Asianet Suvarna News Asianet Suvarna News

ಹಂತ ಹಂತವಾಗಿ ನೀರು ಬಿಡಲು ಮಹಾರಾಷ್ಟ್ರ ಒಪ್ಪಿಗೆ: ಕಾರಜೋಳ

* ಹೋಬಳಿ ಮಟ್ಟದಲ್ಲಿ ಟಿಸಿ ದುರಸ್ತಿ ಕೇಂದ್ರಗಳ ಸ್ಥಾಪನೆ
* ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಲು ಕ್ರಮ 
* ಪ್ರತಿವರ್ಷ ಪ್ರವಾಹ ಬರುವುದು ಸಹಜ ಸ್ಥಿತಿ 
 

Maharashtra Agreed to Release Water in a Phased Manner Says DCM Govind Karjol grg
Author
Bengaluru, First Published Jun 24, 2021, 3:38 PM IST
  • Facebook
  • Twitter
  • Whatsapp

ಬೆಳಗಾವಿ(ಜೂ.24): ಜಲಾಶಯ ಸಂಪೂರ್ಣ ಭರ್ತಿಯಾದಾಗ ಒಮ್ಮೆಲೆ ನೀರು ಬಿಡುಗಡೆ ಮಾಡಿದರೆ ತೊಂದರೆಯಾಗುತ್ತದೆ. ಆದ್ದರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

ಮುಂಗಾರು ಮಳೆಯಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಹಂತ ಹಂತವಾಗಿ ನೀರು ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿದೆ. ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ನದಿ ತೀರದ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. 

ಪ್ರವಾಹ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ವಿದ್ಯುತ್‌ ವ್ಯತ್ಯಯದಿಂದ ತೀವ್ರ ತೊಂದರೆ ಉಂಟಾಗುವುದರಿಂದ ತುರ್ತು ದುರಸ್ತಿಗೆ ಅನುಕೂಲವಾಗುವಂತೆ ಪ್ರತಿ ಹೋಬಳಿ ಮಟ್ಟದಲ್ಲಿ ಟಿಸಿ ದುರಸ್ತಿ ಕೇಂದ್ರಗಳನ್ನು ಆರಂಭಿಸಲು ತಕ್ಷಣವೇ ಲೈಸೆನ್ಸ್‌ ನೀಡಬೇಕು. ಅಗತ್ಯ ಟಿಸಿ ಮತ್ತು ಕಂಡಕ್ಟರ್‌ಗಳನ್ನು ಚಿಕ್ಕೋಡಿ ಉಪ ವಿಭಾಗಕ್ಕೆ ಪೂರೈಸಬೇಕು ಎಂದು ಹೆಸ್ಕಾಂ ಎಂಡಿಗೆ ಸಭೆಯಲ್ಲಿಯೇ ದೂರವಾಣಿ ಮೂಲಕ ನಿರ್ದೇಶಿಸಿದರು. ನದಿತೀರದ ಪ್ರದೇಶಗಳನ್ನು ಹೊಂದಿರುವ ಚಿಕ್ಕೋಡಿ ಉಪ ವಿಭಾಗದಲ್ಲಿ ಖಾಲಿ ಇರುವ ಹೆಸ್ಕಾಂ ಅಧಿಕಾರಿ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೇಳಿದ್ದಾರೆ. 

ಭೀಕರ ಪ್ರವಾಹ: ನೋಡ ನೋಡ್ತಿದ್ದಂತೆ ಕೊಚ್ಚಿ ಹೋದ ಹಸು..!

ಲಸಿಕೆ ಪೂರೈಕೆಗೆ ಪ್ರಯತ್ನ:

ಪ್ರವಾಹದ ವೇಳೆ ವಿದ್ಯುತ್‌ ವ್ಯತ್ಯಯದಿಂದ ಕುಡಿಯುವ ನೀರು ಪೂರೈಕೆ, ನೀರಾವರಿ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸಲಿವೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಇನ್ನೂ ಹೆಚ್ಚಿನ ಲಸಿಕೆ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಯುಕೇಶ ಕುಮಾರ್‌, ಜೂನ್‌ನಲ್ಲಿ ಒಟ್ಟಾರೆ ವಾಡಿಕೆ ಮಳೆಗಿಂತ ಶೇ.94 ರಷ್ಟುಅಧಿಕ ಮಳೆಯಾಗಿದೆ. ಸದ್ಯಕ್ಕೆ ಕೇವಲ 67 ಕ್ಯುಸೆಕ್‌ ನೀರಿನ ಹರಿವು ಇದೆ. ಎರಡೂವರೆ ಲಕ್ಷ ಕ್ಯುಸೆಕ್‌ ನೀರಿನ ಹರಿವು ಇದ್ದರೆ ಮಾತ್ರ ಪ್ರವಾಹ ಸ್ಥಿತಿ ಉದ್ಭವಿಸುತ್ತದೆ ಎಂದು ವಿವರಿಸಿದರು.

ಎಲ್ಲ ತಾಲೂಕುಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್‌.ಡಿ.ಆರ್‌.ಎಫ್‌ ಹಾಗೂ ಎನ್‌.ಡಿ.ಆರ್‌.ಎಫ್‌. ತಂಡಗಳು ನಿಯೋಜಿಸಲಾಗಿದೆ. ನುರಿತ ಈಜುಗಾರರನ್ನು ಗುರುತಿಸಲಾಗಿದ್ದು, ಅಗತ್ಯತೆ ಆಧರಿಸಿ ಅವರ ಸೇವೆಯನ್ನು ಪಡೆದುಕೊಳ್ಳಲಾಗುವುದು. ಇತ್ತೀಚೆಗೆ ಸುರಿದ ಮಳೆಯಲ್ಲಿ 43 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಿಕ್ಕೋಡಿ ಉಪ ವಿಭಾಗದಲ್ಲಿ 168 ಕಾಳಜಿ ಕೇಂದ್ರಗಳನ್ನು ಸಿದ್ಧಪಡಿಸಲಾಗಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಪ್ರವಾಹ ಮುನ್ನೆಚ್ಚರಿಕೆ ಅಗತ್ಯ:

ಪ್ರತಿವರ್ಷ ಪ್ರವಾಹ ಬರುವುದು ಸಹಜ ಸ್ಥಿತಿಯಾಗುತ್ತಿದೆ. ಈ ಬಾರಿ ಆರಂಭದಲ್ಲಿಯೇ ಜಾಸ್ತಿ ಮಳೆಯಾಗಿರುವುದರಿಂದ ಬಹಳಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ವರುಣನ ಅಬ್ಬರ: ಬೆಳಗಾವಿಯ ಹಬ್ಬಾನಟ್ಟಿ ಅಂಜನೇಯ ದೇಗುಲ ಮುಳುಗಡೆ

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕೆಲವೆಡೆ ಶಾಲಾ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಉತ್ತಮ ಸ್ಥಿತಿಯಲ್ಲಿ ಇರುವ ಶಾಲಾ ಕಟ್ಟಡಗಳಲ್ಲಿ ಮಾತ್ರವೇ ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ತಿಳಿಸಿದ್ದಾರೆ. 

ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೋವಿಡ್‌ ನಿರೋಧಕ ಲಸಿಕೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಘಟಕ ತಕ್ಷಣವೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದ್ದಾರೆ. 

ನೆರೆಯ ರಾಜ್ಯದ ಜಲಾಶಯಗಳಿಂದ ನೀರು ಬಿಡುಗಡೆ ಮತ್ತು ಮಳೆಯ ಪ್ರಮಾಣ ಕುರಿತು ನಿಖರ ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವಂತೆ ನಮ್ಮ ರಾಜ್ಯದ ಅಧಿಕಾರಿಗಳನ್ನು ನಿಯೋಜಿಸಲು ಕೂಡ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ತಿಳಿಸಿದ್ದಾರೆ. 
 

Follow Us:
Download App:
  • android
  • ios