Tax Dues : ಬೆಂಗಳೂರಿನ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಬೀಗ
- ಎರಡು ಬಾರಿ ಅವಕಾಶ ನೀಡಿದ್ದರೂ ಆಸ್ತಿ ತೆರಿಗೆ ಪಾವತಿಸಲು ವಿಫಲ
- ಮಲ್ಲೇಶ್ವರದ ಮಂತ್ರಿಮಾಲ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳು ಮತ್ತೆ ಬೀಗ
ಬೆಂಗಳೂರು (ಡಿ.07): ಎರಡು ಬಾರಿ ಅವಕಾಶ ನೀಡಿದ್ದರೂ ಆಸ್ತಿ ತೆರಿಗೆ (PropertyTax) ಪಾವತಿಸಲು ವಿಫಲವಾದ ಮಲ್ಲೇಶ್ವರದ (Malleshwaram) ಮಂತ್ರಿ ಮಾಲ್‌ಗೆ(Mantri Mall) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ BBMP) ಅಧಿಕಾರಿಗಳು ಮತ್ತೆ ಬೀಗ ಜಡಿದು ಬಿಸಿ ಮುಟ್ಟಿಸಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಮಂತ್ರಿಮಾಲ್‌ಗೆ ಬೀಗ ಹಾಕಿದ್ದಾರೆ.ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿಮಾಲ್‌ಗೆ ನ.15ರಂದು ಬೀಗ ಹಾಕಿದ ಸಂದರ್ಭದಲ್ಲಿ ನವೆಂಬರ್ ಅಂತ್ಯದೊಳಗೆ 2018ರಿಂದ ಈವರೆಗೂ ಬಾಕಿ ಇದ್ದ ಅಸಲು ಮತ್ತು ಬಡ್ಡಿ ಸೇರಿದಂತೆ ಬರೋಬ್ಬರಿ 33.82 ಕೋಟಿ ರು. ತೆರಿಗೆಯನ್ನು ಪಾವತಿಸುವುದಾಗಿ ಮಂತ್ರಿಮಾಲ್ ಆಡಳಿತ ಮಂಡಳಿ ಬಿಬಿಎಂಪಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿತ್ತು. ಆದ್ದರಿಂದ ಮಾಲ್ ತೆರೆಯಲು ಪಾಲಿಕೆ ಅನುಮತಿ ನೀಡಿತ್ತು. ಆದರೆ ನವೆಂಬರ್ ಅಂತ್ಯದೊಳಗೆ ಮಂತ್ರಿಮಾಲ್ ಆಸ್ತಿ ತೆರಿಗೆಯನ್ನು ಕಟ್ಟಲು ವಿಫಲವಾದ ಕಾರಣ ಮತ್ತೆ ಮಾಲ್‌ಗೆ ಬೀಗ ಹಾಕಲಾಗಿದೆ.
ಆಸ್ತಿ ತೆರಿಗೆ (Tax) ಪಾವತಿ ಬಾಕಿ ಇದ್ದ ಕಾರಣ ಕಳೆದ ಅಕ್ಟೋಬರ್‌ನಲ್ಲಿ ಪಾಲಿಕೆ ಮಂತ್ರಿಮಾಲ್‌ಗೆ ಬೀಗ ಹಾಕಿತ್ತು. ಈ ವೇಳೆ ಮಂತ್ರಿಮಾಲ್ ಆಡಳಿತ ಮಂಡಳಿ ಡಿಡಿ (DD) ಮೂಲಕ 5 ಕೋಟಿ ರು. ಪಾವತಿಸಿತ್ತು. ಬಾಕಿ ಉಳಿದ ಆಸ್ತಿ ತೆರಿಗೆಯನ್ನು ಅ.31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿತ್ತು. ಆದರೆ, ತೆರಿಗೆಯನ್ನು ನಿಗದಿತ ವೇಳೆಯಲ್ಲಿ ಪಾವತಿಸದ ಕಾರಣ ನವೆಂಬರ್ ಎರಡನೇ ವಾರದಲ್ಲಿ ಮಾಲ್‌ಗೆ ಮತ್ತೆ ಬೀಗ ಹಾಕಲಾಯಿತು. ಆಗ ಮಂತ್ರಿ ಮಾಲ್ ನವೆಂಬರ್ ಅಂತ್ಯದೊಳಗೆ ತೆರಿಗೆ ಪಾವತಿಸುವುದಾಗಿ ಮಾಡಿಕೊಂಡ ಮನವಿಗೆ ಪಾಲಿಕೆ ಒಪ್ಪಿಕೊಂಡಿತ್ತು. ಈಗ ನವೆಂಬರ್ ಅಂತ್ಯಗೊಂಡರೂ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲ್‌ಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ (BBMP) ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ಮಾಹಿತಿ ನೀಡಿದರು.
ಮಂತ್ರಿಮಾಲ್ ಆಡಳಿತ ಮಂಡಳಿ 2018-19ರಲ್ಲಿ ರು.12.47 ಕೋಟಿ, 2019-20ರಲ್ಲಿ ರು.10.84 ಕೋಟಿ, 2020-21ರಲ್ಲಿ ರು.9.21 ಕೋಟಿ ಹಾಗೂ 2021-22ರಲ್ಲಿ .6.95 ಕೋಟಿ ಸೇರಿ ಒಟ್ಟು ರು.39.49 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಿತ್ತು. ಇದರಲ್ಲಿ ಆಸ್ತಿ ತೆರಿಗೆ ಮೊತ್ತ ರು.27.22 ಕೋಟಿಗಳಾಗಿದ್ದು, ಬಡ್ಡಿ ರು.12.26 ಕೋಟಿಗಳಾಗಿದೆ. ಜೊತೆಗೆ ರು.400 ದಂಡ ಮತ್ತು ಘನ ತ್ಯಾಜ್ಯದ ಸೆಸ್ ಮೊತ್ತ ರು.28,800 ಒಳಗೊಂಡಿದೆ. ಇದರಲ್ಲಿ ರು. 5 ಕೋಟಿಯನ್ನು ಅಕ್ಟೋಬರ್‌ನಲ್ಲಿ ಪಾವತಿ ಮಾಡಿದ್ದರು.
10 ಕೋಟಿ ಚೆಕ್ ಬೌನ್ಸ್
2018-19ನೇ ಸಾಲಿಗೆ ಸಂಬಂಧಿಸಿದಂತೆ ಕಳೆದ ವರ್ಷ 10,43,81,045 ರು.ಗೆ ಚೆಕ್ ನೀಡಲಾಗಿದ್ದು, ಬ್ಯಾಂಕಿನ ಖಾತೆಯಲ್ಲಿ (Bank Account) ಸಾಕಷ್ಟುಹಣವಿಲ್ಲದ ಕಾರಣ ಅಮಾನ್ಯಗೊಂಡಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಸ್ತಿ ತೆರಿಗೆ ಪಾವತಿಸದ ಮಂತ್ರಿಮಾಲ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ. ಈಗಾಗಲೇ ಹಲವು ಬಾರಿ ಅವರಿಗೆ ಆಸ್ತಿ ತೆರಿಗೆ ಪಾವತಿಸಲು ಕಾಲಾವಕಾಶ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಇತರರ ಬಗ್ಗೆಯೂ ವಲಯ ಜಂಟಿ ಆಯುಕ್ತರು ಕ್ರಮ ಜರುಗಿಸಲಿದ್ದಾರೆ.
- ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತ
ಮಂತ್ರಿಮಾಲ್ ಆಡಳಿತ ಮಂಡಳಿ ಸಂಪೂರ್ಣ ತೆರಿಗೆ ಕಟ್ಟದಿದ್ದರೆ ಬೀಗ ತೆರೆಯುವುದಿಲ್ಲ. ತೆರಿಗೆ ಕಟ್ಟದಿದ್ದರೆ ಚರಾಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಏಕಾಏಕಿ ಮುಟ್ಟುಗೋಲು ಸರಿಯಲ್ಲ. ಹೀಗಾಗಿ ಬೀಗ ಹಾಕಿದ್ದೇವೆ. ಮತ್ತೆ ಅರ್ಧ ತೆರಿಗೆ ಕಟ್ಟಿಬಾಗಿಲು ತೆರೆಯುವಂತೆ ಅನುಮತಿ ಕೇಳಿದರೆ ಮೇಲಾಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ.
- ಶಿವಸ್ವಾಮಿ, ಪಶ್ಚಿಮ ವಲಯ ಜಂಟಿ ಆಯುಕ್ತ