Asianet Suvarna News Asianet Suvarna News

ಬಿಸಿಲು ಮಳೆ: ಬೆಂಗಳೂರಲ್ಲಿ 1636 ಮಂದಿಗೆ ಡೆಂಘೀ ಜ್ವರ..!

ಕಳೆದ 15 ದಿನದಿಂದ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. 

1636 Dengue Fever Cases in Bengaluru grg
Author
First Published Jul 14, 2023, 4:28 AM IST

ಬೆಂಗಳೂರು(ಜು.14): ಮುಂಗಾರು ಆರಂಭಗೊಂಡ ಮೇಲೆ ನಗರದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಿಬಿಎಂಪಿಯ ಪೂರ್ವ ವಲಯ ಡೆಂಘೀ ಕೇಂದ್ರವಾಗಿ ಮಾರ್ಪಡುತ್ತಿದೆ. ನಗರದಲ್ಲಿ ಕಳೆದ 15 ದಿನದಿಂದ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಜುಲೈ 10ರ ವರೆಗೆ ಬೆಂಗಳೂರಿನಲ್ಲಿ ಒಟ್ಟು 1,636 ಡೆಂಘೀ ಪ್ರಕರಣ ಕಾಣಿಸಿಕೊಂಡಿದೆ. ಈ ಪೈಕಿ 1,053 ಪ್ರಕರಣಗಳು ಕಳೆದ 40 ದಿನದಲ್ಲಿ (ಜೂನ್‌ 1 ರಿಂದ ಜುಲೈ 10) ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

ಪೂರ್ವ ವಲಯದಲ್ಲಿ ಡೆಂಘೀ ಹೆಚ್ಚು : ಬಿಬಿಎಂಪಿಯ ಪೂರ್ವ ವಲಯದ ಪ್ರದೇಶದಲ್ಲಿ ಒಟ್ಟು 527 ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದೆ. ಜೂನ್‌ನಲ್ಲಿ 217 ಹಾಗೂ ಜುಲೈನಲ್ಲಿ 123 ಪ್ರಕರಣ ಕಾಣಿಸಿಕೊಂಡಿವೆ. ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ವಲಯ, ಮೂರನೇ ಸ್ಥಾನದಲ್ಲಿ ಮಹದೇವಪುರ ವಲಯ ಇದೆ.

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಜಾಗೃತಿ ಮತ್ತು ತಪಾಸಣೆ: ಡೆಂಘೀ ಪ್ರರಕಣ ಕಾಣಿಸಿಕೊಂಡ 100 ಮೀಟರ್‌ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಡೆಂಘೀ ರೋಗಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜತೆಗೆ, ಸೊಳ್ಳೆ ನಾಶಕ್ಕೆ ನಿಯಮಿತವಾಗಿ ನಗರದಲ್ಲಿ ಫಾಗಿಂಗ್‌ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆಯ ಅಕ್ಕ-ಪಕ್ಕದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ತೆಂಗಿನ ಚಿಪ್ಪು, ಟೈಯರ್‌, ಹೂವಿನ ಕುಂಡ ಸೇರಿದಂತೆ ಇನ್ನಿತರೆ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು, ಸೊಳ್ಳೆ ಪರದೆ ಬಳಕೆ, ನೀರು ಶೇಖರಣೆ ಮಾಡುವ ತೊಟ್ಟಿ, ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಬಳಸೋ ಸೋಪಿನ ಪರಿಮಳಕ್ಕೆ ಸೊಳ್ಳೆ ಆಕರ್ಷಿತವಾಗುತ್ತವೆಯಾ? ಸಂಶೋಧನೆ ಹೇಳೋದೇನು?

ಮಳೆ ಹಾಗೂ ಬಿಸಿಲು ವಾತಾವರಣ ಇರುವುದರಿಂದ ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಘೀ ಪ್ರಕರಣ ಹೆಚ್ಚಾಗಿರಲಿವೆ. ಜಾಗೃತಿ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಬಿಬಿಎಂಪಿ ಆರೋಗ್ಯ ವಿಭಾಗ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ತಿಳಿಸಿದ್ದಾರೆ.  

ನಗರದಲ್ಲಿ ಡೆಂಘೀ ಪ್ರಕರಣ ವಿವರ

ವಲಯ ಜೂನ್‌ ಜುಲೈ-10
ಪೂರ್ವ 217 123
ಮಹದೇವಪುರ 160 67
ಪಶ್ಚಿಮ 76 44
ದಕ್ಷಿಣ 97 52
ಆರ್‌ಆರ್‌ನಗರ 33 14
ಯಲಹಂಕ 56 30
ಬೊಮ್ಮನಹಳ್ಳಿ 44 28
ದಾಸರಹಳ್ಳಿ 4 6
ಒಟ್ಟು 689 364
ಹಿಂದಿನ ವರ್ಷಗಳಲ್ಲಿ ಪತ್ತೆಯಾದ ಡೆಂಘೀ ವಿವರ
ವರ್ಷ ಡೆಂಘೀ ಪ್ರಕರಣ
2020 6,679
2021 6,166
2022 5,589
2023 1,636 (ಜು.10)

Follow Us:
Download App:
  • android
  • ios