ಬೆಂಗಳೂರು(ಡಿ. 02): ನೀರಿನ ಶುದ್ಧೀಕರಣ ಘಟಕ ಆರಂಭಕ್ಕೆ ಖಾಸಗಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಸರಹಳ್ಳಿ ಪ್ರಾದೇಶಿ ಕಚೇರಿಯ ಇಬ್ಬರು ಅಧಿಕಾರಿಗಳು ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪರಿಸರ ಅಧಿಕಾರಿ ಕೆ.ವಿ.ಶಿವಕುಮಾರ್‌ ಹಾಗೂ ಉಪ ಪರಿಸರ ಅಧಿಕಾರಿ ಕೆ.ಎಂ.ಸೋಮಶೇಖರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಜಪ್ತಿ ಮಾಡಲಾಗಿದೆ. ಮಾಗಡಿ ರಸ್ತೆಯ ಕಾಚೋಹಳ್ಳಿ ಗ್ರಾಮದಲ್ಲಿ ನೀರಿನ ಶುದ್ಧೀಕರಣ ಘಟಕ ತೆರೆಯುವ ಸಂಬಂಧ ಅಕ್ಟೋಬರ್‌ನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಸರಹಳ್ಳಿ ವಲಯದ ಪ್ರಾದೇಶಿಕ ಕಚೇರಿಗೆ ರಾಜಾಜಿನಗರದ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆಗ ಪರವಾನಿಗೆ ನೀಡಿಕೆಗೆ 50 ಸಾವಿರಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.

KAS ಭ್ರಷ್ಟ ಅಧಿಕಾರಿ ಸುಧಾಗೆ ಮತ್ತೊಂದು ಶಾಕ್‌..!

ಈ ಬಗ್ಗೆ ನ.30 ರಂದು ಎಸಿಬಿ ಬೆಂಗಳೂರು ಘಟಕಕ್ಕೆ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದ್ದರು. ಅದರನ್ವಯ 25 ಸಾವಿರ ಲಂಚ ಸ್ವೀಕರಿಸುವ ವೇಳೆ ಪರಿಸರ ಅಧಿಕಾರಿ ಕೆ.ವಿ.ಶಿವಕುಮಾರ್‌ ಅವರು ಮೇಲೆ ದಾಳಿ ನಡೆಸಿ ದಸ್ತಗಿರಿ ಮಾಡಲಾಯಿತು. ಅನಂತರ ಉಪ ಪರಿಸರ ಅಧಿಕಾರಿ ಕೆ.ಎಂ.ಸೋಮಶೇಖರ್‌ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ತಿಳಿದು ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.