Mysuru : ಇನ್ನೂ ನಾಲ್ಕು ದಿನ ಮಳೆ ಬರುವ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಅ.12 ರಿಂದ 16 ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್ ತಿಳಿಸಿದ್ದಾರೆ.
ಮೈಸೂರು(ಅ.112): ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಅ.12 ರಿಂದ 16 ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್ ತಿಳಿಸಿದ್ದಾರೆ.
ರೈತರು (Farmers ) ಅಕ್ಟೋಬರ್ ತಿಂಗಳಿನಲ್ಲಿ ಬಿತ್ತನೆ ಮಾಡುಬಹುದಾದ ಬೆಳೆಗಳು (Crops) ಮತ್ತು ತಳಿಗಳು ಹೀಗಿವೆ, ರಾಗಿ- ಇಂಡಾಫ್-7, ಇಂಡಾಫ್-9 ಕೆಎಂಆರ್-301. ಮುಸುಕಿನಜೋಳ- ಹೇಮ, ನಿತ್ಯಶ್ರೀ, ಎಂಎಎಚ್-14-5. ಅವರೆ- ಎಚ್‌ಎ-3, ಎಚ್‌ಎ-4. ಕಡಲೆ- ಅಣ್ಣೀಗೇರಿ-1, ಜೆಜಿ-11, ವಿಶಾಲ್, ಕೆಎಕೆ-2. ತೋಟಗಾರಿಕೆ ಬೆಳೆಗಳು- ಬೆಳ್ಳುಳ್ಳಿ, ಬಟಾಣಿ, ಕ್ಯಾರೇಟ್, ಟೊಮೆಟೋ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸು, ಬೀಟ್ ರೂಟ್, ತಿಂಗಳ ಹುರುಳಿಕಾಯಿ, ತೊಂಡೆ ಇತ್ಯಾದಿ. ಭತ್ತದ ಬೆಳೆಯಲ್ಲಿ ಗರಿ ಸುರುಳಿ ಹುಳು ಕಂಡು ಬಂದಿದ್ದು, ಇದರ ಹತೋಟಿಗಾಗಿ ಕ್ವಿನಾಲ್ ಫಾಸ್ 25 ಇಸಿ- 2.0 ಮಿ.ಲೀ ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್‌ಸಿ- 0.5 ಮಿ.ಲೀ ಅಥವಾ ಪ್ಲೂಬೆಂಡಿಅಮೈಡ್ 48 ಎಸ್‌ಸಿ- 0.08 ಮಿ.ಲೀ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಟೊಮೆಟೋ, ಮೆಣಸಿನಕಾಯಿ, ಬದನೆ ತರಕಾರಿ ಬೆಳೆಗಳ ಸಸಿಗಳನ್ನು ಟ್ರೈಕೋಡರ್ಮ (4 ಗ್ರಾಂ/ಲೀ. ನೀರಿಗೆ) ಜೀವಾಣುಗಳಿಂದ ಉಪಚಾರ ಮಾಡುವುದರಿಂದ ಸೊರಗು ರೋಗವನ್ನು ತಡೆಗಟ್ಟಬಹುದು ಎಂದು ಅವರು ಸಲಹೆ ನೀಡಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 94498 69914, ದೂ. 0821- 2591267 ಸಂಪರ್ಕಿಸಬಹುದು.
ವಿಜಯನಗರದಲ್ಲಿ ಮಳೆ
ವಿಜಯನಗರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಹೂವಿನಹಡಗಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಸುಮಾರು ಒಂದೂವರೆ ತಾಸು ಉತ್ತಮ ಮಳೆಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹರಪನಹಳ್ಳಿ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಕೊಟ್ಟೂರು ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಆಗಾಗ ಮಳೆ ಸುರಿದಿದೆ. ಕೂಡ್ಲಿಗಿ ತಾಲೂಕಿನಲ್ಲೂ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ.
ಬಸ್ ನಿಲ್ದಾಣ ಜಲಾವೃತ
ಪಟ್ಟಣದಲ್ಲಿ ಬೆಳಗಿನ ಜಾವ ಸುಮಾರು 2 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣ ಮತ್ತೆ ಜಲಾವೃತವಾಗಿ ಕೆಲಕಾಲ ಸಮಸ್ಯೆ ಎದುರಿಸುವಂತಾಯಿತು.
ಬಸ್ ನಿಲ್ದಾಣದೊಳಗೆ ಸುಮಾರು 2 ಅಡಿಗಳಷ್ಟುನೀರು ತುಂಬಿದ ಪರಿಣಾಮ ಪ್ರಯಾಣಿಕರು ನಿಲ್ದಾಣಕ್ಕೆ ಕಾಲಿಡಲು ಪರದಾಡುವಂತಾಯಿತು. ನಿಲ್ದಾಣದೊಳಗೆ ಪಾರ್ಕಿಂಗ್ ಮಾಡಿದ್ದ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗಲು ಹರಸಾಹಸ ಪಡಬೇಕಾಯಿತು.
ಬಸ್ ನಿಲ್ದಾಣವನ್ನು ಪುಟ್ಟಕೆರೆಯೊಂದನ್ನು ಮುಚ್ಚಿದ ಅದೇ ಜಾಗದಲ್ಲಿ ನಿರ್ಮಿಸಿರುವುದರಿಂದ ಸಾಧಾರಣ ಮಳೆ ಬಿದ್ದರೂ ಬಸ್ ನಿಲ್ದಾಣದೊಳಗೆ ನೀರು ತುಂಬಿಕೊಳ್ಳುತ್ತಿದೆ. ಇಲ್ಲಿನ ವಾಣಿಜ್ಯ ಮಳಿಗೆಗಳ ಮುಂದಿನ ಒಳಚರಂಡಿಯಲ್ಲಿಯೂ ನೀರು ಸುಲಲಿತವಾಗಿ ಹರಿದು ಹೋಗುತ್ತಿಲ್ಲ.
ನೀರು ತುಂಬಿದಾಗ ಸ್ಥಳಕ್ಕೆ ಬಂದು ಭೇಟಿ ನೀಡುವ ಅಧಿಕಾರಿಗಳು ಸುಲಲಿತವಾಗಿ ನೀರು ಹೋಗಲು ಯಾವುದೇ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರೋಪಾಯ ಕ್ರಮದ ಬಗ್ಗೆ ಕಳೆದ 1-2 ವರ್ಷದಿಂದಲೂ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದು ಬಸ್ ನಿಲ್ದಾಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಮಳೆಯಿಂದ ಬಸ್ ನಿಲ್ದಾಣ ಸಂಪೂರ್ಣ ಮುಳುಗಡೆಯಾಗಿತ್ತು. ಬಸ್ ನಿಲ್ದಾಣ ಮತ್ತು ಅದರ ಅಕ್ಕ ಪಕ್ಕ ಮತ್ತು ಮುಂಭಾಗದ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ವರ್ತಕರಿಗೆ ಲಕ್ಷಾಂತರ ರು. ನಷ್ಟವಾಗಿತ್ತು.
ನಿಲ್ದಾಣದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಬೋಟ್ ಮೂಲಕ ಹೊರತರಲಾಗಿತ್ತು. ಆ ಸಮಯದಲ್ಲಿಯೂ ಹತ್ತಾರು ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದರು. ಜೊತೆಗೆ ಹಿರಿಯ ಎಂಜಿನಿಯರ್ ಕೂಡಾ ಬಂದು ಸಮಸ್ಯೆ ಪರಿಹಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಭರವಸೆ ನೀಡಿದ್ದರು.
ಅಂದು ಭರವಸೆ ನೀಡಿ ಹೋದ ಅಧಿಕಾರಿಗಳು ನಂತರ ಈ ಕಡೆ ತಿರುಗಿಯೂ ನೀಡಿಲ್ಲ. ಒತ್ತುವರಿಯಾಗಿರುವ ಕಾಲುವೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಪುರಸಭೆ ಅಧಿಕಾರಿಗಳ ಕ್ರಮಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.