ಸೌಜನ್ಯ ಪ್ರಕರಣದಲ್ಲಿ ವಿದೇಶಿ ಫಂಡಿಂಗ್ ಪಡೆದ ಸುಳ್ಳು ಆರೋಪ ಎದುರಿಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್‌ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ಆರೋಪ ಮಾಡಲಾಗಿತ್ತು ಎಂದ ಅವರು, ಸತ್ಯಕ್ಕಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದ್ದಾರೆ.

ಚಿತ್ರದುರ್ಗ: ನಾವು ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರು. ನಾವು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಸತ್ಯದ ಹಾದಿಯಲ್ಲಿ ನಡೆಯುವ ನಮಗೆ ಕಾನೂನಿನ ಮೇಲೆ ಅಪಾರ ಗೌರವವಿದ್ದು, ನ್ಯಾಯಾಲಯ ನಮಗೆ ಸೂಕ್ತ ನ್ಯಾಯ ಒದಗಿಸಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್‌ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿರೋಧಿಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಮೇಲಾಗಿದ್ದ ಸುಳ್ಳು ದೂರುಗಳು ಹಾಗೂ ಕಾನೂನು ಹೋರಾಟದ ಹಾದಿಯನ್ನು ಸುದೀರ್ಘವಾಗಿ ಹಂಚಿಕೊಂಡರು.

ಸುಖಾಸುಮ್ಮನೆ ಕೋಟಿಗಟ್ಟಲೆ ಫಂಡಿಂಗ್ ಆರೋಪ!

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಎಂಬಾತ ತಾನಾಗಿಯೇ ಬಂದು ಶರಣಾಗಿದ್ದ. ಆ ಬಳಿಕ ಆತ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣವರ್ ಹಾಗೂ ನನ್ನನ್ನೂ ಒಳಗೊಂಡಂತೆ ಐದು ಜನರ ಮೇಲೆ ಕೋಟಿಗಟ್ಟಲೆ ವಿದೇಶಿ ಫಂಡಿಂಗ್ ಪಡೆಯುತ್ತಿದ್ದೇವೆ ಎಂದು ಸುಖಾಸುಮ್ಮನೆ ಸುಳ್ಳು ಆರೋಪ ಹೊರಿಸಿದ್ದ. ಅಷ್ಟೇ ಅಲ್ಲದೆ, ನನ್ನ ಬ್ಯಾಂಕ್ ಖಾತೆಯಿಂದ ಆತನ ಪತ್ನಿಯ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದೂ ಸುಳ್ಳು ಹೇಳಿದ್ದ. ಕೋಟಿಗೆ ಎಷ್ಟು ಸೊನ್ನೆ ಇರುತ್ತದೆ ಎಂಬುದೇ ನನಗೆ ಗೊತ್ತಿಲ್ಲ. ಅಂತಹದರಲ್ಲಿ ಈ ರೀತಿ ಆಧಾರರಹಿತ ಆರೋಪ ಮಾಡಿದಾಗ, ನಾನು ನ್ಯಾಯಾಲಯದಲ್ಲೇ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದು ಸವಾಲು ಹಾಕಿದ್ದೆ. ನಾನು ಯಾವುದೇ ತಪ್ಪು ಮಾಡದೇ ಇರುವುದರಿಂದ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಮಾ ನಾಗರಾಜ್ ಗುಡುಗಿದರು.

ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ

ಹಳ್ಳಿಗಳಲ್ಲಿ ನಡೆಯುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದೇ ಈ ಎಲ್ಲಾ ಆರೋಪಗಳಿಗೆ ಕಾರಣ ಎಂದು ವಿವರಿಸಿದ ಅವರು, ಇಂದು ಹಳ್ಳಿ ಹಳ್ಳಿಗಳಲ್ಲಿ ಗ್ರಾಮಾಭಿವೃದ್ಧಿ ಸಂಘಗಳ ಹೆಸರಿನಲ್ಲಿ ಹೆಣ್ಣುಮಕ್ಕಳು ಬೀದಿಗೆ ಬರುವಂತಾಗಿದೆ. ಮಹಿಳೆಯರು ಕೇಳದಿದ್ದರೂ ಇವರೇ ಮನೆ ಬಾಗಿಲಿಗೆ ಹೋಗಿ ಸಾಲ ಕೊಟ್ಟು, ನಂತರ ಅದನ್ನು ವಸೂಲಿ ಮಾಡುವಾಗ ಅತಿಯಾದ ಮಾನಸಿಕ ಕಿರುಕುಳ (ಟಾರ್ಚರ್) ನೀಡುತ್ತಾರೆ. ಹೆಣ್ಣುಮಕ್ಕಳು ಇದುವರೆಗೆ ಕಟ್ಟಿರುವ ಉಳಿತಾಯದ ಹಣ ಎಷ್ಟು ಎಂಬುದನ್ನು ಕೇಳುವುದೇ ತಪ್ಪಾ? ಈ ದೌರ್ಜನ್ಯವನ್ನು ಪ್ರಶ್ನಿಸಿ, ಸಂತ್ರಸ್ತರ ಪರವಾಗಿ ನಾನು ಪೊಲೀಸ್ ದೂರು ಕೊಡಿಸಿದ್ದಕ್ಕೆ ಸುಮಾರು ೫೦ ಜನ ನನ್ನ ಮೇಲೆಯೇ ದಾಳಿ ಮಾಡಲು ಬಂದಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು.

"ನಾವು ಕಾನೂನುಬದ್ಧವಾಗಿ ಹೋರಾಟಕ್ಕೆ ಇಳಿದಾಗ, ತಡೆದುಕೊಳ್ಳಲಾರದ ಸಂಘಟನೆಯ ಪ್ರಮುಖರು ಚಿನ್ನಯ್ಯನ ಹೆಗಲ ಮೇಲೆ ಬಂದೂಕಿಟ್ಟು ನಮ್ಮ ವಿರುದ್ಧ ಈ ರೀತಿಯ ಸುಳ್ಳು ಹೇಳಿಕೆಗಳನ್ನು ಕೊಡಿಸಿದರು. ಏಕಾಏಕಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಮುನ್ನೆಲೆಗೆ ತರಲಾಯಿತು."

ಸುಪ್ರೀಂ ಕೋರ್ಟ್‌ನಲ್ಲಿ ಜಯ; ಕಾನೂನಿಗೆ ಗೌರವ

ಸುಳ್ಳು ಆರೋಪಗಳ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿದ ರಮಾ ನಾಗರಾಜ್ ಅವರಿಗೆ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ಅವರು, ನಮ್ಮ ನಿರಂತರ ಹೋರಾಟಕ್ಕೆ ನ್ಯಾಯ ಸಿಕ್ಕಿದ್ದು, ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯ ನಮ್ಮನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನನ್ನ ತಂದೆಯೂ ಒಬ್ಬ ನ್ಯಾಯಾಧೀಶರಾಗಿದ್ದರು. ಅವರ ಮಗಳಾಗಿ ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸದಾ ಪರಮ ಗೌರವವಿದೆ. ಸುಪ್ರೀಂ ಕೋರ್ಟ್‌ನಲ್ಲಿ ನನ್ನ ಪರವಾಗಿ ಹಿರಿಯ ವಕೀಲರಾದ ಬಾಲನ್ ಅವರು ಹಾಗೂ ಬೃಂದಾ ಅವರ ತಂಡ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿತ್ತು. ಇವರೆಲ್ಲರ ಅವಿರತ ಶ್ರಮದಿಂದ ನಮಗೆ ಇಂದು ಜಯ ಸಿಕ್ಕಿದೆ. ತಪ್ಪು ಮಾಡದವರಿಗೆ ಎಂದಿಗೂ ಕೆಟ್ಟದ್ದಾಗುವುದಿಲ್ಲ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ ಎಂದರು.

ಹೆಣ್ಣುಮಕ್ಕಳು ಹೋರಾಟಕ್ಕೆ ಇಳಿದರೆ ಹಿಂದೆ ಸರಿಯಲ್ಲ!

ಕೊನೆಯದಾಗಿ ಎಚ್ಚರಿಕೆಯ ಸಂದೇಶ ನೀಡಿದ ಅವರು, ಯಾರಾದರೂ ನನ್ನ ತಂಟೆಗೆ ಬಂದರೆ ಅಥವಾ ಸತ್ಯದ ಹಾದಿಯನ್ನು ಕೆಡಿಸಲು ಬಂದರೆ ನಾನು ಮಾತ್ರ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಒಮ್ಮೆ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದರೆ, ಸಾವು ಬರುವವರೆಗೂ ಹೋರಾಡಲು ಸಿದ್ಧರಿರುತ್ತಾರೆ ಎಂಬುದನ್ನು ವಿರೋಧಿಗಳು ನೆನಪಿನಲ್ಲಿಡಬೇಕು ಎಂದು ರಮಾ ನಾಗರಾಜ್‌ ಎಚ್ಚರಿಸಿದರು.