ಕರ್ನಾಟಕದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸರಕಾರ ರಚಿಸಲು ಸ್ಪಷ್ಟ ಬಹುಮತ ಸಿಗದ ಕಾರಣ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ, ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 'ನಾವೂ ಕುದುರೆ ವ್ಯಾಪಾರಕ್ಕೆ ಸಿದ್ಧ,' ಎಂದು ಎಚ್.ಡಿ.ಕುಮಾರಸ್ವಾಮಿ ಸಹ ಬಹಿರಂಗವಾಗಿಯೇ ಹೇಳಿರುವುದು ಆಶ್ಚರ್ಯವನ್ನುಂಟು ಮಾಡಿದೆ.
ಬೆಂಗಳೂರು: ಜೆಡಿಎಸ್‌ನೊಂದಿಗೆ ಕೈ ಜೋಡಿಸುತ್ತಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ನೂತನ ಸರಕಾರ ರಚಿಸಲು ಮುಂದಾಗಿದೆ. ಜೆಡಿಎಸ್‌ಗೆ ಭೇಷರತ್ತು ಬೆಂಬಲ ನೀಡಿರುವ ಕಾಂಗ್ರೆಸ್, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಅನುವು ಮಾಡಿ ಕೊಡುತ್ತಿದೆ. ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರದ ಸಾಧ್ಯತೆಯೂ ಇದೆ.
ಮೇಘಾಲಯ, ನಾಗಲ್ಯಾಂಡ್ ಹಾಗೂ ಗೋವಾದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಅವಕಾಶ ನೀಡದೆ, ಮೈತ್ರಿ ಪಕ್ಷಗಳಿಗೆ ಸರಕಾರ ರಚಿಸಲು ರಾಜ್ಯಪಾಲರು ಅನುವು ಮಾಡಿಕೊಟ್ಟಿದ್ದರು. ಅದೇ ಪರಿಸ್ಥಿತಿ ರಾಜ್ಯದಲ್ಲಿಯೂ ಮುಂದುವರಿಯಲಿದೆ, ಎಂದು ಖುದ್ದಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುದುರೆ ವ್ಯಾಪಾರದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, 'ಅಧಿಕಾರಕ್ಕಾಗಿ ಯಾವತ್ತೂ ಹಾತೊರೆಯುವ ಕುಟುಂಬ ನಮ್ಮದಲ್ಲ. ಬಿಜೆಪಿಯ 40-50 ಶಾಸಕರು ಜೆಡಿಎಸ್‌ಗೆ ಬರ್ತೀವಿ ಅಂದರು. ನನಗೆ ಸರಕಾರ ರಚನೆಗೆ ಎರಡೂ ಕಡೆ ಆಫರ್ ಇದೆ. ನಮಗೂ ಕುದುರೆ ವ್ಯಾಪಾರ ಮಾಡುವ ಅವಕಾಶವಿದೆ. ಬಿಜೆಪಿಯ 10-15 ಶಾಸಕರು ನಮ್ಮೊಂದಿಗೆ ಕೈ ಜೋಡಿಸಲು ಸಿದ್ಧರಿದ್ದಾರೆ,' ಎಂದರು.
'ತಂದೆಗಾದ ಅವಮಾನವನ್ನು ತೊಳೆಯುವ ಅವಕಾಶ ನಂಗೆ ಸಿಕ್ಕಿದೆ. ಇದು ನಮ್ಮ ಮುಂದೆ ಇರುವ ಪರಿಸ್ಥಿತಿ. ಇದು ಮತ್ತೊಮ್ಮೆ ನಮ್ಮನ್ನು ಪರೀಕ್ಷಿಸೋ ಸಮಯ. ಶೃಂಗೇರಿ ಮಠದ ಭಕ್ತರು ನಮ್ಮ ಕುಟುಂಬ. ನಮ್ಮ ತಂದೆಗೆ ಯಾವುದೇ ಧಕ್ಕೆ ಆಗಬಾರದೆಂದು ಈ ನಿರ್ಧಾರಕ್ಕೆ ಬರಲಾಗಿದೆ. ನಂಗೆ ಅಧಿಕಾರಕ್ಕಿಂತ ಮುಖ್ಯ ಈ ಬಿರುಕನ್ನು ಸರಿ ಮಾಡುವುದಾಗಿದೆ,' ಎಂದರು.
