ಎಲ್ಲ ಸಾಧಕ ಬಾಧಕ ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸಿದ್ದರಾಮಯ್ಯನವರ ಹಣ ವಾಪಸ್ ಎಸೆದ ಮುಸ್ಲಿಂ ಮಹಿಳೆ, ಸ್ಪಷ್ಟನೆ ಕೊಟ್ಟ ಖಾದರ್
ಪೋಲಿಸರಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ: ಇನ್ನು ಪೋಲಿಸರಿಗೆ ಖಡಕ್ ಸೂಚನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಕಂಡು ಬರ್ತಿದೆ. ಇದರ ಮೇಲೆ ನಮ್ಮ ಪೋಲಿಸರು ಕಟ್ಟೆಚ್ಚರ ವಹಿಸಬೇಕು. ಇಂತಹದ್ದಕ್ಕೆಲ್ಲಾ ಅವಕಾಶ ಇರಬಾರದು. ನಗರದಲ್ಲಿ ಪಿಯು & ಮೆಡಿಕಲ್ ಕಾಲೇಜ್ ಹಾಗೂ ಹಾಸ್ಟೆಲ್ ಗಳಿವೆ. ಇವುಗಳನ್ನ ಭೇಟಿ ಮಾಡಬೇಕು. ಯಾರೂ ಕಂನ್ಸುಮರ್ಸ್ ಇದ್ದಾರೆ, ಅಂತವರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ನಾನು ನಮ್ಮ ಪೋಲಿಸರಿಗೆ ಕೆಲಸ ಮಾಡಲು ಮೂರು ಮಂತ್ರ ಹೇಳಿಕೊಡ್ತೇನೆ. ಅದರಲ್ಲಿ ಮಾಡುವ ಕೆಲಸ ತ್ವರಿತವಾಗಿರಬೇಕು, ದಿಟ್ಟವಾಗಿರಬೇಕು ಮತ್ತು ನಿಷ್ಪಕ್ಷಪಾತವಾಗಿರಬೇಕು, ಇವನ್ನು ಮಾಡದೇ ಹೋದ್ರೆ ಮೊದಲು ಫೋನ್ ಮಾಡಿ ಹೇಳ್ತೇನೆ, ನಂತರ ಎಕ್ಸೆನ್ ಮಾಡುತ್ತೇನೆ. ಇವುಗಳನ್ನ ಪಾಲಿಸಿ ಒಳ್ಳೆಯ ಕೆಲಸ ಮಾಡಿದವರಿಗೆ ರಿವಾರ್ಡ್ ಕೊಟ್ಟು ಗೌರವಿಸುತ್ತೇವೆ ಎಂದು ಬಾಗಲಕೋಟೆಯಲ್ಲಿ ನಡೆದ ಪೋಲಿಸ ಗೌರವ ಸ್ವೀಕಾರ ಸಮಾರಂಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಐಜಿ ಸತೀಶಕುಮಾರ್ ಮತ್ತು ಎಸ್.ಪಿ.ಜಯಪ್ರಕಾಶ್ ಉಪಸ್ಥಿತರಿದ್ದರು.