ಬೀದರ್ ಜಿಲ್ಲೆಯ ಮೊಳಕೇರಾ ಗ್ರಾಮದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಶಾಸಕ ಸಿದ್ದು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಐದನೇ ಸ್ಫೋಟವಾಗಿದ್ದು, ಘಟನೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್ (ಜ.31): ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸಂಭವಿಸಿದ ನಿಗೂಢ ಸ್ಫೋಟದ ಬೆನ್ನಲ್ಲೇ ಸ್ಥಳೀಯ ಶಾಸಕ ಸಿದ್ದು ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಘಟನಾ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಅವರು, ಅಲ್ಲಿ ಬೀಡುಬಿಟ್ಟಿರುವ ಡಿಐಜಿಪಿ, ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸ್ಫೋಟಕ್ಕೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಂಡರು. ಸದ್ಯ ಪೊಲೀಸರು ಇಡೀ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಸ್ಫೋಟ ಸಂಭವಿಸಿದ್ದು ಹೇಗೆ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಗ್ರಾಮದಲ್ಲಿದ್ದ ಕೆಮಿಕಲ್ ಮಿಶ್ರಿತ ಡ್ರಮ್ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, 'ಈಗಲೇ ನಿಖರ ಕಾರಣ ಹೇಳಲು ಸಾಧ್ಯವಿಲ್ಲ, ವಿಧಿವಿಜ್ಞಾನ ಪ್ರಯೋಗಾಲಯದ (FSL) ಎಕ್ಸ್‌ಫರ್ಟ್‌ಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರು ತಿಂಗಳಲ್ಲಿ ಐದನೇ ಸ್ಫೋಟ!
ಕಳೆದ ಆರು ತಿಂಗಳಲ್ಲಿ ಇದು ಐದನೇ ಸ್ಫೋಟವಾಗಿದೆ. ಇದು ಸೇರಿದಂತೆ ಸತತ 4-5 ಬಾರಿ ಇಂತಹ ಶಬ್ದಗಳು ಕೇಳಿಬಂದಿದ್ದವು. ಅಂದೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ, ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಸ್ಫೋಟದ ತೀವ್ರತೆಗೆ ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಒಂದು ವೇಳೆ ಸ್ಫೋಟದ ಸಮಯದಲ್ಲಿ ಶಾಲಾ ಬಸ್ ಅದೇ ಜಾಗದಲ್ಲಿದ್ದಿದ್ದರೆ ದೊಡ್ಡ ಸಾವು-ನೋವು ಸಂಭವಿಸುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ
ಘಟನೆಯಲ್ಲಿ ಗಾಯಗೊಂಡಿರುವ ಆರು ಮಂದಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಶಾಸಕರು ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.


