ಮಂಗಳೂರು(ಏ.28): ಹಜ್‌ ಯಾತ್ರೆಗೆ ತೆರಳಲು ಕೂಡಿಟ್ಟಹಣದಿಂದ ಆಹಾರ ಸಾಮಗ್ರಿಗಳನ್ನು ಖರೀದಿಸಿ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರಿಗೆ ವಿತರಿಸಿದ ಬಂಟ್ವಾಳ ತಾಲೂಕಿನ ಗೂಡಿನಬಳಿ ನಿವಾಸಿ ಅಬ್ದುಲ್‌ ರಹ್ಮಾನ್‌ ಅವರಿಗೆ ಹಜ್‌ ನಿರ್ವಹಿಸಲು ಬೇಕಾದ ಖರ್ಚನ್ನು ಕೇರಳದ ಪಾಣಕ್ಕಾಡ್‌ ಸೈಯದ್‌ ಮುನವ್ವರಲಿ ಶಿಹಾಬ್‌ ತಂಙಳ್‌ ಭರಿಸಲಿದ್ದಾರೆ ಎಂದು ಶಿಹಾಬ್‌ ತಂಙಳ್‌ ರಿಲೀಫ್‌ ಸೆಲ್‌ ಕರ್ನಾಟಕ ಸಂಚಾಲಕ ಇಶ್ರಾರ್‌ ಗೂಡಿನಬಳಿ ತಿಳಿಸಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಅಬ್ದುಲ್‌ ರಹ್ಮಾನ್‌ ಅವರು ಪವಿತ್ರ ಹಜ್‌ ಯಾತ್ರೆಗೆಂದು ಹಲವು ವರ್ಷಗಳಿಂದ ಹಣ ಕೂಡಿಡುತ್ತಾ ಬಂದಿದ್ದರು. ಲಾಕ್‌ಡೌನ್‌ನಿಂದ ಜನರು ಸಂಕಷ್ಟದಲ್ಲಿರುವುದನ್ನು ಮನಗಂಡ ಅಬ್ದುಲ್‌ ರಹ್ಮಾನ್‌ ಅವರು ಹಜ್‌ ಯಾತ್ರೆಗೆಂದು ತಾನು ಹಲವು ವರ್ಷಗಳಿಂದ ಕೂಡಿಟ್ಟಹಣದಿಂದ ಆಹಾರ ಸಾಮಗ್ರಿ ಖರೀದಿಸಿ ವಿತರಿಸಿದ್ದಾರೆ. ಈ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿತ್ತು.

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಕೇರಳದ ಕೆಲವು ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಮಾಡಿದ್ದವು. ಮಾಧ್ಯಮಗಳ ವರದಿಗಳನ್ನು ಗಮನಿಸಿದ ಕೇರಳದ ಪಾಣಕ್ಕಾಡ್‌ ಸೈಯದ್‌ ಮುನವ್ವರಲಿ ಶಿಹಾಬ್‌ ತಂಙಳ್‌ ಅವರು ಶಿಹಾಬ್‌ ತಂಙಳ್‌ ರಿಲೀಫ್‌ ಸೆಲ್‌ ಕರ್ನಾಟಕ ಸಂಚಾಲಕ ಇಶ್ರಾರ್‌ ಗೂಡಿನಬಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರ ಕೇಳಿ, ಅಬ್ದುಲ್‌ ರಹ್ಮನ್‌ ಅವರ ಹಜ್‌ಯಾತ್ರೆಯ ಖರ್ಚನ್ನು ಭರಿಸುವುದಾಗಿ ತಿಳಿಸಿದ್ದಾರೆ.

ಲಾಕ್‌ಡೌನ್‌ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ

ಈ ಬಗ್ಗೆ ಪ್ರತಿಕ್ರಿಯಿಸಿದ ಇಶ್ರಾರ್‌, ಸೈಯದ್‌ ಪಾಣಕ್ಕಾಡ್‌ ಮುನವ್ವರಲೀ ತಂಙಳ್‌ ಅವರು ದೂರವಾಣಿ ಕರೆ ಮಾಡಿ ಅಬ್ದುಲ್‌ ರಹ್ಮಾನ್‌ ಅವರ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ಅಬ್ದುಲ್‌ ರಹ್ಮಾನ್‌ ಅವರ ಹಜ್‌ ಯಾತ್ರೆಯ ಖರ್ಚನ್ನು ಭರಿಸುವುದಾಗಿ ತಿಳಿಸಿದರು. ಈ ಬಗ್ಗೆ ಅಬ್ದುಲ್‌ ರಹ್ಮಾನ್‌ ಅವರಲ್ಲಿ ಹೇಳಿಕೊಂಡಾಗ ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.