Asianet Suvarna News Asianet Suvarna News

ಎಲ್ಲೆಡೆ ಸೀಲ್‌ಡೌನ್ ಆದ್ರೂ ಈ ಗ್ರಾಮಕ್ಕೆ ಚಿಕ್ಕಮಗಳೂರು ಗಡಿ ಮುಕ್ತ..!

ಮಹಾಮಾರಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಗಡಿಗಳು ಸೀಲ್‌ಡೌನ್‌ ಆಗಿ ಜಿಲ್ಲೆಯಿಂದ ಜಿಲ್ಲೆಗೆ ಜನರ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದರೆ ಇಲ್ಲೊಂದು ಗ್ರಾಮಸ್ಥರಿಗೆ ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ಗಡಿಯನ್ನು ತೆರೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

 

A Village in dakshina kannada is open for chikkamagalur
Author
Bangalore, First Published Apr 28, 2020, 8:17 AM IST

ಮಂಗಳೂರು(ಏ.28): ಮಹಾಮಾರಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಗಡಿಗಳು ಸೀಲ್‌ಡೌನ್‌ ಆಗಿ ಜಿಲ್ಲೆಯಿಂದ ಜಿಲ್ಲೆಗೆ ಜನರ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದರೆ ಇಲ್ಲೊಂದು ಗ್ರಾಮಸ್ಥರಿಗೆ ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ಗಡಿಯನ್ನು ತೆರೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇದು ಎಳನೀರು ಗ್ರಾಮ. ಪಶ್ಚಿಮಘಟ್ಟಪ್ರದೇಶದಲ್ಲಿರುವ ಅತಿ ದುರ್ಗಮ, ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಹಳ್ಳಿ. ಸುಮಾರು ನೂರೈವತ್ತು ಮನೆಗಳಿವೆ. ಇಲ್ಲಿನ ಜನರ ದುರ್ದೈವವೆಂದರೆ ಒಂದು ಕಿ.ಮೀ. ಆಚೆ ಕಾಲಿಟ್ಟರೆ ಚಿಕ್ಕಮಗಳೂರಿನ ಗಡಿ ಪೇಟೆ ಸಿಗುತ್ತದೆ. ಆದರೆ ಇವರಿಗೆ ತಮ್ಮದೇ ಜಿಲ್ಲೆಯ ದಿನಸಿ ಅಂಗಡಿಗೆ ದಿಡುಪೆಗೆ ಬರಬೇಕಾದರೆ ಕನಿಷ್ಠ 8- 10 ಕಿ.ಮೀ. ನಡೆಯಬೇಕು! ಹೀಗಾಗಿ ಆಡಳಿತ ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿದೆ.

ಹಜ್‌ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!

ಕೊರೋನಾ ಲಾಕ್‌ಡೌನ್‌ ಆರಂಭದಲ್ಲಿ ಜಿಲ್ಲೆಗಳ ಗಡಿ ಸೀಲ್‌ ಮಾಡಿದಾಗ ದ.ಕ.ದ ಈ ಕುಗ್ರಾಮದ ಜನ ಕಂಗಾಲಾಗಿ ಬಿಟ್ಟಿದ್ದರು. ಕೊನೆಗೆ ಎರಡು ಜಿಲ್ಲೆಗಳ ಸ್ಥಳೀಯ ಆಡಳಿತಗಳ ಸಮನ್ವಯತೆಯಿಂದ ಈ ಹಳ್ಳಿಗರಿಗೆ ಗಡಿ ಮುಕ್ತಗೊಳಿಸಲಾಗಿದೆ. ಆದರೆ ವಾಹನ ಹೋಗುವಂತಿಲ್ಲ. ದಿನದಲ್ಲಿ ಒಂದೇ ಬಾರಿ ಗಡಿ ದಾಟಬೇಕು ಇತ್ಯಾದಿ ಹಲವು ಷರತ್ತುಗಳನ್ನು ಹೇರಲಾಗಿದೆ.

ಕೆಲಕಾಲ ಸಮಸ್ಯೆಯಾಗಿತ್ತು:

ಎಳನೀರು ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಆದರೆ ದಶಕಗಳಿಂದಲೂ ಅವರ ಸಂಪರ್ಕ ಮಾತ್ರ ಚಿಕ್ಕಮಗಳೂರಿನ ಸಂಸೆ, ಕಳಸ, ಮೂಡಿಗೆರೆಯತ್ತ. ಅಂಗಡಿ ಸಾಮಾನು ತರಬೇಕಾದರೂ ಸಂಸೆಗೇ ಹೋಗಬೇಕು. ಲಾಕ್‌ಡೌನ್‌ಆಗಿ ಜಿಲ್ಲೆಯ ಗಡಿ ಬಂದ್‌ ಆದಾಗ ಸ್ವಲ್ಪ ಸಮಸ್ಯೆಯಾಗಿತ್ತು. ಆಧಾರ್‌ ಕಾರ್ಡ್‌ ತೋರಿಸಬೇಕಿತ್ತು. ನೀವು ಬೆಳ್ತಂಗಡಿಯ ಮಲವಂತಿಗೆ ಗ್ರಾಮದವರು, ಈಚೆ ಕಡೆ ಬರಬೇಡಿ ಎಂದು ಗಡಿಯಲ್ಲಿ ನಮ್ಮನ್ನು ವಾಪಸ್‌ ಕಳುಹಿಸುತ್ತಿದ್ದರು. ಕೊನೆಗೆ ಗ್ರಾಮಸ್ಥರ ಪರಿಸ್ಥಿತಿ ಅರ್ಥ ಮಾಡಿಕೊಂಡ ಚಿಕ್ಕಮಗಳೂರು ಪೊಲೀಸರು ಗಡಿ ದಾಟಲು ಅವಕಾಶ ನೀಡಿದ್ದಾರೆ. ಇಲ್ಲದಿದ್ದರೆ ನಾವು ತೀವ್ರ ಕಷ್ಟದ ಪರಿಸ್ಥಿತಿಗೆ ಸಿಲುಕುತ್ತಿದ್ದೆವು ಎಂದು ಸ್ಥಳೀಯರಾದ ರತ್ನಾಕರ ತಿಳಿಸಿದ್ದಾರೆ.

ಹೊರಗಿನವರ ಓಡಾಟದಿಂದ ಮತ್ತೆ ಸಂಕಷ್ಟ:

ಲಾಕ್‌ಡೌನ್‌ ಆಗಿ ಚಾರ್ಮಾಡಿ ಘಾಟಿ ಸಂಚಾರ ಪೂರ್ತಿ ಬಂದ್‌ ಆದಾಗ ಹೊರಗಿನ ಕೆಲವರು ದಿಡುಪೆ- ಎಳನೀರು ದಾರಿಯಾಗಿ ಗಡಿ ದಾಟಲು ಮುಂದಾಗಿದ್ದರು. ಅವರಿಂದಾಗಿ ಎಳನೀರು ಗ್ರಾಮಸ್ಥರಿಗೂ ಗಡಿ ದಾಟಲು ಕೆಲಕಾಲ ಸಮಸ್ಯೆಯಾಗಿತ್ತು. ಬಳಿಕ ಸಂಸೆ ಗಡಿಯಲ್ಲಿ ಪೊಲೀಸ್‌ ಸಿಬ್ಬಂದಿ ಇಟ್ಟಬಳಿಕ ಪರಿಸ್ಥಿತಿ ಸರಿಯಾಗಿದೆ ಎಂದು ಇನ್ನೋರ್ವ ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮಸ್ಥರೇ ದಾರಿ ಬಂದ್‌ ಮಾಡಿದ್ರು: ಹೊರಗಿನ ಜನ ಈ ದಾರಿಯಾಗಿ ಬಂದು ಸೋಂಕಿನ ಅಪಾಯ ಒಡ್ಡುವುದು ಒಂದೆಡೆಯಾದರೆ, ಅವರಿಂದಾಗಿ ಗಡಿ ದಾಟಲಾಗದ ಅಸಹಾಯಕತೆಯನ್ನು ಅರಿತ ಎಳನೀರು ಗ್ರಾಮಸ್ಥರು ದಿಡುಪೆ ಬಳಿಯಲ್ಲೆ ಕಾಡುದಾರಿಯನ್ನು ಬಂದ್‌ ಮಾಡಿದ್ದಾರೆ. ಮೇಲೆ ಗಡಿಯಲ್ಲಿ ಪೊಲೀಸರೂ ಗೇಟ್‌ ಹಾಕಿದ್ದಾರೆ. ಹಾಗಾಗಿ ಸದ್ಯಕ್ಕೆ ಗ್ರಾಮಸ್ಥರ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಹರೀಶ್‌ ಎಳನೀರು ಹೇಳಿದರು.

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಎಳನೀರು ಪರಿಸರದ ಗುತ್ಯಡ್ಕ, ಬಡಾಮನೆ, ಬಂಗ್ರಪಲ್ಕೆ ಪರಿಸರದಲ್ಲಿ ಸುಮಾರು 120- 140 ಕುಟುಂಬಗಳು ವಾಸಿಸುತ್ತಿವೆ. ದಶಕಗಳಿಂದಲೂ ಇವರು ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮೂಲ ಕಸುಬಾಗಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಕೃಷಿ ಬೆಳೆ ಕೇಳೋರಿಲ್ಲ..

ಈ ಭಾಗದಲ್ಲಿ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವುದರಿಂದ ಸಿಟಿ ಜನರಂತೆ ಲಾಕ್‌ಡೌನ್‌ನ ಏಕತಾನತೆ ಅನುಭವಿಸುತ್ತಿಲ್ಲ. ಆದರೆ ಇಲ್ಲಿನ ಜನ ಬೆಳೆದ ಕೃಷಿ ಬೆಳೆಗಳ ಮಾರಾಟಕ್ಕೆ ತೊಂದರೆಯಾಗಿದೆ. ಅಡಕೆ, ಏಲಕ್ಕಿ, ಬಾಳೆ, ಭತ್ತ, ಕಾಫಿ ಬೆಳೆಯಲಾಗುತ್ತಿದ್ದು ಈಗ ಬಾಳೆ ಗೊನೆಗಳನ್ನು ಗಿಡದಲ್ಲೇ ಬಿಡುವಂತಾಗಿದೆ. ಕೆಲವರು ಕೂಲಿ ಕೆಲಸದಿಂದಲೇ ಜೀವನ ಸಾಗಿಸುತ್ತಿದ್ದರು ಅಂಥವರಿಗೆ ಲಾಕ್‌ಡೌನ್‌ನಿಂದ ಕೂಲಿ ಸಿಗದೆ ಪರಿತಪಿಸುತ್ತಿದ್ದಾರೆ ಎಂದು ಅಲ್ಲಿನ ತಾಪಂ ಸದಸ್ಯ ಜಯರಾಮ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

-ಸಂದೀಪ್‌ ವಾಗ್ಲೆ

Follow Us:
Download App:
  • android
  • ios