ಮಂಗಳೂರು(ಅ.04): ಕಳೆದ 25 ವರ್ಷಗಳಿಂದ ಲಾಭದಲ್ಲಿದ್ದ, ನಿರಂತರವಾಗಿ ಉಪಯುಕ್ತ ಕೃಷಿ ಮಾಹಿತಿ, ಲೇಖನಗಳ ಮೂಲಕ ರೈತರಿಗೆ ವರದಾನವಾಗಿದ್ದ, ಅನೇಕ ಪ್ರಗತಿಪರ ರೈತರನ್ನು ಸೃಷ್ಟಿಸಿದ ಹೆಗ್ಗಳಿಕೆಯ ‘ಸುಜಾತ ಸಂಚಿಕೆ’ ಮಾಸಪತ್ರಿಕೆ ಇನ್ನು ಕೇವಲ ನೆನಪು ಮಾತ್ರ!

ರಾಜ್ಯದಲ್ಲಿರೋದೆ ಬೆರಳೆಣಿಕೆಯ ಕೃಷಿ ಪತ್ರಿಕೆಗಳು. ಅದರಲ್ಲೂ ಪತ್ರಿಕೋದ್ಯಮ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮಂಗಳೂರು ಮೂಲದ ‘ಸುಜಾತ ಸಂಚಿಕೆ’ ಹಳೆಯ ಕೃಷಿ ಪತ್ರಿಕೆಗಳಲ್ಲೊಂದು. ರೈತರಿಗೆ ವೆನಿಲ್ಲಾ ಬೆಳೆಯ ‘ರುಚಿ’ ತೋರಿಸಿದ, ಪ್ರಗತಿಪರ ರೈತರ ಮಾಧ್ಯಮವಾಗಿ ಬೆಳೆದ ಪತ್ರಿಕೆಗೆ ಈಗ ಆರ್ಥಿಕ ಮುಗ್ಗಟ್ಟು ತೀವ್ರವಾಗಿ ಕಾಡುತ್ತಿದೆ. ಹಾಗಾಗಿ ಪತ್ರಿಕೆ ಮುದ್ರಣ ನಿಲ್ಲಿಸಲು ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ.

ಗಬ್ಬೆದ್ದು ನಾರುತ್ತಿದ್ದ ಕೊಟ್ಟಾರ ಮೇಲ್ಸೇತುವೆ ಅಡಿಭಾಗಕ್ಕೆ ಹೊಸಲುಕ್..! 100 ಕ್ಕೂ ಹೆಚ್ಚು ಆಸನ

ಇದೇ ಲಾಸ್ಟ್‌ ಸಂಚಿಕೆ: 25 ಸಂವತ್ಸರಗಳನ್ನು ದಾಟಿ 26ನೇ ವರ್ಷಕ್ಕೆ ಕಾಲಿರಿಸಿದ ಸುಜಾತ ಸಂಚಿಕೆ ಇದುವರೆಗೂ ಒಂದು ಬಾರಿಯೂ ಮುದ್ರಣ ನಿಲ್ಲಿಸಿದ ಉದಾಹರಣೆಯಿಲ್ಲ. ಎಲ್ಲ ಪುಟಗಳೂ ಬಣ್ಣಗಳಲ್ಲೇ ಮುದ್ರಿತವಾಗುತ್ತಿತ್ತು. ಈಗ ಕೊನೆಯದಾಗಿ ಅಕ್ಟೋಬರ್‌ ಸಂಚಿಕೆಯನ್ನು ಬಹುಕಷ್ಟದಲ್ಲಿ ಮುದ್ರಿಸಿ (ಕಪ್ಪು-ಬಿಳುಪು) ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಇದೇ ಲಾಸ್ಟ್‌ ಸಂಚಿಕೆ. ಪತ್ರಿಕೆ ಮುಂದುವರಿಸಬೇಕು ಎನ್ನುವ ಓದುಗರ ಒತ್ತಾಸೆಯ ನಡುವೆಯೂ ಈ ಕೃಷಿ ಪತ್ರಿಕೆ ಇತಿಹಾಸದ ಪುಟ ಸೇರಲಿದೆ.

ದಸರಾ ವೇಷ ಧರಿಸಿ ಕೊರಗರ ಅವಹೇಳನ ಮಾಡಿದ್ರೆ ಶಿಕ್ಷೆ

ಆರ್ಥಿಕ ಮುಗ್ಗಟ್ಟಿಗೇನು ಕಾರಣ?: ಹೆಚ್ಚಿದ ಪ್ರಿಂಟಿಂಗ್‌ ವೆಚ್ಚ, ಜಾಹೀರಾತುದಾರರು ಮತ್ತು ಏಜೆಂಟರಿಂದ ಹಣ ವಾಪಸಾಗದೆ ಇರುವುದು, ಆರ್ಥಿಕ ಮುಗ್ಗಟ್ಟಿನಿಂದಾಗಿ ಜಾಹೀರಾತು ನೀಡಲು ಹೆಚ್ಚಿನವರು ಮುಂದಾಗದೆ ಇರೋದು ಪತ್ರಿಕೆ ಮುಚ್ಚಲು ಮುಖ್ಯ ಕಾರಣ ಎಂದು ಪತ್ರಿಕೆಯ ವ್ಯವಸ್ಥಾಪಕ ಅಶ್ವಿನ್‌ ರಾವ್‌ ತಿಳಿಸಿದ್ದಾರೆ.

ಪೊರಕೆ ಹಿಡಿದ ಬಂಟ್ವಾಳ ತಹಸೀಲ್ದಾರ್‌ ರಶ್ಮಿ

ಹಿಂದೆ ಪತ್ರಿಕೆಗೆ ಬಳಸುವ ಪೇಪರ್‌ ಮೇಲೆ ಮತ್ತು ಮುದ್ರಣದ ಮೇಲೆ ತೆರಿಗೆ ಇರಲಿಲ್ಲ. ಜಿಎಸ್‌ಟಿ ಜಾರಿಯಾದ ಬಳಿಕ ಒಟ್ಟು ಶೇ.17ರಷ್ಟುಹೊರೆ ಬೀಳತೊಡಗಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಪೇಪರಿನ ಬೆಲೆ ಶೇ.10ರಷ್ಟುಹೆಚ್ಚಳವಾಗುತ್ತಿರುವುದರಿಂದ ಪತ್ರಿಕೆಯನ್ನು ಮುಚ್ಚಲಾಗುತ್ತಿದೆ ಎಂದು ಸಂಪಾದಕ ಮತ್ತು ಮಾಲೀಕರಾದ ಡಾ.ಜಿ.ಕೆ. ಹೆಬ್ಬಾರ್‌ ಕೊನೆಯ ಸಂಚಿಕೆಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸರ್ಕಾರದ ಬರುವ ಜಾಹೀರಾತಿನ 1.5 ಲಕ್ಷ ರು. ಮೊತ್ತ ವರ್ಷದಿಂದ ಬಾಕಿ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ.

‘ಪತ್ರಿಕೆಯ ಒಂದು ಪ್ರತಿಗೆ 50 ರು. ಬೆಲೆ ನಿಗದಿಗೊಳಿಸಲಾಗಿದೆ. ಮುದ್ರಣ ವೆಚ್ಚ, ತೆರಿಗೆ ಸೇರಿದಂತೆ ಎಲ್ಲ ವೆಚ್ಚ ಕಳೆದು ಒಂದು ಪ್ರತಿ ಅಚ್ಚು ಹಾಕಲು 35 ರು. ಖರ್ಚಾಗುತ್ತದೆ. ಎಲ್ಲ ಪ್ರತಿಗಳನ್ನು ಅಚ್ಚು ಹಾಕಲು ತಿಂಗಳಿಗೆ ಏನಿಲ್ಲವೆಂದರೂ ಒಂದು ಲಕ್ಷ ರು.ಗಳಷ್ಟುಟರ್ನ್‌ಓವರ್‌ ಬೇಕಾಗುತ್ತದೆ. ಆದರೆ ವಿವಿಧ ಮೂಲಗಳಿಂದ ಬರಬೇಕಾದ ಹಣ ಬಾರದೆ ಪತ್ರಿಕೆ ಅಚ್ಚು ಹಾಕಿಸುವುದು ಸಾಧ್ಯವೇ ಇಲ್ಲದಂತಾಗಿದೆ’ ಎಂದು ಅಶ್ವಿನ್‌ ರಾವ್‌ ತಿಳಿಸಿದರು.

‘ನನ್ನನ್ನು ಹುಲಿ ಅಂಥಾನೂ ಒಪ್ಪಿದ್ದಾರೆ, ಆನೆ ಅಂಥಾನೂ ಒಪ್ಪಿದ್ದಾರೆ’

ಪತ್ರಿಕೆಗೆ ಹಿಂದಿನಿಂದಲೂ ಉತ್ತಮ ಜನಸ್ಪಂದನವಿತ್ತು. ಕೃಷಿ ಕುರಿತು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ, ವಿವರವಾಗಿ ಮಾಹಿತಿ ನೀಡುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಪತ್ರಿಕೆ ರೈತರ ಕೈಸೇರುತ್ತಿತ್ತು. ಈಗ ಮುದ್ರಣ ನಿಲ್ಲಿಸಿದ ವಿಚಾರ ತಿಳಿದ ಬಹಳಷ್ಟುಮಂದಿ ಮುಂದುವರಿಸುವಂತೆ ಕೋರುತ್ತಲೇ ಇದ್ದಾರೆ. ಆದರೆ ಏನು ಮಾಡುವುದು ಎಂದವರು ಖೇದ ವ್ಯಕ್ತಪಡಿಸುತ್ತಾರೆ.

ಕೃಷಿ ಸ್ಥಿತ್ಯಂತರಗಳ ಸಾಕ್ಷಿ

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕೃಷಿಕ ನೆರಿಯ ರಾಘವ ಹೆಬ್ಬಾರ್‌ ಮಾಲೀಕತ್ವದಲ್ಲಿ, ನೆರಿಯ ಗೋಪಾಲಕೃಷ್ಣ ಹೆಬ್ಬಾರ್‌ ಸಂಪಾದಕತ್ವದಲ್ಲಿ ಸುಜಾತ ಪತ್ರಿಕೆ ಶುರುವಾಗಿತ್ತು. ಕೇವಲ ಒಂದು ಸಾವಿರ ಚಂದಾದಾರರಿಂದ ಆರಂಭಗೊಂಡ ಪತ್ರಿಕೆ ಗರಿಷ್ಠ 18 ಸಾವಿರ ಪ್ರಸರಣವನ್ನು ತನ್ನದಾಗಿಸಿಕೊಂಡಿತ್ತು. ದಕ್ಷಿಣ ಕನ್ನಡದಲ್ಲಿ ಮುದ್ರಣವಾದರೂ ರಾಜ್ಯದೆಲ್ಲೆಡೆಯ ಅಪಾರ ಸಂಖ್ಯೆಯ ಓದುಗರನ್ನು ಹೊಂದಿದೆ. ಕಳೆದ ಎರಡೂವರೆ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆದ ಸ್ತಿತ್ಯಂತರಗಳಿಗೆ ಈ ಪತ್ರಿಕೆಯ ಈವರೆಗಿನ ಸಂಚಿಕೆಗಳು ದಾಖಲೆಗಳಾಗಿ ಉಳಿದಿವೆ.

ಜಿಎಸ್‌ಟಿ ಹೊರೆಯಾಯ್ತು:

ಪತ್ರಿಕೆಗೆ ಓದುಗರಿಂದ ಉತ್ತಮ ಸ್ಪಂದನೆ ಇತ್ತು. ಇನ್ನಷ್ಟುಉತ್ತಮವಾಗಿ ಬೆಳೆಯುವ ಹಂಬಲವೂ ಇತ್ತು. ಆದರೆ ಕಳೆದ ಒಂದು ವರ್ಷದಿಂದ ಕಾಗದ ಮತ್ತು ಮುದ್ರಣದ ಮೇಲೆ ಒಟ್ಟು ಶೇ.17ರಷ್ಟುಜಿಎಸ್‌ಟಿ ತೆರಿಗೆ ಬಂತು. ವರ್ಷದಿಂದ ವರ್ಷಕ್ಕೆ ಕಾಗದದ ಬೆಲೆ ಹೆಚ್ಚಳವಾಗುತ್ತಿತ್ತು. ದೂರದೂರುಗಳಿಗೆ ಏಜೆಂಟರ ಮೂಲಕ ಪತ್ರಿಕೆ ವಿತರಣೆ ಮಾಡುವಾಗ ಅದರ ವಸೂಲಾತಿ ಕಷ್ಟವಾಗುತ್ತಿತ್ತು. ಹಣಕಾಸಿನ ತೊಂದರೆಗಳನ್ನು ಹೊಂದಿಸಿಕೊಳ್ಳಲು ಅಸಾಧ್ಯವಾದ ಕಾರಣ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಸಂಪಾದಕರು ಮತ್ತು ಮಾಲೀಕರಾದ ಡಾ.ಜಿ.ಕೆ. ಹೆಬ್ಬಾರ್‌ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಬರೆದಿದ್ದಾರೆ.

-ಸಂದೀಪ್‌ ವಾಗ್ಲೆ