ಹಾವೇರಿ[ಜ.31]: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಸಾವಿರಾರು ವಿದ್ಯಾರ್ಥಿಗಳ ಸಹಯೋಗದಲ್ಲಿ 250 ಮೀಟರ್‌ ಉದ್ದದ ತ್ರಿವರ್ಣ ಧ್ವಜದ ಬೃಹತ್‌ ತಿರಂಗಾ ಯಾತ್ರೆಯನ್ನು ಗುರುವಾರ ನಗರದಲ್ಲಿ ನಡೆಸಲಾಯಿತು.

ಸ್ಥಳೀಯ ಜಿ.ಎಚ್‌. ಕಾಲೇಜಿನಿಂದ ಆರಂಭಗೊಂಡ ತಿರಂಗಾ ಯಾತ್ರೆ ಪಿ.ಬಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ಸರ್ಕಲ್‌, ಮೈಲಾರ ಮಹಾದೇವಪ್ಪ ಸರ್ಕಲ್‌, ಜೆ.ಪಿ. ಸರ್ಕಲ್‌, ಮಾರ್ಗವಾಗಿ ಜೆ.ಎಚ್‌. ಪಟೇಲ್‌ ವೃತ್ತಕ್ಕೆ ಬಂದು ತಲುಪಿ ನಂತರ ಬಹಿರಂಗ ಸಮಾವೇಶ ನಡೆಸಲಾಯಿತು. ತಿರಂಗಾ ಯಾತ್ರೆ ಉದ್ದಕ್ಕೂ ವಿದ್ಯಾರ್ಥಿಗಳು ಸಿಎಎ ಪರ ಘೋಷಣೆ ಕೂಗುವ ಮೂಲಕ ಗಮನ ಸೆಳೆದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಿರಂಗಾ ಯಾತ್ರೆಯಲ್ಲಿ ಜಿ.ಎಚ್‌. ಕಾಲೇಜ್‌, ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಹಿರಂಗ ಸಮಾವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಎಬಿವಿಪಿ ಸಂಘಟನೆಯ ವಿಭಾಗೀಯ ಸಂಚಾಲಕ ಗಂಗಾಧರ ಅಂಜಗಿ ಮಾತನಾಡಿ, ಸಿಎಎ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ಭಾರತೀಯ ಮುಸ್ಲಿಂ ಬಾಂಧವರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪೌರತ್ವ ತಿದ್ದಪಡಿ ಕಾಯ್ದೆ ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಿರುಕುಳ ತಾಳಲಾರದೆ ಅತಂತ್ರ ಸ್ಥಿತಿಯಲ್ಲಿದ್ದು ಜೀವನ ಸಾಗಿಸಲು ಸಾಧ್ಯವಿಲ್ಲದಿದ್ದಾಗ ಭಾರತವನ್ನು ಆಶ್ರಯಿಸಿ ಬರುವ ಹಿಂದೂ ಅಲ್ಪಸಂಖ್ಯಾತರಿಗೆ ನೆಲೆ ನೀಡುವುದಾಗಿದೆ ಎಂದು ಹೇಳಿದರು.

ದೇಶ ವಿಭಜನೆಯ ಸಂದರ್ಭದಲ್ಲಿ ಪರಿಸ್ಥಿತಿಯ ಅನಿವಾರ್ಯತೆಯಿಂದ ಅನೇಕ ಮಂದಿ ಪಾಕಿಸ್ತಾಕ್ಕೆ ಹೋಗಿದ್ದರೂ ಅವರು ನಮ್ಮವರು, ಪಾಕಿಸ್ತಾನದ ಅಲ್ಪಸಂಖ್ಯಾತರ ಸಂರಕ್ಷಣೆ ನಮ್ಮ ಹೊಣೆಯಾಗಿದೆ. ಅಲ್ಲಿ ತಮ್ಮ ಬದುಕು ಅಸಹನೀಯವಾಗಿ ಅವರು ಮರಳಿ ನಮ್ಮ ದೇಶಕ್ಕೆ ಬರುವುದಾದರೆ ಅವರಿಗೆ ಶಾಸನಬದ್ಧ ಹಕ್ಕುಗಳೊಂದಿಗೆ ಪೂರ್ಣ ರಕ್ಷಣೆ ಹಾಗೂ ಅವಕಾಶಗಳನ್ನು ನೀಡಬೇಕು ಎನ್ನುವುದು ಕಾಯ್ದೆಯ ಉದ್ದೇಶವಾಗಿದೆ ಎಂದರು.

6 ಲಕ್ಷ ಜನರ ಬಲಿದಾನದ ಪ್ರೇರಣೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು. ಅಕ್ರಮ ವಲಸಿಗರಿಂದ ಭಾರತದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ವಲಸಿಗರನ್ನು ತಡೆಗಟ್ಟಿದರೆ ದೇಶ ಆರ್ಥಿಕವಾಗಿ ಬಲಿಷ್ಠವಾಗಲಿದೆ. ಬಾಂಗ್ಲಾದೇಶದ ಗಡಿಯುದ್ದಕ್ಕೂ ಅಕ್ರಮ ವಲಸೆಗಾರರು ದೇಶದೊಳಗೆ ನುಗ್ಗುತ್ತಿರುವುದರಿಂದ ಉಂಟಾಗುವ ಸಮಸ್ಯೆಗಳ ಮಹಾಪುರದ ಬಗ್ಗೆ ಇಡೀ ದೇಶದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.

ಗಾಂಧೀಜಿ, ಪಟೇಲ್‌, ನೆಹರು ಸೇರಿದಂತೆ ರಾಷ್ಟ್ರ ನಾಯಕರು ನೀಡಿದ್ದ ಭರವಸೆಗೆ 70 ವರ್ಷಗಳ ನಂತರ ನ್ಯಾಯ ಸಿಕ್ಕಿದೆ. ಇದನ್ನು ಕೆಲವು ಸಂಘಟನೆಗಳು, ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಜನರಲ್ಲಿ ತಪ್ಪು ತಿಳಿವಳಿಕೆ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಯಾರೂ ತಪ್ಪು ತಿಳಿದು ಕಾಯ್ದೆ ವಿರೋಧಿಸಬೇಡಿ. ಪೌರತ್ವ ಕಾಯ್ದೆಯ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲು ಬೇರೆ ಕಡೆಯಿಂದ ಹಣ ಸಂದಾಯವಾಗುತ್ತಿದೆ. ಆ ಹಣದಿಂದ ಕೆಲವು ಸಂಘಟನೆಗಳು ಸಿಎಎ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಎ ವಿರೋಧಿಸುವವರಿಗೆ ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತೇನೆ. ಮುಕ್ತವಾಗಿ ಚರ್ಚೆಗೆ ಬರಲಿ ಎಂದರು.

ಈ ಸಂದರ್ಭಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಕಿರಣ ಕೆ., ಸಂತೋಷ, ಸಂಜಯ್‌, ಪ್ರಕಾಶ, ಕಿರಣ ಕೆ.ಎಸ್‌., ಕಿರಣ ಬಣಕಾರ, ಮಂಜುನಾಥ ಕೆ, ಲಕ್ಷ್ಮಣ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಇದ್ದರು.