ಹಾರ್ಡ್ ರಾಕ್ ಇಂಟರ್ನ್ಯಾಷನಲ್, JSM ಕಾರ್ಪೊರೇಷನ್ ಜೊತೆಗಿನ ಲೈಸೆನ್ಸ್ ಒಪ್ಪಂದವನ್ನು ರದ್ದುಗೊಳಿಸಿದೆ. ಇದರಿಂದಾಗಿ ಬೆಂಗಳೂರಿನ ಮೂರು ಕೆಫೆಗಳು ಸೇರಿದಂತೆ ಭಾರತದಾದ್ಯಂತ ಎಲ್ಲಾ ಹಾರ್ಡ್ ರಾಕ್ ಕೆಫೆಗಳು ಮತ್ತು ರಾಕ್ ಶಾಪ್‌ಗಳು ಮುಚ್ಚಲಿವೆ. 

ಬೆಂಗಳೂರು (ಮಾ.16):ವಿಶ್ವದಾದ್ಯಂತ ಸಂಗೀತ ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರಾಗಿರುವ ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಕಂಪನಿಯು JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಸಂಬಂಧಿತ ಸಂಸ್ಥೆಗಳೊಂದಿಗಿನ ತನ್ನ ಲೈಸೆನ್ಸ್‌ ಒಪ್ಪಂದಗಳನ್ನು ರದ್ದು ಮಾಡಿದೆ. ಇದರಿಂದಾಗಿ ಭಾರತದಾದ್ಯಂತ ಎಲ್ಲಾ ಹಾರ್ಡ್ ರಾಕ್ ಕೆಫೆಗಳು ಮತ್ತು ರಾಕ್ ಶಾಪ್‌ಗಳನ್ನು ನಡೆಸುವ ಆಪರೇಟರ್‌ ಹಕ್ಕನ್ನು ಕೊನೆಗೊಳಿಸಲಾಗಿದೆ ಎಂದು ಕಂಪನಿಯು ಮಾರ್ಚ್ 16, 2026 ರಂದು ಘೋಷಿಸಿದೆ.

Add Asianetnews Kannada as a Preferred SourcegooglePreferred

ಒಟ್ಟು 10 ಸ್ಥಳಗಳಲ್ಲಿ ಇರುವ ಹಾರ್ಡ್‌ ರಾಕ್‌ ಕೆಫೆ ಹಾಗೂ ರಾಕ್‌ಶಾಪ್‌ಅನ್ನು ಬಂದ್‌ ಮಾಡುವ ನಿರ್ಧಾರವಾಗಿದೆ. ಇದರಲ್ಲಿ ಬೆಂಗಳೂರಿನ ಮೂರು ಕೆಫೆಗಳಿವೆ. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಹಾರ್ಡ್‌ ರಾಕ್‌ ಕೆಫೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವೈಟ್‌ಫೀಲ್ಡ್‌ನಲ್ಲಿರುವ ಕೆಫೆಯೊಂದಿಗೆ ಚಂಡೀಗಢ, ಚೆನ್ನೈ, ಹೈದರಾಬಾದ್, ಹೈದರಾಬಾದ್ ಹೈಟೆಕ್ ಸಿಟಿ, ಕೋಲ್ಕತ್ತಾ, ನವದೆಹಲಿ ಮತ್ತು ಪುಣೆ ಅಲ್ಲಿರುವ ಕೆಫೆ ಬಂದ್‌ ಆಗಲಿದೆ.

ಗೋವಾದ ಹಾರ್ಡ್ ರಾಕ್ ಹೋಟೆಲ್ ವಿಭಜನೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಎಂದಿನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಸ್ಪಷ್ಟಪಡಿಸಿದೆ. ಗೋವಾ ಆಸ್ತಿಯನ್ನು ಪ್ರತ್ಯೇಕ ಘಟಕವು ನಿರ್ವಹಿಸುತ್ತದೆ ಮತ್ತು JSM ಕಾರ್ಪೊರೇಷನ್‌ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದಿದೆ.

ಅಡುಗೆ ಮನೆಗೆ ಎಂಟ್ರಿಯಾಗಲಿದೆ ಹಾರ್ಡ್‌ ರಾಕ್‌ ಬ್ರ್ಯಾಂಡ್‌

ಕೆಫೆಗಳು ಮುಚ್ಚುತ್ತಿದ್ದರೂ, ಹಾರ್ಡ್ ರಾಕ್ ಬ್ರ್ಯಾಂಡ್ ಈಗ ಭಾರತೀಯರ ಅಡುಗೆ ಮನೆಗೆ ಪ್ರವೇಶಿಸಲು ಸಜ್ಜಾಗಿದೆ. ಇಬಿಜಿ ಗ್ರೂಪ್ (EBG Group) ಜೊತೆಗಿನ ಹೊಸ ಸಹಭಾಗಿತ್ವದ ಮೂಲಕ ಕಂಪನಿಯು ಪ್ರೀಮಿಯಂ ಕಿಚನ್ ಅಪ್ಲೈಯನ್ಸ್‌ಗಳನ್ನು (ಮನೆಬಳಕೆಯ ಉಪಕರಣಗಳು) ಪರಿಚಯಿಸುತ್ತಿದೆ. ಪ್ರೀಮಿಯಂ ಕಾಫಿ ಮೆಷಿನ್‌ಗಳು ಮತ್ತು ಸಣ್ಣ ಕಿಚನ್ ಅಪ್ಲೈಯನ್ಸ್‌ಗಳು ಈ ಸರಣಿಯಲ್ಲಿ ಬರಲಿವೆ. ಬ್ರ್ಯಾಂಡ್‌ನ ಶೈಲಿಗೆ ತಕ್ಕಂತೆ ಸಂಗೀತ ಪ್ರೇರಿತ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನ ಇರಲಿದೆ. ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇವು ಲಭ್ಯವಾಗಲಿವೆ.