ಬೆಳಗಾವಿ: ಕಲ್ಲೋಳ ಬ್ಯಾರೇಜ್‌ಗೆ 35 ಕೋಟಿ ಮಂಜೂರು ಮಾಡಿ, ಕಾರಜೋಳ

* ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗೋವಿಂದ ಕಾರಜೋಳ ನಿರ್ದೇಶನ
* ಜಲಜೀವನ ಮಿಷನ್‌ಗೆ ಹಲಗಲಿ ಯಶೋಗಾಥೆ ಸ್ಫೂರ್ತಿ
* ಜಲಾಶಯ ಭರ್ತಿಯಾಗಿರುವುದು ಸಮಾಧಾನಕರ ಸಂಗತಿ

35 Crore Sanction to Kallol Barrage Says DCM Govind Karjol grg

ಬೆಳಗಾವಿ(ಜು.19): ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್‌ ಹೊಸದಾಗಿ ನಿರ್ಮಿಸುವ 5 ಕೋಟಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಜಲಜೀವನ ಮಿಷನ್‌, ಬಹುಗ್ರಾಮ ಕುಡಿಯುವ ನೀರು, ಕೋವಿಡ್‌ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 1980ರಲ್ಲಿ ನಿರ್ಮಿಸಲಾಗಿರುವ 0.60 ಟಿ.ಎಂ.ಸಿ. ಸಾಮರ್ಥ್ಯದ ಕಲ್ಲೋಳ 40 ವರ್ಷ ಹಳೆಯ ಬ್ಯಾರೇಜ್‌ ಇರುವುದರಿಂದ ನೀರು ಸಂಗ್ರಹ ಆಗುತ್ತಿಲ್ಲ. 35 ಕೋಟಿ ವೆಚ್ಚದಲ್ಲಿ ಹೊಸ ಬ್ಯಾರೇಜ್‌ ನಿರ್ಮಾಣದ ಅಗತ್ಯವಿದೆ. ಸರ್ಕಾರದ ಮಟ್ಟದಲ್ಲಿ ಪ್ರಸ್ತಾವ ಬಾಕಿ ಉಳಿದಿದೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ಸಿ.ಡಿ.ಪಾಟೀಲ ಅವರು ಸಚಿವರ ಗಮನ ಸೆಳೆದರು.

ತಕ್ಷಣವೇ ದೂರವಾಣಿ ಮೂಲಕ ನೀರಾವರಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿದ ಡಿಸಿಂ ಕಾರಜೋಳ, ಕೂಡಲೇ 35 ಕೋಟಿ ವೆಚ್ಚದ ಕಲ್ಲೋಳ ಬ್ಯಾರೇಜ್‌ ನಿರ್ಮಾಣ ಪ್ರಸ್ತಾವಕ್ಕೆ ಮಂಜೂರಾತಿ ನೀಡುವಂತೆ ತಿಳಿಸಿದರು. ಕಲ್ಲೋಳ ಬ್ಯಾರೇಜ್‌ ನಿರ್ಮಾಣದಿಂದ ರಾಜಾಪುರ ಹಾಗೂ ಕಾಳಮ್ಮವಾಡಿ ಬ್ಯಾರೇಜ್‌ನಿಂದ ಬಿಡುಗಡೆಯಾಗುವ ನೀರು ಸಂಗ್ರಹಕ್ಕೆ ಅನುಕೂಲವಾಗುತ್ತದೆ. ಜಲಾಶಯ ಭರ್ತಿಯಾಗಿರುವುದು ಸಮಾಧಾನಕಾರಿಯಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಕಡಿಮೆ ಇರುವುದರಿಂದ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ ಎಂದರು.

ಹಂತ ಹಂತವಾಗಿ ನೀರು ಬಿಡಲು ಮಹಾರಾಷ್ಟ್ರ ಒಪ್ಪಿಗೆ: ಕಾರಜೋಳ

ಜಲಜೀವನ ಮಿಷನ್‌ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುವುದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಕ್ಟೋಬರ ಮೊದಲ ವಾರದ ವೇಳೆಗೆ ಎಲ್ಲ ಪೂರ್ವಸಿದ್ಧತೆ ಕೈಗೊಂಡು ನಂತರ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಡಿಸಿಎಂ ಕಾರಜೋಳ ತಿಳಿಸಿದರು.

2100 ಕೋಟಿ ಮಂಜೂರು:

ಜಲಜೀವನ ಮಿಷನ್‌ ಮೂಲಕ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 8.52 ಲಕ್ಷ ಮನೆಗಳಿಗೆ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲುಕೇಂದ್ರ ಸರ್ಕಾರ . 2100 ಕೋಟಿ ಮಂಜೂರು ಮಾಡಿದೆ. 918 ಜನವಸತಿಗಳಿಗೆ ನೂರಕ್ಕೆ ನೂರರಷ್ಟುನೀರು ಪೂರೈಯಿಸಲು ಡಿಪಿಆರ್‌ ಆಗಿದೆ. ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ತಿಳಿಸಿದರು.ಬೆಳಗಾವಿ ಜಿಲ್ಲೆಗೆ ದೊಡ್ಡ ಪ್ರಮಾಣದ ಅನುದಾನ ಮುಂದಿನ ವರ್ಷದಲ್ಲಿ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದೂ ಸೂಚಿಸಿದರು.

ಹೊಸ ಕೊಳವೆ ಬಾವಿ ಕೊರೆಯುವ ಬದಲು ಇರುವ ಕೊಳವೆಬಾವಿಗಳ ದುರಸ್ತಿ, ಮರುಪೂರಣಕ್ಕೆ ಆದ್ಯತೆ ನೀಡಬೇಕು. ನದಿಗಳ ಮೇಲ್ಮಟ್ಟದ ನೀರು ಬಳಕೆ ಮಾಡಿಕೊಂಡು ಜಲಜೀವನ ಮಿಷನ್‌ ಯೋಜನೆ ಮೂಲಕ ಎಲ್ಲ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಯೋಜನೆ ಅನುಷ್ಠಾನದ ಬಳಿಕ ವಿದ್ಯುತ್‌ ಬಿಲ್‌ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದರು.

ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸಪ್ರೆಸ್‌ ಫೀಡರ ಲೈನ್‌ ಮೂಲಕ ವಿದ್ಯುತ್‌ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಜಿಪಂ ಸಿಇಒ ದರ್ಶನ ಮಾತನಾಡಿ, 1.91 ಲಕ್ಷ ಮನೆಗಳಿಗೆ ನಳದ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಮನೆಗಳಿಗೆ ಜಲಜೀವನ ಮಿಷನ್‌ ಯೋಜನೆಯಡಿ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ಜಲಜೀವನ ಮಿಷನ್‌ ಯೋಜನೆಗೆ ಒಟ್ಟಾರೆ 2100 ಕೋಟಿ ಮಂಜೂರಾಗಿದೆ. ಇದುವರೆಗೆ 147 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 106 ಕೋಟಿ ಖರ್ಚಾಗಿದೆ ಎಂದರು.

ಚಿಕ್ಕೋಡಿಯಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಿ: ಕಾರಜೋಳ

ಬಿತ್ತನೆ ಉತ್ತಮ:

ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ. ಆದ್ದರಿಂದ ಬೀಜ​ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದರೆ ಮಕ್ಕಳಿಗೆ ಚಿಕಿತ್ಸೆ ನೀಡುವಾಗ ತಾಯಂದಿರಿಗೂ ಅವಕಾಶ ನೀಡಬೇಕಾಗುತ್ತದೆ. ಆದ್ದರಿಂದ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಅಗತ್ಯವಿದೆ ಎಂದು ಜಿಪಂ ಸಿಇಒ ದರ್ಶನ ಪ್ರತಿಪಾದಿಸಿದರು.

ಇದಕ್ಕೆ ಸ್ಪಂದಿಸಿದ ಡಿಸಿಎಂ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಜತೆ ದೂರವಾಣಿಯಲ್ಲಿ ಚರ್ಚಿಸಿ ಹದಿನೈದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೂ ಲಸಿಕಾಕರಣದ ಆದ್ಯತಾ ಗುಂಪಿನಲ್ಲಿ ಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿದರು. ಈ ವಿಷಯವನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿ.ಮುನ್ಯಾಳ ಮಾತನಾಡಿ, ಆಕ್ಸಿಜನ್‌ ಉತ್ಪಾದನಾ ಘಟಕ ಇನ್ನೂ ಕೆಲ ತಾಲೂಕುಗಳಲ್ಲಿ ಆರಂಭಿಸುವ ಅಗತ್ಯವಿದೆ. ಚಿಕ್ಕೋಡಿ ಕೋವಿಡ್‌ ತಪಾಸಣಾ ಪ್ರಯೋಗಾಲಯ ಸದ್ಯದಲ್ಲೇ ಕಾರ್ಯಾರಂಭಿಸಲಿದೆ. ಅಗತ್ಯ ತಜ್ಞ ಸಿಬ್ಬಂದಿಯನ್ನು ರಾಜ್ಯಮಟ್ಟದಿಂದ ಒದಗಿಸಲಾಗುವುದು ಎಂದು ಉನ್ನತಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಮೊದಲ ಹಾಗೂ ಎರಡನೇ ಡೋಸ್‌ ಸೇರಿ ಒಟ್ಟಾರೆ 14.74 ಲಕ್ಷ ಲಸಿಕೆ ನೀಡಲಾಗಿದೆ ಎಂದು ಡಾ. ಐ.ಪಿ.ಗಡಾದ ವಿವರಿಸಿದರು.

ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌, ಡಿಸಿ ಎಂ.ಜಿ.ಹಿರೇಮಠ, ಪೊಲೀಸ್‌ ಆಯುಕ್ತ ಡಾ.ಕೆ.ತ್ಯಾಗರಾಜನ್‌, ಅಪರ ಡಿಸಿ ಅಶೋಕ ದುಡಗುಂಟಿ, ಹೆಚ್ಚುವರಿ ಎಸ್ಪಿ ಅಮರನಾಥ್‌ ರೆಡ್ಡಿ ಅನೇಕರಿದ್ದರು.

ಜಲಜೀವನ ಮಿಷನ್‌ಗೆ ಹಲಗಲಿ ಯಶೋಗಾಥೆ ಸ್ಫೂರ್ತಿ

ಜಲಜೀವನ ಮಿಷನ್‌ ಬರಲು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಮತಕ್ಷೇತ್ರದ ಹಲಗಲಿ ಗ್ರಾಮದ ಯಶೋಗಾಥೆ ಕಾರಣ. ಆರು ವರ್ಷಗಳ ಹಿಂದೆ ಹಲಗಲಿ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಮೂಲಕ ಮನೆ ಮನೆಗೆ ನೀರು ಪೂರೈಕೆ ಆರಂಭಿಸಲಾಯಿತು. ಇದರಿಂದ ನೀರು ಪೋಲು ತಡೆಗಟ್ಟುವುದು ಮಾತ್ರವಲ್ಲದೇ ಮೀಟರ್‌ ಅಳವಡಿಸುವ ಮೂಲಕ ಬಿಲ್‌ ಸಂಗ್ರಹ ಸಾಧ್ಯವಾಯಿತು. ಇದರ ಯಶೋಗಾಥೆ ತಿಳಿದು ಕೇಂದ್ರ ಸರ್ಕಾರದ ತಂಡ ಬಂದು ಅಧ್ಯಯನ ನಡೆಸಿತು. ಇದರ ಮಹತ್ವ ಅರಿತು ಜಲಜೀವನ ಮಿಷನ್‌ ಮೂಲಕ ಇಡೀ ದೇಶದ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಭೆಯಲ್ಲಿ ವಿವರಿಸಿದರು.
 

Latest Videos
Follow Us:
Download App:
  • android
  • ios