Asianet Suvarna News Asianet Suvarna News

Bengaluru: ಕೋವಿಡ್‌ನಿಂದ ಆರ್ಥಿಕ ಸಂಕಷ್ಟ: ಹೋಟೆಲ್‌ಗಳಿಗೆ ಶೇ.50 ತೆರಿಗೆ ವಿನಾಯ್ತಿ

*  ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ನಗರದ ಉದ್ಯಮಿಗಳಿಗೆ ಬಿಗ್‌ ರಿಲೀಫ್‌
*  ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಗೆ ರಿಯಾಯ್ತಿ
*  ನೋಂದಣಿಯಾದ ಸದಸ್ಯರಿಗೆ ಮಾತ್ರ ರಿಯಾಯಿತಿ
 

50 Percent Tax Exemption for Hotels Due to Covid Crisis in Bengaluru grg
Author
Bengaluru, First Published Feb 12, 2022, 12:47 PM IST | Last Updated Feb 12, 2022, 12:47 PM IST

ಬೆಂಗಳೂರು(ಫೆ.12):  ಕೋವಿಡ್‌(Covid-19) ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನಾ ಪಾರ್ಕ್‌ಗಳಿಗೆ 2021-22ನೇ ಹಣಕಾಸು ವರ್ಷದಲ್ಲಿ(Financial Year) ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಬಿಬಿಎಂಪಿ(BBMP) ಆದೇಶಿಸಿದೆ.

ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನಾ ಪಾರ್ಕ್ ಮಾಲೀಕರು ಶೇ.50ರಷ್ಟು ಆಸ್ತಿ ತೆರಿಗೆಯಿಂದ(Property Tax) ರಿಯಾಯಿತಿ ಪಡೆಯಲು ಕರ್ನಾಟಕ ಪ್ರವಾಸೋದ್ಯಮ ಸೌಲಭ್ಯಗಳ ಕಾಯ್ದೆ(ಕರ್ನಾಟಕ ಟೂರಿಸಂ ಟ್ರೇಡ್‌ ಫೆಸಿಲಿಟೇಷನ್‌ ಆ್ಯಂಡ್‌ ರೆಗ್ಯೂಲೇಷನ್‌ ಆ್ಯಕ್ಟ್ ) ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ(Department of Tourism) ನೋಂದಾಯಿಸಬೇಕು. ಈ ಸಂಬಂಧ ವೆಬ್‌ಸೈಟ್‌ನಲ್ಲಿ ನೋಂದಣಿಯಾದ ಸದಸ್ಯರಿಗೆ ರಿಯಾಯಿತಿ ನೀಡಬೇಕು ಎಂದು ಸೂಚಿಸಲಾಗಿದೆ.

Tax Due: ಸಂಭ್ರಮ್ ಕಾಲೇಜು ಎದುರು ತಮಟೆ ಬಾರಿಸಿ ನೊಟೀಸ್ ನೀಡಿದ ಬಿಬಿಎಂಪಿ

ಸದರಿ ಸ್ವತ್ತಿಗೆ 2020-21ನೇ ಸಾಲಿನವರೆಗೆ ಪೂರ್ಣ ಆಸ್ತಿ ತೆರಿಗೆಯನ್ನು ಪಾವತಿಸಿದ್ದಲ್ಲಿ ಮಾತ್ರ ಅರ್ಜಿಯನ್ನು ರಿಯಾಯಿತಿಗಾಗಿ ಮುಂದಿನ ಪರಿಶೀಲನೆಗೆ ಪರಿಗಣಿಸಬೇಕು. ಹೋಟೆಲ್‌(Hotel), ರೆಸಾರ್ಟ್‌(Resort), ರೆಸ್ಟೋರೆಂಟ್‌(Restaurant) ಮತ್ತು ಮನರಂಜನಾ ಪಾರ್ಕ್‌ಗಳಿಗೆ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕಾಗಿ ಸ್ವತ್ತನ್ನು ಉಪಯೋಗಿಸುತ್ತಿದ್ದಲ್ಲಿ ಇತರೆ ಉಪಯೋಗದ ವಿಸ್ತೀರ್ಣಕ್ಕೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ 2021-22ನೇ ಸಾಲಿನಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ಹೆಚ್ಚುವರಿ ಮೊತ್ತವನ್ನು ಮುಂಬರುವ ಸಾಲಿಗೆ ಹೊಂದಾಣಿಕೆ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಸಂಬಂಧ ವಲಯ ಮಟ್ಟದ ನೌಕರರು, ಅಧಿಕಾರಿಗಳು ವಿವರವಾದ ಸ್ಪಷ್ಟ ಶಿಫಾರಸಿನೊಂದಿಗೆ ಬಿಬಿಎಂಪಿ ವಿಶೇಷ ಆಯುಕ್ತರು(ಕಂದಾಯ) ಇವರಿಗೆ ಸಲ್ಲಿಸಬೇಕು. ಸದರಿ ರಿಯಾಯಿತಿ ಪಡೆಯಲು ಸಲ್ಲಿಸಿದ ಅರ್ಜಿಗಳನ್ನು ವರ್ಗವಾರು ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಬೇಕು. ಈ ಸಮಿತಿಯು ಕ್ಲೇಮು ಅಥವಾ ಬಿಲ್ಲುಗಳನ್ನು ಸರ್ಕಾರದಿಂದ ಹಿಂಬರಿಸಲು ಆರ್ಥಿಕ ಇಲಾಖೆಗೆ ವರದಿ ಸಲ್ಲಿಸಬೇಕೆಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಕೊರೋನಾ ಇದ್ರೂ ಬಿಬಿಎಂಪಿ ಭರ್ಜರಿ ಆಸ್ತಿ ತೆರಿಗೆ ಸಂಗ್ರಹ

ಬೆಂಗಳೂರು: ಕೊರೋನಾ(Coronavirus) ಎರಡು ಮತ್ತು ಮೂರನೇ ಅಲೆಯ ನಡುವೆಯೂ ನಗರದಲ್ಲಿ(Bengaluru) ಆಸ್ತಿ ತೆರಿಗೆಯಲ್ಲಿ(Property Tax) ಉತ್ತಮ ಸಾಧನೆ ಮಾಡಿರುವ ಬಿಬಿಎಂಪಿ(BBMP), ಪ್ರಸಕ್ತ ಸಾಲಿನ ಕಳೆದ ಒಂಬತ್ತು ತಿಂಗಳಲ್ಲಿ ಬರೊಬ್ಬರಿ 2,589 ಕೋಟಿ ತೆರಿಗೆ ಸಂಗ್ರಹಿಸಿದೆ.

ಬಿಬಿಎಂಪಿಗೆ ಪ್ರಮುಖ ಆದಾಯ ಮೂಲದಲ್ಲಿ ಒಂದಾಗಿರುವ ಆಸ್ತಿ ತೆರಿಗೆಯಲ್ಲಿ ಕೊರೋನಾ ಆರ್ಥಿಕ ನಷ್ಟದ ನಡುವೆಯು ಬಿಬಿಎಂಪಿ ಅಧಿಕಾರಿಗಳು ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಈ ಕಾರಣದಿಂದ ಒಟ್ಟು ಆನ್‌ಲೈನ್‌ ಹಾಗೂ ಚಲನ್‌ ಮೂಲಕ 2021-22ರಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು .2,589 ಕೋಟಿ ತೆರಿಗೆ ಸಂಗ್ರಹಿಸಿದ್ದಾರೆ. ಈ ತೆರಿಗೆ ಪೈಕಿ ಏಪ್ರಿಲ್‌ನಲ್ಲೇ ಅಧಿಕ .796 ಕೋಟಿ ಹಾಗೂ ನವೆಂಬರ್‌ನಲ್ಲಿ ಅತೀ ಕಡಿಮೆ .86 ಕೋಟಿ ಪಾವತಿ ಆಗಿದೆ.

Tax Dues : ಬೆಂಗಳೂರಿನ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಬೀಗ

2019-20ರ ಸಾಲಿನಲ್ಲಿ ಬಿಬಿಎಂಪಿ ಒಟ್ಟು 2681 ಕೋಟಿ ಮತ್ತು 2020-21 ವರ್ಷದಲ್ಲಿ .2777 ಕೋಟಿ ತೆರಿಗೆ ಬಿಬಿಎಂಪಿ ಬೊಕ್ಕಸ ಸೇರಿದೆ. ಈ ಎರಡು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ಮೂರು ತಿಂಗಳ ಮುನ್ನವೇ ಡಿಸೆಂಬರ್‌ ಅಂತ್ಯಕ್ಕೆ 2,589 ಕೋಟಿ ತೆರಿಗೆಯನ್ನು ಕಟ್ಟಡಗಳ ಮಾಲಿಕರು ಪಾವತಿಸಿದ್ದಾರೆ. ಒಟ್ಟಾರೆ ಈ ಆರ್ಥಿಕ ವರ್ಷಾಂತ್ಯಕ್ಕೆ ಅಧಿಕ ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿ ಬುಧವಾರ ಬಿಬಿಎಂಪಿ ತೆರಿಗೆ ವಸೂಲಾತಿ ಅಭಿಯಾನ ನಡೆಸಿದ್ದಲ್ಲದೇ, ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ನೋಟಿಸ್‌ ಜಾರಿ ಸೇರಿದಂತೆ ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕ್ರಮ ವಹಿಸಿದೆ. ಕೆಲವು ಆಸ್ತಿ ತೆರಿಗೆ ಪ್ರಕರಣಗಳು ನ್ಯಾಯಾಲಯದಲ್ಲಿವೆ(Court) ಎನ್ನಲಾಗಿದೆ.
 

Latest Videos
Follow Us:
Download App:
  • android
  • ios