Asianet Suvarna News Asianet Suvarna News

ಚಿಕ್ಕೋಡಿಯಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಿ: ಕಾರಜೋಳ

* ಲಭ್ಯವಿರುವ ಸರ್ಕಾರಿ ಕಟ್ಟಗಳಲ್ಲಿಯೇ ಪ್ರಯೋಗಾಲಯ ಆರಂಭಿಸಿ
* ಪ್ರವಾಹ ನಿರ್ವಹಣೆ ಸಿದ್ಧತೆಗೆ ಡಿಸಿಎಂ ನಿರ್ದೇಶನ
* ಕೋಯ್ನಾ ಸೇರಿದಂತೆ ವಿವಿಧ ಜಲಾಶಯ ಮಟ್ಟಗಳ ಮೇಲೆ ನಿಗಾ
 

Establish RTPCR Laboratory in Chikkodi Says DCM Govind Karjol grg
Author
Bengaluru, First Published Jun 10, 2021, 3:35 PM IST

ಬೆಳಗಾವಿ(ಜೂ.10): ಚಿಕ್ಕೋಡಿಯಲ್ಲಿ ಕೋವಿಡ್‌ ಪರೀಕ್ಷೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಸಿವಿಲ್‌ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನೇ ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ಕೋವಿಡ್‌ ಹಾಗೂ ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕೋಡಿಯಲ್ಲಿ ಸಾಕಷ್ಟು ಸರ್ಕಾರಿ ಕಟ್ಟಡಗಳು ಲಭ್ಯವಿರುವುದರಿಂದ ಅದರಲ್ಲಿಯೇ ಪ್ರಯೋಗಾಲಯ ಆರಂಭಿಸಬೇಕು. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದರೆ ತಕ್ಷಣವೇ ಕೈಗೊಂಡು ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು.

ಬಿಮ್ಸ್‌ ಮಾದರಿಯಲ್ಲಿ ಚಿಕ್ಕೋಡಿಯಲ್ಲಿ ಪ್ರಯೋಗಾಲಯವನ್ನು ಎರಡು ದಿನಗಳಲ್ಲಿ ಸಿದ್ಧಪಡಿಸಿಕೊಳ್ಳಿ ಎಂದ ಅವರು, ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಅಗತ್ಯವಿರುವ ಖಾಸಗಿ ಅಥವಾ ನಿವೃತ್ತ ವೈದ್ಯರನ್ನು ಕೂಡ ಪಾವತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು ಎಂದರು.

ರಾಜ್ಯದ ಗಡಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಅಗತ್ಯ: ಡಿಸಿಎಂ ಕಾರಜೋಳ

ಬ್ಲ್ಯಾಕ್‌ ಫಂಗಸ್‌ ಸರ್ಜರಿಗೆ ಎರಡರಿಂದ ಮೂರು ಗಂಟೆ ಬೇಕಾಗುತ್ತದೆ. ಹುಬ್ಬಳ್ಳಿ ಕಿಮ್ಸ್‌ ಹಾಗೂ ಗದಗ ವೈದ್ಯಕೀಯ ಕಾಲೇಜಿನಿಂದ ತಲಾ ಒಬ್ಬ ತಜ್ಞರನ್ನು ಕೂಡ ಬಿಮ್ಸ್‌ಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್‌ ಆಡಳಿತ ಮೇಲುಸ್ತುವಾರಿ ಅಧಿಕಾರಿಯಾಗಿರುವ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಹೇಳಿದರು.

ಮಕ್ಕಳ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಿ:

ಸಂಭವನೀಯ 3ನೇ ಅಲೆಯ ವೇಳೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ವರದಿಗಳು ಹೇಳುತ್ತಿವೆ. ಹೀಗಾಗಿ ಈ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬಿಮ್ಸ್‌ ಸೇರಿದಂತೆ ಎಲ್ಲ ತಾಲೂಕುಗಳಲ್ಲಿಯೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಮ್ಸ್‌ ಹಂಗಾಮಿ ನಿರ್ದೇಶಕ ಡಾ.ಕುಲಕರ್ಣಿ ತಿಳಿಸಿದರು.

ಜಿಲ್ಲೆಯ ಮರಣ ಪ್ರಮಾಣ ಶೇ.1.60 ರಷ್ಟಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 976 ಜನರು ಕೋವಿಡ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ 16 ಕೆಎಲ್‌ ಆಕ್ಸಿಜನ್‌ ಬಳಕೆಯಾಗುತ್ತಿದ್ದು, ಸಾಕಷ್ಟು ಆಕ್ಸಿಜನ್‌ ದಾಸ್ತಾನಿದೆ. ರೆಮ್‌ಡೆಸಿವಿರ್‌ ಸೇರಿದಂತೆ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಚಿವರಿಗೆ ಮಾಹಿತಿ ನೀಡಿದರು.

ಗ್ರಾಮಗಳಲ್ಲಿ ಟಾಸ್ಕ್‌ಫೋರ್ಸ್‌ ಮೂಲಕ ಮನೆ ಮನೆ ಸಮೀಕ್ಷೆ ಮಾಡಲಾಗುತ್ತಿದೆ. ಐಸೋಲೇಷನ್‌ ಇದ್ದವರಿಗೆ ಕಿಟ್‌ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದೆ ಎಂದು ಡಿಎಚ್‌ಒ ಡಾ.ಎಸ್‌.ವಿ.ಮುನ್ಯಾಳ ತಿಳಿಸಿದರು.

ಪ್ರವಾಹ ನಿರ್ವಹಣೆ ಸಿದ್ಧತೆಗೆ ಡಿಸಿಎಂ ನಿರ್ದೇಶನ

ಹವಾಮಾನ ವರದಿ ಪ್ರಕಾರ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇ.30 ರಷ್ಟುನೀರು ಸಂಗ್ರಹ ಇರುವುದರಿಂದ ಸದ್ಯಕ್ಕೆ ಪ್ರವಾಹ ಸ್ಥಿತಿ ಉದ್ಭವಿಸುವುದಿಲ್ಲ. ಆದಾಗ್ಯೂ ನೆರೆಯ ಮಹಾರಾಷ್ಟ್ರ ಸೇರಿದಂತೆ ಎಲ್ಲ ಜಲಾಶಯ ಮಟ್ಟಹಾಗೂ ಮಳೆಯ ಪ್ರಮಾಣದ ಮೇಲೆ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಬಿತ್ತನೆ ಬೀಜ ಹಾಗೂ ಗೊಬ್ಬರ ಸಮರ್ಪಕ ವಿತರಣೆಯಾಗಬೇಕು. ಹೆಚ್ಚಿನ ದರಕ್ಕೆ ಬೀಜ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಜಾನುವಾರುಗಳಿಗೆ ನಿಗದಿತ ವೇಳೆಯಲ್ಲಿ ಲಸಿಕೆ ಹಾಕಬೇಕು. ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಅಗತ್ಯ ಮೇವು ದಾಸ್ತಾನು ಇರಬೇಕು. ಮೇವು ಕೊರತೆ ಇದ್ದರೆ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಭುವನಂ ತಂಡದಿಂದ "ಉಷಾರ್" ಕರ್ನಾಟಕ ಕೊರೋನ ಜಾಗೃತಿ ಅಭಿಯಾನ

ಸಚಿವರಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಹಿರೇಮಠ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸತಾರಾ ಸೇರಿದಂತೆ ನೆರೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಕುರಿತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಅರವಿಂದ ಕಣಗಲಿ ಮಾತನಾಡಿ, ಕೋಯ್ನಾ ಸೇರಿದಂತೆ ವಿವಿಧ ಜಲಾಶಯ ಮಟ್ಟಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಲಾಕಡೌನ್‌ ವೇಳೆ ಆರ್ಥಿಕ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸರ್ಕಾರ ಒಟ್ಟಾರೆ ಎರಡು ಪ್ಯಾಕೇಜ್‌ಗಳಲ್ಲಿ 1750 ಕೋಟಿ ಪರಿಹಾರಧನ ಪ್ರಕಟಿಸಿದೆ. ಎಲ್ಲ ವರ್ಗಗಳ ಜನರಿಗೆ ಕೂಡಲೇ ಪರಿಹಾರಧನ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಂಘಟಿತ ಕಾರ್ಮಿಕರ ಪಟ್ಟಿ ಇರುವುದರಿಂದ ಅವರಿಗೆ ನೇರವಾಗಿ ನೆರವು ತಲುಪಲಿದೆ. ಉಳಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ವಿತರಿಸಬೇಕು ಎಂದು ಹೇಳಿದರು.

52 ಸಾವಿರ ಕ್ವಿಂಟಲ್‌ ಬೀಜ ದಾಸ್ತಾನು

ಕಳೆದ ವರ್ಷ ಸಹಾಯಧನದ ಅಡಿ ಒಟ್ಟಾರೆ 48 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಇದರಲ್ಲಿ 38 ಸಾವಿರ ಕ್ವಿಂ. ಸೋಯಾಬಿನ್‌ ಬೀಜ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು. ಈ ಬಾರಿ ಒಟ್ಟಾರೆ 52 ಸಾವಿರ ಕ್ವಿಂಟಲ್‌ ದಾಸ್ತಾನಿದೆ. ಇದುವರೆಗೆ 35 ಸಾವಿರ ಕ್ವಿಂಟಲ್‌ ಮಾರಾಟ ಮಾಡಲಾಗಿದೆ. ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಅಶೋಕ ಕೊಳ್ಳಾ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಇದ್ದರು.
 

Follow Us:
Download App:
  • android
  • ios