Asianet Suvarna News Asianet Suvarna News

ಗಾಜಾಪಟ್ಟಿಯಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಕುಟುಂಬ

ತನ್ನ ದೇಶದ ಮೇಲೆ ದಾಳಿಸಿದ ಹಮಾಸ್ ಉಗ್ರರನ್ನು ಸದೆಬಡಿಯಲು ಇಸ್ರೇಲ್ ದೇಶ ಪ್ಯಾಲಿಸ್ತೈನ್ ದೇಶದ ಗಾಜಾಪಟ್ಟಿ ಪ್ರದೇಶದ ಮೇಲೆ ನಡೆಸುತ್ತಿರುವ ಯುದ್ದ ಪೀಡಿತ ಪ್ರದೇಶದಲ್ಲಿ ಕನ್ನಡಿಗರ ಕುಟುಂಬವೊಂದು ಸಿಲುಕಿಕೊಂಡಿದೆ.

A Kannadigas family stuck in Gaza snr
Author
First Published Oct 11, 2023, 9:24 AM IST

 ಎಚ್.ಡಿ. ರಂಗಸ್ವಾಮಿ

 ನಂಜನಗೂಡು :  ತನ್ನ ದೇಶದ ಮೇಲೆ ದಾಳಿಸಿದ ಹಮಾಸ್ ಉಗ್ರರನ್ನು ಸದೆಬಡಿಯಲು ಇಸ್ರೇಲ್ ದೇಶ ಪ್ಯಾಲಿಸ್ತೈನ್ ದೇಶದ ಗಾಜಾಪಟ್ಟಿ ಪ್ರದೇಶದ ಮೇಲೆ ನಡೆಸುತ್ತಿರುವ ಯುದ್ದ ಪೀಡಿತ ಪ್ರದೇಶದಲ್ಲಿ ಕನ್ನಡಿಗರ ಕುಟುಂಬವೊಂದು ಸಿಲುಕಿಕೊಂಡಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಶಾಂತಮೂರ್ತಿ ಮತ್ತು ಗೌರಮ್ಮ ಅವರ ಪುತ್ರ ಡಾ. ಡಿ.ಎಸ್‌. ಚೇತನ್. ಪತ್ನಿ ಶಿಲ್ಪಶ್ರೀ ಹಾಗೂ ಒಂದುವರೆ ವರ್ಷದ ಮಗು ಯುದ್ದ ಪೀಡಿತ ಇಸ್ರೇಲ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ.

ಇಸ್ರೇಲ್ ದೇಶದಲ್ಲಿ ಸಿಲಿಕಿರುವ ಡಿ.ಎಸ್. ಚೇತನ್ ದೂರವಾಣಿ ಮೂಲಕ ಮಾತನಾಡಿ, ನಾನು ಪೂಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ರೀಸರ್ಚ್ ಸೆಂಟರ್‌ ನಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್‌. ಡಿ ಪೂರೈಸಿದ್ದೆ. ಕ್ಯಾನ್ಸರ್ ವಿಷಯದ ಮೇಲೆ ನಾನು ಬರೆದ ಪ್ರಾಜೆಕ್ಟ್‌ಗೆ ಇಸ್ರೇಲ್ ದೇಶದಲ್ಲಿ ಉನ್ನತ ಸಂಶೋಧನೆ ನಡೆಸಲು ಅವಕಾಶ ಸಿಕ್ಕಿದ ಕಾರಣ ನಾನು 2021ರ ಅಕ್ಟೋಬರ್‌ ನಲ್ಲಿ ಇಲ್ಲಿಗೆ ಬಂದೆ. ನನ್ನ ಪತ್ನಿ ಶಿಲ್ಪಶ್ರೀ ಮತ್ತು ಪುತ್ರ ಉತಾಷ್ ಕಳೆದ ಏ. 27 ರಂದು ಇಸ್ರೇಲ್‌ಗೆ ಬಂದರು.

ನಾನು ಇಸ್ರೇಲ್ ದೇಶದ ಇಸ್ರೇಲ್ ಒಸೈಮನ್ ಇನ್ಸ್ಟಿಸ್ಟೂಷನ್ ಆಫ್ ಸೈನ್ಸ್ ಎಂಬಲ್ಲಿ ಸಂಶೋಧಕ ವಿದ್ಯಾರ್ಥಿಯಾಗಿದ್ದೇನೆ. ದಕ್ಷಿಣದಲ್ಲಿರುವ ರೆಹೋವತ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದೇವೆ. ಇಲ್ಲಿನ ಪ್ರತಿ ಮನೆಗಳಲ್ಲೂ ಸುರಕ್ಷತಾ ಕೊಠಡಿಯ ಸೌಲಭ್ಯವಿರಬೇಕೆಂಬ ಕಾನೂನು ಇರುವ ಕಾರಣ ಅದರಂತೆಯೇ ಪ್ರತಿ ಮನೆಯ ಕಟ್ಟಡ, ಅಪಾರ್ಟ್‌ಮೆಂಟ್ ಸಹ ನಿರ್ಮಿಸಲಾಗಿದೆ. ಅಲ್ಲದೆ ಪ್ರತಿ ಮೆಟ್ಟಿಲುಗಳನ್ನೂ ಸಹ ಭೂಕಂಪನವಾದರೂ ಸಹ ಕುಸಿಯದ ರೀತಿಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಅಪಾಯದ ಮುನ್ಸೂಚನೆಯಾದ್ದಲ್ಲಿ ನಮಗೆ ಸೈರೈನ್ ಮೂಲಕ ಸಂದೇಶ ನೀಡುತ್ತಾರೆ. ಎಚ್ಚರಿಕೆ ಶಬ್ದ ಬಂದ 90 ಸೆಕೆಂಡ್‌ ನಲ್ಲಿ ನಾವು ಸುರಕ್ಷತಾ ಕೊಠಡಿಗೆ ತೆರಳಬೇಕು. ನಾವು ವಾಸಿಸುವ ಅಪಾರ್ಟ್‌ಮೆಂಟ್‌ ನಲ್ಲಿ ಆಕ್ಸಿಜನ್ ವ್ಯವಸ್ಥೆಯಿರುವ ಸುರಕ್ಷತಾ ಕೊಠಡಿಯಿದ್ದು, ಅದರಲ್ಲಿಯೇ ಆಶ್ರಯ ಪಡೆದಿದ್ದೇವೆ. ಕಳೆದ ಮೂರು ದಿನಗಳಿಂದಲೂ ಸಹ ಮಾರುಕಟ್ಟೆ ತೆರಳಿದ್ದೇವು. ಆದರೂ ವಿರಳವಾಗಿ ಓಡಾಟ ನಡೆಸುತ್ತಿದ್ದರು. ಯುದ್ದದಿಂದಾಗಿ ಯಾವುದೇ ರೀತಿಯ ಬೆಲೆ ಹೆಚ್ಚಾಗಿಲ್ಲ, ನಮಗೆ ಭಾರತೀಯ ರಾಯಭಾರ ಕಚೇರಿಯಿಂದ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು. ಅಪಾಯದ ಮುನ್ಸೂಚನೆ ಇದ್ದಲ್ಲಿ ಸಂದೇಶ ನೀಡುತ್ತಾರೆ. ಕಳೆದ ಮೂರು ದಿನಗಳ ಹಿಂದೆ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಸಂದೇಶ ಬಂದಿತ್ತು. ಆದರೆ ಅ. 10ರ ಸಂಜೆ 4.30ರಲ್ಲಿ ಈಗಷ್ಟೇ ಸೈರನ್ ಮೂಲಕ ಸುರಕ್ಷಾ ಕೊಠಡಿಗೆ ತೆರಳುವಂತೆ ಸೂಚನೆ ಬಂತು. ಅಲ್ಲದೆ ನಮಗೆ ಶೆಲ್ ದಾಳಿ ನಡೆದಿರುವ ದೊಡ್ಡ ಶಬ್ದ ಕೇಳಿಸಿತು. ನಮ್ಮ ಹತ್ತಿರದಲ್ಲೇ ದಾಳಿ ನಡೆದಿರುವ ಸಂಭವವಿದೆ. ಪ್ರಸ್ತುತ ನಾವು ಸುರಕ್ಷವಾಗಿದ್ದೇವೆ. ನಮ್ಮ ಭಾರತೀಯ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಇಸ್ರೇಲ್‌ನಲ್ಲಿ ವೃದ್ದರನ್ನು, ಮಕ್ಕಳನ್ನು, ಸೈನಿಕರನ್ನು ಹತ್ಯೆ ಮಾಡುವುದು ಹೊತ್ತೊಯ್ಯುವುದು ನಡೆಯುತ್ತಲೇ ಇದೆ. ಆ ದೃಶ್ಯಗಳನ್ನು ನೋಡಿದಲ್ಲಿ ನಮಗೆ ಭಯವಾಗುತ್ತದೆ. ಇಲ್ಲಿನ ದೇಶವಾಸಿಗಳಿಗೆ ತಮ್ಮ ದೇಶದ ಬಗ್ಗೆ ಹೆಚ್ಚು ದೇಶಭಕ್ತಿಯಿದೆ. 10 ವರ್ಷದ ಮಕ್ಕಳೂ ಸಹ ಸೈನಿಕರಿಗೆ ಆಹಾರ, ಸೋಪು, ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಭಾರತೀಯರೆಂದರೆ ಅವರಿಗೆ ವಿಶೇಷ ಪ್ರೀತಿಯೂ ಇದೆ ಎಂದರು.

ಭಾರತ ದೇಶ ಇಸ್ರೇಲ್ ದೇಶದಿಂದ ಭಾರತಕ್ಕೆ ಬರುವ ಏರ್ ಇಂಡಿಯಾ ವಿಮಾನವನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ನಮಗೆ ಅಪಾಯದ ಸಮಯದಲ್ಲಿ ದೇಶಕ್ಕೆ ಮರಳು ಸಾಧ್ಯವಿಲ್ಲ, ನಾವು ದುಬೈ, ಇಥಿಯೋಪಿಯಾ ದೇಶದ ಮೂಲಕ ಭಾರತಕ್ಕೆ ಮರಳಬೇಕಾಗುತ್ತದೆ. ನಮಗೆ ಭಾರತೀಯ ವೀಸಾ ಹೊಂದಿರುವ ಕಾರಣ ಆ ದೇಶಗಳಿಗೆ ತಕ್ಷಣಕ್ಕೆ ವೀಸಾ ದೊರಕುವುದಿಲ್ಲ, ಇದರಿಂದ ತೊಂದರೆ ಹೆಚ್ಚಾಗಲಿದೆ. ನಮಗೆ ಲಗೇಜ್ ಸಾಗಿಸಲೂ ಕೂಡ ತೊಂದರೆಯಾಗುತ್ತದೆ. ಆದ್ದರಿಂದ ಭಾರತ ದೇಶ ಇಸ್ರೇಲ್ ದೇಶದ ನಡುವೆ ಇರುವ ಏರ್ ಇಂಡಿಯಾ ನೇರ ವಿಮಾನವನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ನಾನು ಒಬ್ಬ ವಿದ್ಯಾರ್ಥಿಯಾಗಿ ಹೇಳುವುದೇನೆಂದರೆ ನಮಗೆ ದೇಶ ಬಿಡುವಂತೆ ರಾಯಭಾರ ಕಚೇರಿಯಿಂದ ಯಾವುದೇ ಸಂದೇಶ ಬಂದಿಲ್ಲ. ಆದ ಕಾರಣ ಭಾರತ ದೇಶದಲ್ಲಿರುವ ಪೋಷಕರು ತಮ್ಮ ಮಕ್ಕಳ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ನಾವು ಇಲ್ಲಿ ಸುರಕ್ಷತೆಯಿಂದ ಇದ್ದೇವೆ ಎಂದರು.

ಚೇತನ್ ಅವರ ತಂದೆ ಶಾಂತಮೂರ್ತಿ, ಸಹೋದರಿ ಲಾವಣ್ಯ ಪತ್ರಿಕೆಯೊಂದಿಗೆ ಮಾತನಾಡಿ, ನನ್ನ ಅಣ್ಣ ಚೇತನ್ ಕರೆ ಮಾಡಿದ್ದರು. ನಾವು ಇಸ್ರೇಲ್ ದೇಶದ ಮಧ್ಯಭಾಗದ ರೆಹೋವತ್ ಎಂಬ ಪ್ರದೇಶದ ಜನವಸತಿ ಪ್ರದೇಶದಲ್ಲಿ ಸುರಕ್ಷಿತವಾಗಿದ್ದೇವೆ. ನಾವು ವಾಸಿಸುವ ಪ್ರದೇಶದಲ್ಲಿ ಯಾವುದೇ ಶೆಲ್‌ ದಾಳಿ ನಡೆದಿಲ್ಲ, ಆದರೆ ಬಾಂಬ್ ಸ್ಪೋಟದ ಸದ್ದು ಕೇಳಿಸುತ್ತದೆ. ಅಕ್ಕಪಕ್ಕದ ಪ್ರದೇಶದಲ್ಲಿ ಶೆಲ್‌ ದಾಳಿಯ ಪುಡಿಗಳು ಉದುರುತ್ತಿವೆ. ಅಪಾಯದ ಮುನ್ಸೂಚನೆ ಇದ್ದಲ್ಲಿ ಸರ್ಕಾರ ಸೈರೈನ್ ಶಬ್ದ ಮೂಲಕ ನಮಗೆ ಎಚ್ಚರಿಕೆ ನೀಡುತ್ತಾರೆ. ಆಗ ನಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಆಕ್ಸಿಜನ್ ವ್ಯವಸ್ಥೆಯಿರುವ ಸುರಕ್ಷತಾ ಕೊಠಡಿಯಿದೆ. ಎಚ್ಚರಿಕೆ ಶಬ್ದ ಬಂದ ಕೂಡಲೇ ಕೊಠಡಿಗೆ ತೆರಳಿ ಬಾಗಿಲು, ಕಿಟಕಿಗಳನ್ನು ಮುಚ್ಚಿ ಆಕ್ಸಿಜನ್ ಹಾಕಿಕೊಳ್ಳುತ್ತೇವೆ. ಕಳೆದ ಮೂರು ದಿನದ ಹಿಂದೆಯಷ್ಟೇ ಅಗತ್ಯ ವಸ್ತುಗಳು, ಆಹಾರವನ್ನು ದಾಸ್ತಾನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆಗ ಮಾರುಕಟ್ಟೆಯಲ್ಲಿ ಹೆಚ್ಚಿನ ಜನದಟ್ಟಣೆಯಿತ್ತು. ನಾವು ಆಹಾರ ಮತ್ತು ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ನಮಗೆ ಯಾವುದೇ ಭಯವಿಲ್ಲ, ಎಂದಿದ್ದಾರೆ ಎಂದರು.

Follow Us:
Download App:
  • android
  • ios