ಭ್ರಷ್ಟರ ಬೇಟೆ| ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸಹಾಯಕ ಆಯುಕ್ತರ ಮನೆಯಲ್ಲಿ ಲಕ್ಷ ಲಕ್ಷ ನಗದು ಪತ್ತೆ| ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು| ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ|
ಬೆಂಗಳೂರು(ಡಿ.03): ಲಂಚ ಸ್ವೀಕಾರ ಆರೋಪದ ಮೇಲೆ ಬುಧವಾರ ಬಂಧನಕ್ಕೊಳಗಾದ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರೊಬ್ಬರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 10.5 ಲಕ್ಷ ರು. ನಗದು ಪತ್ತೆಯಾಗಿದೆ.
ಬನ್ನೇರುಘಟ್ಟ ರಸ್ತೆಯಲ್ಲಿನ ಕಾರ್ಮಿಕ ಭವನದ ವಿಭಾಗ-3 ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ ಬಂಧಿತರಾಗಿದ್ದಾರೆ. ಲಂಚ ಸ್ವೀಕಾರ ಆರೋಪದ ಮೇಲೆ ಕಚೇರಿಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅನುಮಾನದ ಮೇರೆಗೆ ಆರೋಪಿ ಸಂತೋಷ್ ಇಪ್ಪರಗಿಯ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿನ ನಿವಾಸದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ 10.5ಲಕ್ಷ ರು. ನಗದು ಪತ್ತೆಯಾಗಿದೆ. ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಲಂಚ ಸ್ವೀಕಾರ ಆರೋಪದ ಮೇಲೆ ಸಂತೋಷ್ ಇಪ್ಪರಗಿ ಜತೆಗೆ ನಿವೃತ್ತ ಕಾರ್ಮಿಕ ಇನ್ಸ್‌ಪೆಕ್ಟರ್ ಶಿವಕುಮಾರ್ ಎಂಬುವವರನ್ನು ಸಹ ಬಂಧಿಸಲಾಗಿದೆ.
ನಿವೃತ್ತಿಯಾದರೂ ನಿಲ್ಲದ ಲಂಚದ ಚಾಳಿ!:
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಖಾಸಗಿ ಸಂಸ್ಥೆಯ ಶಾಖೆಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಕೆಲಸ ನಿರ್ವಹಿಸುತ್ತಿರುವ ದೂರುದಾರರು, ದಿನಗೂಲಿ ಕಾರ್ಮಿಕರ ಅವಶ್ಯಕತೆ ಇರುವ ಕಾರಣ ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಿಗೆ ನೀಡುವಂತೆ ಬನ್ನೇರುಘಟ್ಟರಸ್ತೆಯ ಕಾರ್ಮಿಕ ಭವನದಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ 2017ರಲ್ಲಿ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಎಸಿಬಿ ದಾಳಿ: ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿಗಳು
ಖಾಸಗಿ ಸಂಸ್ಥೆಯ ಮುಖ್ಯ ಕಚೇರಿಯು ಪುಣೆಯಲ್ಲಿದೆ. ಸಂಸ್ಥೆಯ ಮುಖ್ಯಸ್ಥರಿಗೆ ತಾತ್ಕಾಲಿಕವಾಗಿ ಕಾರ್ಮಿಕನ್ನು ನೇಮಿಸಿಕೊಳ್ಳಲು ಪರವಾನಿಗೆ ನೀಡಲು 2 ಲಕ್ಷ ರು. ನೀಡುವಂತೆ ಬೇಡಿಕೆ ಇಟ್ಟಿದ್ದ. ಅಷ್ಟೊಂದು ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ದೂರುದಾರರ ಮೂಲಕ 1.80 ಲಕ್ಷ ರು. ಬೇಡಿಕೆ ಇಟ್ಟಿದ್ದ. ಕಳೆದ ಮೂರು ವರ್ಷಗಳಿಂದ ದೂರುದಾರರು ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ದೂರುದಾರರು
ಎಸಿಬಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು ಕಾರ್ಮಿಕ ಇಲಾಖೆಯ ಕಚೇರಿಗೆ ತೆರಳಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ ಪರವಾಗಿ ನಿವೃತ್ತ ಕಾರ್ಮಿಕ ಇನ್ಸ್‌ಪೆಕ್ಟರ್ ಶಿವಕುಮಾರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ. ಈ ನಡುವೆ, ಆರೋಪಿ ಸಂತೋಷ್ ಇಪ್ಪರಗಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಅನುಮಾನಾಸ್ಪದ ಹೇಳಿಕೆ ನೀಡಿದ್ದ. ಅನುಮಾನಗೊಂಡ ಎಸಿಬಿ ಅಧಿಕಾರಿಗಳು ಆರ್‌ಪಿಸಿ ಲೇಔಟ್‌ನಲ್ಲಿನ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ 10.5 ಲಕ್ಷ ರು. ನಗದು ಪತ್ತೆಯಾಗಿದ್ದು, ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 7:24 AM IST