ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ತನುಶ್ರೀ ಎಂಬ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ.
ರಾಯಚೂರು(ಜ.31): ಶಾಲಾ ಆವರಣದಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ತನುಶ್ರೀ ಎಂಬ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಅಕ್ಷರ ಕಲಿಯಲು ಬಂದ ಬಾಲಕಿ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
ತನಿಖೆಗೆ ಡಿಸಿ ನಿತೀಶ್ ಕೆ. ಆದೇಶ: ಅಧಿಕಾರಿಗಳಿಗೆ 'ಡೆಡ್‌ಲೈನ್'
ಘಟನೆ ತಿಳಿಯುತ್ತಿದ್ದಂತೆಯೇ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಪ್ರತಿಕ್ರಿಯಿಸಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಸಿಂಧನೂರು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ (BEO) ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇಂದು ಸಂಜೆಯೊಳಗೇ ಈ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಕಟ್ಟುನಿಟ್ಟಿನ 'ಡೆಡ್‌ಲೈನ್' ವಿಧಿಸಿದ್ದಾರೆ.
ನಿರ್ಲಕ್ಷ್ಯ ತೋರಿದರೆ ಕ್ರಮ ಗ್ಯಾರಂಟಿ: ಶಾಲೆಗಳಿಗೆ ಮುನ್ನೆಚ್ಚರಿಕೆ
ಒಂದು ವೇಳೆ ಶಾಲಾ ಆಡಳಿತ ಮಂಡಳಿಯ ಅಥವಾ ಶಿಕ್ಷಕರ ನಿರ್ಲಕ್ಷ್ಯ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಕಂಪೌಂಡ್ ಒಳಗಡೆ ಇರುವ ವಿದ್ಯುತ್ ಸಮಸ್ಯೆಗಳನ್ನು ತಕ್ಷಣವೇ ಪರಿಶೀಲಿಸಿ ಸರಿಪಡಿಸುವಂತೆ ಡಿಡಿಪಿಐ ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಆದೇಶಿಸಿದ್ದಾರೆ.
ಪರಿಹಾರದ ಭರವಸೆ ನೀಡಿದ ಜಿಲ್ಲಾಡಳಿತ
ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ ತನುಶ್ರೀ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ನಿತೀಶ್ ಕೆ. ಅವರು ಭರವಸೆ ನೀಡಿದ್ದಾರೆ.


