ಉಪನಗರ ರೈಲ್ವೆ ಯೋಜನೆಯ ಮೊದಲ ಕಾರಿಡಾರ್‌ ಕೆಎಸ್‌ಆರ್‌ ಬೆಂಗಳೂರು- ಯಲಹಂಕ- ದೇವನಹಳ್ಳಿವರೆಗಿನ ‘ಸಂಪಿಗೆ’ ಮಾರ್ಗದ ಕಾಮಗಾರಿಗೆ ವರ್ಷಾಂತ್ಯಕ್ಕೆ ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಂಪನಿ (ಕೆ-ರೈಡ್‌) ಟೆಂಡರ್‌ ಕರೆಯುವ ನಿರೀಕ್ಷೆಯಿದೆ.

ಬೆಂಗಳೂರು (ಆ.4) :  ಉಪನಗರ ರೈಲ್ವೆ ಯೋಜನೆಯ ಮೊದಲ ಕಾರಿಡಾರ್‌ ಕೆಎಸ್‌ಆರ್‌ ಬೆಂಗಳೂರು- ಯಲಹಂಕ- ದೇವನಹಳ್ಳಿವರೆಗಿನ ‘ಸಂಪಿಗೆ’ ಮಾರ್ಗದ ಕಾಮಗಾರಿಗೆ ವರ್ಷಾಂತ್ಯಕ್ಕೆ ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಂಪನಿ (ಕೆ-ರೈಡ್‌) ಟೆಂಡರ್‌ ಕರೆಯುವ ನಿರೀಕ್ಷೆಯಿದೆ.

ಉಪನಗರ ರೈಲನ್ನು ಬೆಂಗಳೂರು ಅಲ್ಲದೆ ಸುತ್ತಮುತ್ತಲ ನಗರಗಳಿಗೂ ಹಬ್ಬಿಸಬೇಕು ಎಂಬ ಆಗ್ರಹದ ನಡುವೆಯೇ ಯೋಜನೆಯ ಮೊದಲ ಕಾರಿಡಾರ್‌ ಕಾಮಗಾರಿ ಆರಂಭಿಸುವ ಕುರಿತು ಟೆಂಡರ್‌ ಕರೆಯಲು ಪ್ರಯತ್ನ ನಡೆದಿದೆ. ವರ್ಷಾಂತ್ಯಕ್ಕೆ ಹೆಚ್ಚುವರಿ ಅನುದಾನ ಮಂಜೂರಾಗುವ ನಿರೀಕ್ಷೆಯಿದ್ದು, ‘ಸಂಪಿಗೆ’ ಮಾರ್ಗದ ಕಾಮಗಾರಿಗಾಗಿ ಟೆಂಡರ್‌ ಕರೆಯುವುದಾಗಿ ಕೆ-ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸೂರಿಗೆ ಮೆಟ್ರೋ ಯೋಜನೆ: ಕನ್ನಡ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ!

ಕೆಎಸ್‌ಆರ್‌ ಬೆಂಗಳೂರು- ಯಲಹಂಕ- ದೇವನಹಳ್ಳಿವರೆಗಿನ 41.478 ಕಿ.ಮೀ. ಉದ್ದದ ಸಬ್‌ ಅರ್ಬನ್‌ ರೈಲ್ವೆ ಮಾರ್ಗ ಇದಾಗಿದೆ. 19.22 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ತೆರಳಿದರೆ, 22.278 ಕಿ.ಮೀ. ನೆಲಮಟ್ಟದಲ್ಲಿ ಸಾಗಲಿದೆ. ದೇವನಹಳ್ಳಿಯ ಬಳಿಯ ಅಕ್ಕುಪೇಟೆನಲ್ಲಿ ಡಿಪೋ ನಿರ್ಮಾಣವಾಗಲಿದೆ. ಮುಂದುವರಿದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸುವ ಗುರಿಯ ಪ್ರಸ್ತಾವ ಇದೆ.

ನಿಲ್ದಾಣಗಳು:

ಎತ್ತರಿಸಿದ ಮಾರ್ಗದಲ್ಲಿ 8 ಹಾಗೂ ನೆಲಮಟ್ಟದಲ್ಲಿ ಏಳು ಸೇರಿದಂತೆ 15 ನಿಲ್ದಾಣಗಳನ್ನು ಒಳಗೊಂಡಿದೆ. ಕೆಎಸ್‌ಆರ್‌ ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ನಿಲ್ದಾಣಗಳು ಇಂಟರ್‌ಚೇಂಜ್‌ ಆಗಿ ರೂಪುಗೊಳ್ಳಲಿವೆ. ಶ್ರೀರಾಮಪುರ, ಮಲ್ಲೇಶ್ವರ, ಮುತ್ಯಾಲ ನಗರ, ಕೊಡಿಗೆಹಳ್ಳಿ, ಜ್ಯೂಡಿಶಿಯಲ್‌ ಲೇಔಟ್‌, ಯಲಹಂಕ, ನಿಟ್ಟೆಮೀನಾಕ್ಷಿ, ಬೆಟ್ಟಹಲಸೂರು, ದೊಡ್ಡಜಾಲ, ಏರ್‌ಪೋರ್ಚ್‌ ಟ್ರಂಪೆಟ್‌, ಏರ್‌ಪೋರ್ಚ್‌ ಟರ್ಮಿನಲ್‌, ಏರ್‌ಪೋರ್ಚ್‌ ಕೆಐಎಡಿಬಿ ಹಾಗೂ ದೇವನಹಳ್ಳಿ ನಿಲ್ದಾಣ ಈ ಯೋಜನೆಯಡಿ ನಿರ್ಮಾಣವಾಗಲಿವೆ.

ಮೂರನೇ ಟೆಂಡರ್‌

ಉಪನಗರ ಯೋಜನೆಯಲ್ಲಿ ನಾಲ್ಕು ಕಾರಿಡಾರ್‌ಗಳು ನಿರ್ಮಾಣ ಅಗಲಿವೆ. ಈಗಾಗಲೇ ಉಪನಗರ ರೈಲಿನ ಎರಡನೇ ಕಾರಿಡಾರ್‌ ‘ಮಲ್ಲಿಗೆ’ (ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ) ಮಾರ್ಗದ ಕಾಮಗಾರಿಯನ್ನು ಕೆ-ರೈಡ್‌ ನಡೆಸುತ್ತಿದೆ. ಎಲ್‌ ಆ್ಯಂಡ್‌ ಟಿ ಈ ಮಾರ್ಗದ ಕಾಮಗಾರಿ ನಿರ್ವಹಿಸುತ್ತಿದೆ. ಕಳೆದ ಮೇ ತಿಂಗಳಲ್ಲಿ ಈ ಮಾರ್ಗದ 12 ನಿಲ್ದಾಣಗಳ ನಿರ್ಮಾಣಕ್ಕೂ ಕೆ ರೈಡ್‌ ಟೆಂಡರ್‌ ಆಹ್ವಾನಿಸಿತ್ತು. ಎಲ್ಲಕ್ಕಿಂತ ಮೊದಲು ಸಂಪಿಗೆ ಕಾರಿಡಾರ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯ ಇತ್ತು. ಆದರೆ, ಕೆ ರೈಡ್‌ ಆದ್ಯತಾ ಕಾರಿಡಾರ್‌ ಎಂದು ಎರಡನೇ ಕಾರಿಡಾರನ್ನು ಆಯ್ಕೆ ಮಾಡಿಕೊಂಡಿತು.

ಮೆಟ್ರೋದಲ್ಲಿ ಮಹಿಳಾ ಮಣಿಯರ ಫೈಟ್‌; ಬಿಗ್‌ಬಾಸ್‌ ಅಡಿಷನ್ನಾ ಎಂದ ನೆಟ್ಟಿಗರು

ಅಲ್ಲದೆ, ಕನಕ (ಹೀಲಲಿಗೆ-ರಾಜಾನುಕುಂಟೆ) ಮಾರ್ಗಕ್ಕೂ ಟೆಂಡರ್‌ ಕರೆಯಾಗಿದ್ದು, ನಾಲ್ಕು ಕಂಪನಿಗಳು ಪಾಲ್ಗೊಂಡಿವೆ. ಇದೀಗ ವರ್ಷಾಂತ್ಯಕ್ಕೆ ಸಂಪಿಗೆ ಕಾರಿಡಾರ್‌ ಟೆಂಡರ್‌ ಪ್ರಕ್ರಿಯೆ ನಡೆದಲ್ಲಿ ಕೆ-ರೈಡ್‌ನ ಮೂರನೇ ಕಾರಿಡಾರ್‌ ಕಾಮಗಾರಿ ಆರಂಭದ ಪ್ರಕ್ರಿಯೆ ಆರಂಭವಾದಂತಾಗಲಿದೆ. ಕೆಂಗೇರಿ-ವೈಟ್‌ಫೀಲ್ಡ್‌ ನಡುವಿನ 35.52 ಕಿ.ಮೀ. ಉದ್ದದ ‘ಪಾರಿಜಾತ’ ಮಾರ್ಗದ ಪ್ರಕ್ರಿಯೆಗಳು ಬಾಕಿ ಉಳಿದಂತಾಗಲಿದೆ.