ಸ್ವೀಡನ್ ಕುಟುಂಬ ದತ್ತು ಪಡೆದಿದ್ದ ಯುವತಿ ಹೆತ್ತವರ ಹುಡುಕುತ್ತಾ ಮೈಸೂರಿಗೆ
ಸ್ವೀಡನ್ ಕುಟುಂಬ ದತ್ತು ಪಡೆದಿದ್ದ ಯುವತಿಯೊಬ್ಬರು ತನ್ನ ನಿಜವಾದ ಹೆತ್ತವರ ಮೂಲ ಕುಟುಂಬವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ.
ಮೈಸೂರು : ಸ್ವೀಡನ್ ಕುಟುಂಬ ದತ್ತು ಪಡೆದಿದ್ದ ಯುವತಿಯೊಬ್ಬರು ತನ್ನ ನಿಜವಾದ ಹೆತ್ತವರ ಮೂಲ ಕುಟುಂಬವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ.
ಸ್ವೀಡನ್ ನಿವಾಸಿ ಜಾಲಿ ಸ್ಯಾಂಡ್ ಬರ್ಗ್ (ಅವರಿಗೆ ನೆನಪಿರುವಂತೆ ತಮ್ಮ ಮೂಲ ಹೆಸರು ಜಾನು) ಎಂಬವರೇ ಹೆತ್ತವರ ಮೂಲ ಹುಡುಕುತ್ತಿರುವ ಯುವತಿ. ತಾನು 8 ವರ್ಷದ ಬಾಲಕಿಯಾಗಿದ್ದಾಗ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ಸೇರಿದ್ದೆ. ನಂತರ ಸ್ವೀಡನ್ ಕುಟುಂಬವೊಂದು ದತ್ತು ಪಡೆದು ಸಾಕಿದ್ದಾಗಿ ಜಾಲಿ ಸ್ಯಾಂಡ್ ಬರ್ಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಮೈಸೂರು ಜಿಲ್ಲೆಯ ಯಾವುದೋ ಒಂದು ಕುಟುಂಬದಲ್ಲಿ 1985 ರಲ್ಲಿ ಜನಿಸಿದ್ದು, ತಾಯಿ ಮಂಡ್ಯ ಜಿಲ್ಲೆ ಮದ್ದೂರಿನವರು, ಅವರು ಈ ಹಿಂದೆ ಮೈಸೂರಿನ ಓರ್ವರನ್ನು ವಿವಾಹವಾಗಿದ್ದರು. ಈಗ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ತನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವರು ಸಂಸ್ಥೆಗೆ ನೀಡಿದ್ದರೆಂಬುದು ಪತ್ತೆಯಾಯಿತು. ಆದರೆ, ಆಕೆಗೆ ತನ್ನನ್ನು ನೀಡಿದವರು ಯಾರು ಎಂಬುದನ್ನು ತಿಳಿಯಲು ಹೋದರೆ, ಈ ಹಿಂದೆಯೇ ಜಯಮ್ಮ ಮೃತಪಟ್ಟಿದ್ದರು ಎಂದರು.
ನನ್ನ ತಾಯಿಯ ಹೆಸರು ವಸಂತಮ್ಮ, ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡ ಕಾರಣ ಆಕೆ ಕಷ್ಟದ ಜೀವನ ಸಾಗಿಸುತ್ತಿದ್ದರು. ಹೀಗಾಗಿ, ತನ್ನ ಅಜ್ಜಿ ಪರಿಚಿತರಾದ ಜಯಮ್ಮ ಎಂಬುವವರಿಗೆ ತನ್ನನ್ನು ನೀಡಿದರು. ಹೀಗಾಗಿ, ಆಕೆ ತನ್ನನ್ನು ಬೆಂಗಳೂರಿನ ಮೇರಿ ಕಾನ್ವೆಂಟ್ ಗೆ ಕರೆ ತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ. ಈಗ ನನಗೆ ತಿಳಿದ ಯಾರೂ ಬದುಕಿಲ್ಲ. ಹೀಗಿದ್ದರೂ ನನಗೆ ಸಹೋದರರು, ಸಹೋದರಿಯರು ಇರಬಹುದಾಗಿದ್ದು, ಅವರ ಹುಡುಕಾಟದಲ್ಲಿರುವುದಾಗಿ ಅವರು ತಿಳಿಸಿದರು.
ಜಾಲಿ ಕುಟುಂಬಸ್ಥರ ಮಾಹಿತಿ ಸಿಕ್ಕಲ್ಲಿ ಮೊ. 98222 06485, 83294 03661 ಸಂಪರ್ಕಿಸಬಹುದು. ಜಾಲಿ ಅವರಿಗೆ ನೆರವಾಗುತ್ತಿರುವ ಅಂಜಲಿ ಪವಾರ್, ಎಡಿನ್ ಇದ್ದರು.