ಬಳ್ಳಾರಿ(ಮೇ.16): ಆಂಧ್ರಪ್ರದೇಶದಿಂದ ಪರವಾನಗಿ ಪಡೆಯದೆ ಮದುವೆಗೆ ಬಂದವರ ದೆಸೆಯಿಂದಾಗಿ ಒಂದು ದಿನದ ಹಿಂದಷ್ಟೇ ಹಸೆಮಣೆಯೇರಿದ್ದ ವಧೂವರರು ಇದೀಗ ಕ್ವಾರಂಟೈನ್‌ ಆಗಿರುವ ಘಟನೆ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದೆ. ಅಮರಾಪುರದ ಯುವಕನಿಗೆ ಆಂಧ್ರಪ್ರದೇಶದ ಕಣೇಕಲ್‌ ಎಲ್‌.ವಿ. ನಗರ ನಿವಾಸಿಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.

ಗುರುವಾರ ಮದುವೆಯಾಗಿದ್ದು ಮದುವೆಗೆ ಆಂಧ್ರದಿಂದ ಕೆಲವರು ಆಗಮಿಸಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ತಹಸೀಲ್ದಾರ್‌ ನಾಗರಾಜ್‌ ವಧೂವರರು ಸೇರಿದಂತೆ ಒಟ್ಟು 8 ಜನರನ್ನು ಕ್ವಾರಂಟೈನ್‌ ಮಾಡಿದ್ದಾರೆ.

ಮದುವೆಗೆ ಆಂಧ್ರಪ್ರದೇಶದ ಕಣೇಕಲ್‌ನಿಂದ ಕ್ರೂಸರ್‌ ವಾಹನದಲ್ಲಿ ಬರುತ್ತಿದ್ದ 16 ಜನರನ್ನು ದಾರಿ ಮಧ್ಯೆಯೇ ತಡೆದ ಬಳ್ಳಾರಿ ಪೊಲೀಸರು, ರಾತ್ರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿ ಬೆಳಗ್ಗೆ ವಾಪಾಸು ಊರಿಗೆ ಕಳಿಸಿದ್ದಾರೆ.

ಪೊಲೀಸರು ಇವರನ್ನು ವಿಚಾರಣೆ ನಡೆಸಿದಾಗ ಅಮರಾಪುರದಲ್ಲಿ ಮದುವೆಗೆ ಹೊರಟಿರುವುದಾಗಿ ಎಂದು ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ.