ಮಂಗಳೂರು(ಮೇ 16): ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ಕೊರೋನಾ ಮಹಾಮಾರಿ ಆಘಾತ ನೀಡಿದೆ. ಮೇ 12ರಂದು ದುಬೈನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅನಿವಾಸಿ ಭಾರತೀಯರಲ್ಲಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ 15 ಮಂದಿಗೆ ಕೋವಿಡ್‌-19 ಪಾಸಿಟಿವ್‌ ವರದಿ ಬಂದಿದೆ.

ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್‌ನ ಮಹಿಳೆಯೊಬ್ಬರಿಗೂ ಸೋಂಕು ತಗುಲಿದೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 16 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 50ಕ್ಕೇರಿದೆ.

18ರಂದು ಮತ್ತೊಂದು ವಿಮಾನ: 170 ಪ್ರಯಾಣಿಕರ ನಿರೀಕ್ಷೆ

ಮೇ 12ರಂದು ದುಬೈನಿಂದ ಆಗಮಿಸಿದ ವಿಮಾನದಲ್ಲಿ ಒಟ್ಟು 179 ಮಂದಿ ಇದ್ದರು. ಇವರಲ್ಲಿ 125 ಮಂದಿಯನ್ನು (ಉಡುಪಿ, ಉತ್ತರ ಕನ್ನಡದವರೂ ಸೇರಿ) ಮಂಗಳೂರಿನ 10 ವಿವಿಧ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. 45 ಮಂದಿ ಉಡುಪಿಗೆ ತೆರಳಿ ಕ್ವಾರಂಟೈನ್‌ನಲ್ಲಿದ್ದರೆ, 5 ಮಂದಿ ಉತ್ತರ ಕನ್ನಡಕ್ಕೆ ತೆರಳಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಈ ಎಲ್ಲರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರಲ್ಲಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದವರ ಪೈಕಿ 15 ಮಂದಿಗೆ, ಉಡುಪಿಯಲ್ಲಿದ್ದವರ ಪೈಕಿ 5 ಮಂದಿಗೆ ಪಾಸಿಟಿವ್‌ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸುರತ್ಕಲ್‌ ಮಹಿಳೆ ಸೇರಿ ಮಂಗಳೂರಿನಲ್ಲಿ ಸೋಂಕು ದೃಢಪಟ್ಟಎಲ್ಲರನ್ನೂ ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸುರತ್ಕಲ್‌ ಮಹಿಳೆಗೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದರು.

ಮದುವೆಗೆ ಬಂದವರ ಎಡವಟ್ಟು: ಈಗ ನವದಂಪತಿ ಕ್ವಾರಂಟೈನ್‌ಗೆ!

ಒಂದೇ ಕುಟುಂಬದ ಮೂವರಿಗೆ ಸೋಂಕು: ಈ ಸೋಂಕಿತರಲ್ಲಿ 6 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಸೇರಿದ್ದಾರೆ. 45ರ ಹರೆಯದ ಪತಿ, 33ರ ಹರೆಯದ ಪತ್ನಿ ಹಾಗೂ 6 ವರ್ಷದ ಬಾಲಕಿಗೆ ಸೋಂಕು ತಗಲಿದೆ. ಶುಕ್ರವಾರ ದೃಢಪಟ್ಟಸೋಂಕಿತರಲ್ಲಿ 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ವಿಮಾನದಲ್ಲಿ 38 ಮಂದಿ ಗರ್ಭಿಣಿಯರೂ ಇದ್ದು, ಅವರಾರ‍ಯರಿಗೂ ಸೋಂಕು ಇರುವುದು ಪತ್ತೆಯಾಗಿಲ್ಲ. ರಾಜ್ಯ ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಆಗಮಿಸಿದ ಗರ್ಭಿಣಿಯರಲ್ಲಿ ಸೋಂಕು ಇಲ್ಲದಿದ್ದರೆ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭೀರಕ ರಸ್ತೆ ಅಪಘಾತ: 24 ಕಾರ್ಮಿಕರ ದುರ್ಮರಣ, 36 ಮಂದಿಗೆ ಗಾಯ!

ಇನ್ನೂ 2 ಹಂತದ ಟೆಸ್ಟ್‌: ವಿಮಾನದಿಂದ ಬಂದವರೆಲ್ಲರ ಮೊದಲ ಹಂತದ ಪರೀಕ್ಷೆ ಮಾತ್ರ ನಡೆದಿದೆ. ಎರಡನೇ ಹಂತದಲ್ಲಿ 5-7 ದಿನದೊಳಗೆ ಇನ್ನೊಮ್ಮೆ ಪರೀಕ್ಷೆ ನಡೆಸಲಾಗುವುದು. ಅಂತಿಮವಾಗಿ 12ನೇ ದಿನ ಎಲ್ಲ ಸ್ಯಾಪಲ್‌ ಪಡೆದು ಮರಳಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಹೇಳಿದರು.