Asianet Suvarna News Asianet Suvarna News

ಬೆಂಗ್ಳೂರಿನ ಸಬ್‌ ಅರ್ಬನ್‌ ರೈಲಿಗಾಗಿ 2 ಸಾವಿರ ಮರಗಳ ಹನನ..!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ದೇವನಹಳ್ಳಿ, ಬೈಯಪನಹಳ್ಳಿಯಿಂದ ಚಿಕ್ಕಬಾಣಾವಾರ, ಕೆಂಗೇರಿ-ದಂಡು-ವೈಟ್‌ಫೀಲ್ಡ್‌ ಹಾಗೂ ರಾಜನಕುಂಟೆಯಿಂದ ಹೀಲಲಿಗೆವರೆಗೆ ಉಪನಗರ ರೈಲು ಯೋಜನೆ ಕಾರಿಡಾರ್‌ಗಳು ನಿರ್ಮಿಸಲಾಗುತ್ತಿದೆ. ಅದರಲ್ಲಿ ರಾಜನಕುಂಟೆಯಿಂದ ಹೀಲಲಿಗೆವರೆಗಿನ ಕಾರಿಡಾರ್‌-4 ನಿರ್ಮಾಣಕ್ಕಾಗಿ 2,138 ಮರಗಳನ್ನು ಕಡಿಯಲು ಗುರುತಿಸಲಾಗಿದೆ.

2000 Trees Cut for Bengaluru Suburban Rail grg
Author
First Published Oct 14, 2023, 6:01 AM IST | Last Updated Oct 14, 2023, 6:01 AM IST

ಗಿರೀಶ್‌ ಗರಗ

ಬೆಂಗಳೂರು(ಅ.14):  ನಗರದ ಸಂಚಾರ ದಟ್ಟಣೆಗೆ ಪರಿಹಾರ ಎನ್ನುವಂತೆ ಜಾರಿಗೊಳ್ಳುತ್ತಿರುವ ಉಪನಗರ ರೈಲು ಯೋಜನೆಗೆ ಸಾವಿರಾರು ಮರಗಳ ಹನನವಾಗಲಿದೆ. ಹೌದು, ಯೋಜನೆಗೆ ಸಂಬಂಧಿಸಿದ ನಾಲ್ಕು ಕಾರಿಡಾರ್‌ಗಳ ಪೈಕಿ ಒಂದು ಕಾರಿಡಾರ್‌ ನಿರ್ಮಾಣಕ್ಕಾಗಿ 2 ಸಾವಿರಕ್ಕೂ ಹೆಚ್ಚಿನ ಮರಗಳ ಹನನ ಮಾಡಲು ಯೋಜಿಸಲಾಗಿದೆ.

ಹಲವು ವರ್ಷಗಳ ಬೇಡಿಕೆ, ಜನರ ಮತ್ತು ಜನಪ್ರತಿನಿಧಿಗಳ ಸತತ ಪ್ರಯತ್ನದಿಂದಾಗಿ ಬೆಂಗಳೂರು ಉಪನಗರ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಅನುದಾನ ನೀಡುತ್ತಿದ್ದು, ನಾಲ್ಕು ಕಾರಿಡಾರ್‌ಗಳ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ದೇವನಹಳ್ಳಿ, ಬೈಯಪನಹಳ್ಳಿಯಿಂದ ಚಿಕ್ಕಬಾಣಾವಾರ, ಕೆಂಗೇರಿ-ದಂಡು-ವೈಟ್‌ಫೀಲ್ಡ್‌ ಹಾಗೂ ರಾಜನಕುಂಟೆಯಿಂದ ಹೀಲಲಿಗೆವರೆಗೆ ಉಪನಗರ ರೈಲು ಯೋಜನೆ ಕಾರಿಡಾರ್‌ಗಳು ನಿರ್ಮಿಸಲಾಗುತ್ತಿದೆ. ಅದರಲ್ಲಿ ರಾಜನಕುಂಟೆಯಿಂದ ಹೀಲಲಿಗೆವರೆಗಿನ ಕಾರಿಡಾರ್‌-4 ನಿರ್ಮಾಣಕ್ಕಾಗಿ 2,138 ಮರಗಳನ್ನು ಕಡಿಯಲು ಗುರುತಿಸಲಾಗಿದೆ.

ವರ್ಷಾಂತ್ಯಕ್ಕೆ ಸಬ್‌ ಅರ್ಬನ್‌ ಸಂಪಿಗೆ ಮಾರ್ಗಕ್ಕೆ ಟೆಂಡರ್‌?

ಒಟ್ಟು 2,364 ಮರಗಳು:

ರಾಜನಕುಂಟೆಯಿಂದ ಹೀಲಲಿಗೆವರೆಗಿನ 36 ಕಿ.ಮೀ. ಉದ್ದದ ಮಾರ್ಗಕ್ಕೆ ಸಂಬಂಧಿಸಿದಂತೆ ಕೆ-ರೈಡ್‌ ಕಳೆದೆರಡು ವರ್ಷಗಳ ಹಿಂದೆಯೇ ಸರ್ವೆ ನಡೆಸಿ, ಎಷ್ಟು ಮರಗಳು ಯೋಜನೆಗಾಗಿ ತೆಗೆಯಬೇಕು ಎಂದು ಗುರುತಿಸಿದೆ. ಒಟ್ಟು 2,364 ಮರಗಳು ಉಪನಗರ ರೈಲು ಮಾರ್ಗ ಸಾಗುವ ಕಡೆಗಳಲ್ಲಿದ್ದು, ಅವುಗಳನ್ನು ತೆರವು ಮಾಡುವ ಅವಶ್ಯಕತೆಯಿದೆ ಎಂದು ಸರ್ವೆಯಲ್ಲಿ ಗುರುತಿಸಲಾಗಿತ್ತು. ಅದರಲ್ಲಿ ಅಂಬೇಡ್ಕರ್‌ ನಗರದಿಂದ ಚನ್ನಸಂದ್ರವರೆಗೆ 954 ಮರಗಳು ಹಾಗೂ ಚನ್ನಸಂದ್ರದಿಂದ ಮುದ್ದೇನಹಳ್ಳಿ ಕ್ರಾಸ್‌ವರೆಗೆ 1,410 ಮರಗಳಿವೆ ಎಂದು ಗುರುತಿಸಲಾಗಿತ್ತು.

226 ಮರಗಳ ಸ್ಥಳಾಂತರ

ಕೆ-ರೈಡ್‌ ಗುರುತಿಸಿರುವ 2,364 ಮರಗಳ ಪೈಕಿ ಅವುಗಳ ಅಳತೆಗೆ ತಕ್ಕಂತೆ ಅವುಗಳನ್ನು ಕಡಿಯುವುದು ಹಾಗೂ ಸ್ಥಳಾಂತರ ಮಾಡಲು ನಿರ್ಧರಿಸುವ ಬಗ್ಗೆಯೂ ಸರ್ವೆ ವರದಿಯಲ್ಲಿ ತಿಳಿಸಲಾಗಿತ್ತು. ಅದರಂತೆ 2,364 ಮರಗಳ ಪೈಕಿ 226 ಮರಗಳು ಬೇರೆಡೆಗೆ ಸ್ಥಳಾಂತರಿಸಬಹುದಾಗಿದ್ದು, ಅವುಗಳನ್ನು ನಿಯಮದಂತೆ ಬೇರು ಸಹಿತ ತೆಗೆದು ಬೇರೆ ಕಡೆಗೆ ನೆಡಲು ನಿರ್ಧರಿಸಲಾಗಿದೆ. ಹೀಗಾಗಿ 2,364 ಮರಗಳ ಪೈಕಿ 2,138 ಮರಗಳನ್ನು ಕಡಿಯಲಾಗುತ್ತದೆ.

Bengaluru: ರಾಜಧಾನಿ ಸುತ್ತಲಿನ ಪ್ರದೇಶಗಳಲ್ಲಿ ರೈಲ್ವೆ ಹಳಿ ದ್ವಿಗುಣಗೊಳಿಸಲು ಸರ್ವೇ ಆರಂಭ

ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಕೆ

ರಾಜನಕುಂಟೆಯಿಂದ ಹೀಲಲಿಗೆವರೆಗಿನ ಉಪನಗರ ರೈಲು ಮಾರ್ಗದಲ್ಲಿನ ಮರಗಳನ್ನು ತೆರವುಗೊಳಿಸುವ ಸಂಬಂಧ ಬಿಬಿಎಂಪಿಗೆ ಕೆ-ರೈಡ್‌ನಿಂದ ಕಳೆದ ಆಗಸ್ಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಆಧಾರದಲ್ಲಿ ಬಿಬಿಎಂಪಿ ಮರಗಳ ತೆರವಿನ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆ ಕರೆದಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಆಧರಿಸಿ ಮರಗಳ ತೆರವು ಕಾರ್ಯಕ್ಕೆ ಖಾಸಗಿ ಸಂಸ್ಥೆಯನ್ನು ಗುರುತಿಸುವುದು ಅಥವಾ ಬಿಬಿಎಂಪಿಯೇ ಗುತ್ತಿಗೆ ಆಧಾರದಲ್ಲಿ ತಂಡಗಳನ್ನು ನೇಮಿಸಿ ಮರಗಳನ್ನು ಕಡಿಯುವ ಕೆಲಸ ಮಾಡುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

1 ಮರಕ್ಕೆ 10 ಸಸಿ ನೆಡಲು ಸೂಚನೆ

ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ರಸ್ತೆ ಅಗಲೀಕರಣ, ಮೆಟ್ರೋ ಕಾಮಗಾರಿಗಳಿಗಾಗಿಯೇ ಪ್ರತಿವರ್ಷ ನೂರಾರು ಮರಗಳನ್ನು ಕಡಿಯಲಾಗುತ್ತದೆ. ಅದರಿಂದ ನಗರದಲ್ಲಿ ಹಸಿರು ಕಡಿಮೆಯಾಗುತ್ತಿದೆ, ಅದನ್ನು ತಪ್ಪಿಸಲು ಒಂದು ಮರ ಕಡಿದರೆ 10 ಸಸಿ ನೆಡಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಅದೇ ರೀತಿ ಉಪನಗರ ರೈಲು ಯೋಜನೆಗಾಗಿ ಕಡಿಯಲಾಗುತ್ತಿರುವ 2,138 ಮರಗಳಿಗೆ ಬದಲಾಗಿ 21,380 ಸಸಿಗಳನ್ನು ನೆಡಬೇಕು ಎಂದು ಕೆ-ರೈಡ್‌ ಸಂಸ್ಥೆಗೆ ಬಿಬಿಎಂಪಿ ಅರಣ್ಯ ವಿಭಾಗ ಸೂಚಿಸಿದೆ.

Latest Videos
Follow Us:
Download App:
  • android
  • ios