ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯು ಅಪಾರ ಪ್ರಮಾಣ ಫಾಸ್ಪೇಟ್ ನಿಕ್ಷೇಪವನ್ನು ಪತ್ತೆಹಚ್ಚಿದೆ. ಪ್ರಸ್ತುತ ಮೂರನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ, ಈ ಆವಿಷ್ಕಾರ ದೇಶದ ಕೃಷಿ, ತಂತ್ರಜ್ಞಾನ ಮತ್ತು ರಕ್ಷಣಾ ವಲಯಗಳಿಗೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

 ಕೊಪ್ಪಳ (ಫೆ.21): ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಫಾಸ್ಪೇಟ್ ನಿಕ್ಷೇಪ ಪತ್ತೆಯಾಗಿದ್ದು, ಶೋಧ ಕಾರ್ಯ ಭರದಿಂದ ಸಾಗಿದೆ. ಪ್ರಾಥಮಿಕ ಪ್ರಯೋಗದಿಂದ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಮೂರನೇ ಹಂತದಲ್ಲಿ 6 ಬೋರ್‌ವೆಲ್ ಮೂಲಕ ನಿಕ್ಷೇಪದ ಆಳ ಮತ್ತು ಅಗಲ ಪತ್ತೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಇದು ಕರ್ನಾಟಕದಲ್ಲಿ ಪತ್ತೆಯಾದ ಗಮನಾರ್ಹ ಫಾಸ್ಪೇಟ್ ಸಂಪತ್ತಾಗಿದೆ ಎಂದು ಹೇಳಲಾಗಿದೆ. ಭಾರತದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಅನ್ವೇಷಣೆ ನಡೆಸಿದ್ದು, ಬಹುತೇಕ ನಿಖರವಾಗಿರುವ ಹಿನ್ನೆಲೆ ಅದರ ಆಳ ಮತ್ತು ಅಗಲ ಹಾಗೂ ಪ್ರಮಾಣ ಪತ್ತೆ ಮಾಡುವ ಕಾರ್ಯ ನಡೆದಿದೆ.

ಜಿಲ್ಲಾ ಕೇಂದ್ರ ಕೊಪ್ಪಳದಿಂದ ಕೇವಲ 12-14 ಕಿ.ಮೀ. ದೂರದಲ್ಲಿರುವ ಡೊಂಬರಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಿಕ್ಷೇಪ ಪತ್ತೆಯಾಗಿದೆ. ಸರಿಸುಮಾರು 5.58 ಚ.ಕಿ.ಮೀ. ಸುತ್ತಳತೆಯಲ್ಲಿ ನಿಕ್ಷೇಪ ಇರುವುದು ಮೂರನೇ ಹಂತದ ಸಂಶೋಧನೆಯಿಂದ ತಿಳಿದು ಬಂದಿದೆ.

ಇದು ರಾಜ್ಯದಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿರುವ ಹೊಸ ಸಂಪತ್ತಿನ ನಿಕ್ಷೇಪವಾಗಿರುವುದು ವಿಶೇಷ. ಇದರಿಂದ ಕೃಷಿ, ತಂತ್ರಜ್ಞಾನ ಮತ್ತು ರಕ್ಷಣಾ ವಲಯಕ್ಕೆ ಭಾರಿ ಅನುಕೂಲವಾಗಲಿದೆ. ವಿದೇಶದ ಮೇಲೆ ಅವಲಂಬನೆ ತಗ್ಗಲಿದೆ. ಸ್ಥಳೀಯವಾಗಿಯೇ ಫಾಸ್ಪೇಟ್ ನಿಕ್ಷೇಪ ಪತ್ತೆ ಆಗಿರುವುದರಿಂದ ಆರ್ಥಿಕವಾಗಿಯೂ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ರೇರ್ ಅರ್ಥ ಎಲಿಮೆಂಟ್ಸ್ ಸಹ ಪತ್ತೆ ಆಗುತ್ತಿರುವುದು ಕುತೂಹಲ ಮೂಡಿಸಿದೆ.

6 ಬೋರ್‌ವೆಲ್:

ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ನಾಗನಗೌಡ ನಂದಿನಗೌಡ್ರ ಹಾಗೂ ಶಂಕ್ರಪ್ಪ ಮಾಟ್ರ ಅವರಿಗೆ ಸೇರಿದ ಹೊಲ ಸೇರಿದಂತೆ 6 ಸ್ಥಳಗಳಲ್ಲಿ ಕಳೆದ ಹದಿನೈದು ದಿನಗಳಿಂದ ಬೋರ್‌ವೆಲ್ ಕೊರೆಯಲಾಗುತ್ತಿದೆ. ಅದರಿಂದ ಹೊರಬರುವ ಬಂಡೆಯ ರೋಲ್ ಸಂಗ್ರಹಿಸಿ, ಹೆಚ್ಚಿನ ಸಂಶೋಧನೆಗೆ ಕಳುಹಿಸಿ ಕೊಡಲಾಗುತ್ತದೆ. ಬೋರ್‌ವೆಲ್‌ ಕೊರೆದು, ಅದನ್ನು ರೂಲ್ ನಂತೆ ಮೇಲಕ್ಕೆತ್ತಿ ಸಂಗ್ರಹಿಸಲಾಗುತ್ತದೆ. ನಾಲ್ಕಾರು ಅಡಿಯ ಲೆಕ್ಕಾಚಾರದಲ್ಲಿ ಪ್ಯಾಕ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

ಫಾಸ್ಪೇಟ್ ಇರಬಹುದಾದ ಪ್ರಮಾಣ:

ಈಗ ಮೂರನೇ ಹಂತದಲ್ಲಿ ಸಂಶೋಧನೆಯಾಗಿರುವ ಲೆಕ್ಕಾಚಾರದಲ್ಲಿ 5.58 ಚದರ ಕಿ.ಮೀ. ವ್ಯಾಪ್ತಿಯಲ್ಲಿ 6.24 ಶೇಕಡಾ ಪಿ2ಜೀರೋ5 ದರ್ಜೆಯ 32.8 ಲಕ್ಷ ಟನ್ ಹಾಗೂ 4.26 ಶೇಕಡಾ ಪಿ2 ಜೀರೋ 5 ದರ್ಜೆಯ 156.9 ಲಕ್ಷ ಟನ್ ಸಂಗ್ರಹ ಇರುವ ಅಂದಾಜು ಮಾಡಲಾಗಿದ್ದು, ಇದು ಅಪರೂಪ ಎಂದು ಹೇಳಲಾಗಿದೆ. ಇದು ದೇಶದ ಕೃಷಿ, ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರದ ಉದ್ಯಮದಲ್ಲಿ ದೊಡ್ಡ ಕ್ರಾಂತಿಗೆ ನಾಂದಿಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಬಲ್ಡೋಟಾ ಕಂಪನಿಯಿಂದಲೇ ಶೋಧ:

ಕೊಪ್ಪಳ ಬಳಿ ₹54 ಸಾವಿರ ಕೋಟಿ ವೆಚ್ಚದ ಬೃಹತ್ ಕಾರ್ಖಾನೆ ಹಾಕುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಲ್ಡೋಟಾ ಕಂಪನಿಯ ಆರ್ ಎಂಎಂಎಲ್ ಸಂಸ್ಥೆಯೇ ಈಗ ಶೋಧ ಕಾರ್ಯ ಪ್ರಾರಂಭಿಸಿದೆ.

ಹತ್ತು ವರ್ಷಗಳಿಂದ ಸಂಶೋಧನೆ:

ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ಬಳಿ ಖನಿಜ ಸಂಶೋಧನೆ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದ್ದು, ಈಗ ಅದಕ್ಕೆ ಮೂರ್ತ ರೂಪ ಬಂದಿದೆ. ಈಗ ಅಧಿಕೃತವಾಗಿ ಕಚೇರಿ ತೆರೆದು, ಬೋರ್‌ವೆಲ್ ಕೊರೆಯುತ್ತಾ ಸಂಶೋಧನೆ ನಡೆಸಲಾಗುತ್ತಿದೆ.

ನಮ್ಮ ಹೊಲದಲ್ಲಿಯೇ ಕಳೆದ 15-20 ದಿನಗಳಿಂದ ಬೋರ್‌ವೆಲ್‌ ಕೊರೆಯುತ್ತಿದ್ದು, ನಾಲ್ಕಾರು ನೂರು ಅಡಿಯ ಅಳದವರೆಗೂ ಕೊರೆಯುತ್ತಿದ್ದಾರೆ. ಕೊರೆಯವುದು ಮುಂದುವರಿದಿದೆ. ಫಾಸ್ಪೇಟ್ ಪತ್ತೆಯಾಗಿದೆ ಎಂದು ಹೇಳುತ್ತಿದ್ದಾರೆಯಾದರೂ ನನಗೆ ಹೆಚ್ಚಿನ ಮಾಹಿತಿ ಇಲ್ಲ.

-ನಾಗನಗೌಡ ನಂದಿನಗೌಡ್ರ, ಸ್ಥಳೀಯರು.

ಡೊಂಬರಳ್ಳಿ ಗ್ರಾಮದ ಸುತ್ತಮುತ್ತ ಫಾಸ್ಪೇಟ್ ಇರುವುದು ಗೊತ್ತಾಗಿದೆ ಎಂದು ಸರ್ವೇ ಮಾಡುತ್ತಿದ್ದಾರೆ. ಬೋರ್‌ವೆಲ್ ಕೊರೆಯುತ್ತಿದ್ದಾರೆ. ಏರಿಯಾ ನಿಗದಿ ಮಾಡುತ್ತಿದ್ದಾರೆ. ಇನ್ನು ನಾಲ್ಕಾರು ವರ್ಷ ಸಂಶೋಧನೆ ನಡೆಯುತ್ತದೆಯಂತೆ.

-ಶಂಕ್ರಪ್ಪ ಮಾಟ್ರ, ಡೊಂಬರಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ.