ಸಂದರ್ಶನದಲ್ಲಿ 'ಕೆಲಸ ಏಕೆ ಬದಲಿಸುತ್ತಿದ್ದೀರಾ?' ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಬಾರದು. ಬದಲಿಗೆ, ಇದನ್ನು ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಹೊಸ ಉದ್ಯೋಗವು ನಿಮ್ಮ ವೃತ್ತಿ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು.  

ಪ್ರಾಮಾಣಿಕತೆ ಇರಲಿ, ಆದರೆ ಕೆಲಸ ಹುಡುಕಿಕೊಳ್ಳುವಾಗ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಿಕೊಳ್ಳಲು ಹೆದರಬಾರದು. ಸಂದರ್ಶನದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿ ಸೈ ಎನಿಸಿಕೊಳ್ಳಲು ಸೂಕ್ತ ತಯಾರಿ ಅಗತ್ಯ.

ಕೆಲಸಕ್ಕೆಂದು ಸಂದರ್ಶನಕ್ಕೆ ಹೋದಾಗ ರಾಮನಿಗೆ ಕೆಲಸಕ್ಕೆ ಸಂಬಂಧಿಸಿದ ಯಾವ ಪ್ರಶ್ನೆ ಕೇಳಿದರೇನೂ ಆತಂಕವಿಲ್ಲ. ಎಲ್ಲದಕ್ಕೂ ಉತ್ತರಿಸಬಲ್ಲೆ ಎಂಬ ಕಾನ್ಫಿಡೆನ್ಸ್ ಅವನದು. ಆದರೆ, ಕೆಲಸ ಏಕೆ ಬದಲಿಸ್ತಿದೀರಾ ಎಂದ್ರೆ ಮಾತ್ರ ಸಂಬಳ ಹೆಚ್ಚಿಸಿಕೊಳ್ಳೋಕೆ ಅಂದು ಬಿಟ್ಟು ಯಡವಟ್ಟು ಮಾಡಿಕೊಂಡು ಬಿಡುತ್ತಾನೆ. ಹಾಗಂತ ತಾನಿರುವ ಕಂಪನಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನೋದೂ ಸರಿಯಲ್ಲ, ಬಾಸ್‌ ಕಿರಿಕಿರಿ ಬಗ್ಗೆ ಹೇಳಿದರೆ ಹೇಗೋ ಎಂಬ ಭಯ. ಅದೂ ಹೇಳಬಾರದು ಬಿಡಿ. ಬೇರೆ ಉತ್ತರ ಹೇಳೋಕೆ ಅಪ್ರಾಮಾಣಿಕ ಎನಿಸಿದರೆ ಎಂಬುವುದೇ ಅವನ ಚಿಂತೆ. ಒಟ್ಟಿನಲ್ಲಿ ಈ ಪ್ರಶ್ನೆ ಬಂದ ಕೂಡಲೇ ಮಾತನಾಡಲು ತಡವರಿಸುತ್ತಾನೆ. ಹಾಗಿದ್ದರೆ ಸಾಮಾನ್ಯವಾಗಿ ಎಲ್ಲ ಸಂದರ್ಶನಗಳಲ್ಲೂ ಎದುರಾಗುವ ಈ ಪ್ರಶ್ನೆಗೆ ಏನೆಂದು ಉತ್ತರಿಸಿದರೆ ಬೆಸ್ಟ್? ನೀವೂ ಹೊಸ ಕೆಲಸಕ್ಕೆ ಪ್ರಯತ್ನಿಸುವಾಗ ಈ ಭಯ ಕಾಡುತ್ತಿದ್ದರೆ ಇದಕ್ಕೊಂದು ಪರಿಹಾರವಿದೆ.

ಉದ್ಯೋಗ ಬದಲಿಸಲು ಕಾರಣ ಕೇಳಿದರೆ ಬಾಸ್‌ನ ಕಿರಿಕಿರಿ, ಕೊಲೀಗ್ಸ್ ಗಾಸಿಪ್, ನಿಮ್ಮನ್ನು ನಡೆಸಿಕೊಳ್ಳುವ ರೀತಿ ಇತ್ಯಾದಿ ಕಾರಣಗಳಿದ್ದಾಗ ಅದನ್ನು ಹೇಳಿದರೆ ಚನ್ನಾಗಿರೋಲ್ಲ. ಯಾವತ್ತೂ ಯಾರ ಬಗ್ಗೆಯಾಗಲಿ ಅಥವಾ ಸಂದರ್ಭದ ಬಗ್ಗೆಯಾಗಲಿ ಅಪ್ಪಿ ತಪ್ಪಿಯೂ ನೆಗಟಿವ್ ಮಾತನಾಡಬಾರದು. ಅದರ ಬದಲು ನಿಮ್ಮ ಬಗ್ಗೆ ಮಾರ್ಕೆಂಟಿಂಗ್ ಮಾಡಿ ಕೊಳ್ಳಲು ಟ್ರೈ ಮಾಡಿ. ಬೇರೆಯವರ ಬಗ್ಗೆ ದೂರಿದರೆ ನೀವು ನಿಮ್ಮೊಂದಿಗೆ ಕೆಲಸ ಮಾಡುವವರನ್ನು ದೂರುವ ಗುಣವುಳ್ಳವರು ಎಂಬುದಷ್ಟೇ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ, ಉದ್ಯೋಗ ಏಕೆ ಬದಲಿಸುತ್ತಿದ್ದೀರಾ ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿರುವ ಉದ್ಯೋಗಕ್ಕೆ ನಿಮ್ಮ ಬಳಿ ಸರಿಯಾದ ಕೌಶಲ್ಯಗಳಿವೆ ಎಂಬುದನ್ನು ತಿಳಿಸಿಕೊಡಲು ಅವಕಾಶವಾಗಿ ಬಳಸಿಕೊಂಡರೆ ಒಳ್ಳೇದು.

ರೆಡ್ ಫ್ಲ್ಯಾಗ್ ತೋರದಂತೆ ಇರಲಿ ಎಚ್ಚರ 'ಅವಕಾಶಕ್ಕಾಗಿ ಎದುರು ನೋಡುವವರು ಕೆಲವೊಮ್ಮೆ ಎಷ್ಟೊಂದು ಪ್ರಾಮಾಣಿಕರಾಗಿ ಬಿಡುತ್ತಾರೆಂದರೆ ತಮ್ಮ ಬಾಸ್‌ನ ದುರ್ಗುಣಗಳನ್ನು ವಿವರಿಸುತ್ತಲೇ ಸಾಗುತ್ತಾರೆ. ಆದರೆ, ಅವರಿಗೆ ತಿಳಿಯದ್ದೇನೆಂದರೆ, ಹೈರಿಂಗ್ ಮ್ಯಾನೇಜರ್‌ರ್ಸ್ ಯಾವಾಗಲೂ ರೆಡ್ ಫ್ಲ್ಯಾಗ್ ತೋರಿಸಲು ಕಾತುರರಾಗಿರುತ್ತಾರೆಂದು. ಆದರೆ, ಇದರ ಜೊತೆ ಅವರು ತಾವು ನೋಡುತ್ತಿರುವ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಛಾತಿ ಹಾಗೂ ಮನೋಧರ್ಮ ನಿಮ್ಮಲ್ಲಿದೆಯೇ ಎಂಬುದನ್ನೂ ಗಮನಿಸುತ್ತಿರುತ್ತಾರೆ,' ಎನ್ನುತ್ತಾರೆ ಜಾಬ್ ಸರ್ಚ್ ಕೋಚ್ ಆಶ್ಲಿ ವಾಟ್ಕಿನ್ಸ್.

ಉದ್ಯೋಗ ಬದಲಾಯಿಸಲೇನು ಕಾರಣ? 

ಸಂದರ್ಶನಗಳಲ್ಲಿ ಖಂಡಿತಾ ಈ ಪ್ರಶ್ನೆ ಇರುತ್ತದೆ. ಹೀಗೆ ಕೇಳಿದಾಗ ನೀವು ಅಪ್ಲೈ ಮಾಡಿರುವ ಉದ್ಯೋಗಕ್ಕೆ ಬೇಕಾದ ಎಲ್ಲ ಕೌಶಲ್ಯಗಳು ನಿಮ್ಮಲ್ಲಿವೆ. ಅದಕ್ಕೆ ಸೂಕ್ತ ಅನುಭವ ನಿಮ್ಮದಾಗಿದೆ, ಆ ರೋಲ್‌ಗೆ ನೀವೇ ತಕ್ಕ ವ್ಯಕ್ತಿ ಎಂಬುದನ್ನು ಅರ್ಥ ಮಾಡಿಸಿಕೊಡಲು ಪ್ರಯತ್ನಿಸಲಬೇಕು.

ಒಂದು ವೇಳೆ ನೀವು ಕೆಲಸ ಬಿಡಲು ನಿಮ್ಮ ಬಾಸ್‌ನ ನಡುವಳಿಕೆಯೇ ಕಾರಣವಾಗಿದ್ದರೆ, ಅದನ್ನು ಹೇಳಲೇಬೇಕೆಂದು ಅನಿಸಿದರೆ, ಆಗ ನಿಮ್ಮ ಬಾಸ್ ತೆಗೆದುಕೊಳ್ಳುವ ನಿರ್ಧಾರಗಳು ಹೇಗಿದ್ದರೆ ಚೆನ್ನಾಗಿರುತ್ತಿತ್ತು, ಕೆಲವು ಕೆಲಸಗಳನ್ನು ಅವರು ಹೇಳುವಂತೆ ಅಲ್ಲದೆ ಬೇರೆ ರೀತಿ ಮಾಡಿದರೆ ಎಷ್ಟು ಉತ್ತಮ ಫಲಿತಾಂಶ ದೊರೆಯುತ್ತದೆ, ಅವರಿಗಿಂತ ನಿಮ್ಮ ಯೋಚನೆಗಳು ಎಷ್ಟು ಭಿನ್ನ, ದೃಷ್ಟಿಕೋನಗಳು ಬೇರೆ ಇದ್ದು, ನಿಮ್ಮ ರೀತಿಯಿಂದ ಹೆಚ್ಚು ಪ್ರೊಡಕ್ಟಿವ್ ಆಗಿ ಕೆಲಸ ಮಾಡಲು ಸಾಧ್ಯ ಎಂಬುದನ್ನು ಇಂಟರ್ ವ್ಯೂ ಮಾಡುತ್ತಿರುವವರು ಕನ್ವೀನ್ಸ್ ಆಗುವಂತೆ ವಿವರಿಸಿ.

ಕೆಲವೊಮ್ಮೆ ಕಂಪನಿಯು ನಿಮ್ಮ ಆದರ್ಶಗಳಿಗೆ ತಕ್ಕುದಾಗಿಲ್ಲ ಎಂದೆನಿಸಿದರೆ, ನಿಮ್ಮ ನೈತಿಕತೆ, ನಂಬಿದ ಮೌಲ್ಯಗಳಿಗೆ ಆ ಕಂಪನಿಯ ಆಡಳಿತ ವ್ಯವಸ್ಥೆ ವಿರುದ್ಧವಾಗಿರುವುದರಿಂದ ಅಲ್ಲಿ ಮಾಡುವ ಕೆಲಸದಲ್ಲಿ ಖುಷಿ ಇಲ್ಲ. ಆದರೆ, ಈಗ ಎದುರಿಗಿರುವ ಕಂಪನಿ ಹಾಗೂ ಉದ್ಯೋಗ ನಿಮ್ಮ ಮನೋಧರ್ಮಕ್ಕೆ ಸರಿಯಾಗಿದೆ. ಜೊತೆಗೆ, ನಿಮ್ಮ ಕೌಶಲ್ಯ ಬಳಸಿಕೊಳ್ಳಲು, ಬೆಳೆಸಿಕೊಳ್ಳಲೂ ಅನುಕೂಲಕರವಾಗಿದೆ ಎಂಬುದನ್ನು ಅರ್ಥ ಮಾಡಿಸಿ. ಈ ವಿವರಣೆಯಲ್ಲಿ ಹಳೆ ಕಂಪನಿಯನ್ನು ದೂರುವುದನ್ನು ಸಾಧ್ಯವಾದಷ್ಟು ಮಿತಿಯಲ್ಲಿಡಿ.

ಪಕ್ಕದಲ್ಲಿ ನಿಮ್ಮ ಬಾಸ್ ಕುಳಿತಿದ್ದರೆ? ನಿಮ್ಮ ಉತ್ತರದ ಮೇಲೆ ಗಮನದಲ್ಲಿಟ್ಟುಕೊಳ್ಳಲು ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರೋ ಅವರೆಲ್ಲ ನಿಮ್ಮ ಪಕ್ಕದ ಕುರ್ಚಿಯಲ್ಲೇ ಕುಳಿತಿದ್ದಾರೆಂದು ಕಲ್ಪಿಸಿಕೊಳ್ಳಿ. ಯಾವುದನ್ನು ನೇರವಾಗಿ ಅವರಿಗೆ ಹೇಳಲಾರಿರೋ- ಅದನ್ನು ಸಂದರ್ಶನದಲ್ಲಿ ಕೂಡಾ ಹೇಳಕೂಡದು.

ಕೆಲಸ ಬದಲಾವಣೆಗೆ ಕಾರಣವಾಗಿ 'ಇನ್ನೂ ಸ್ಕಿಲ್ ಡೆವಲಪ್ ಮಾಡಿಕೊಳ್ಳಲು, ಹೊಸತನ್ನು ಕಲಿಯಲು, ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ,' ಎಂದು ಹೇಳುವುದು ಒಳ್ಳೆಯದು. ಆದರೆ, ಅಷ್ಟೇ ಹೇಳಿದರೆ ಸಾಲದು. ಬದಲಿಗೆ ಈಗ ಅಪ್ಲೈ ಮಾಡಿರುವ ಉದ್ಯೋಗ ಹೇಗೆ ನಿಮಗೆ ಬೆಳವಣಿಗೆಗೆ ಅವಕಾಶಗಳನ್ನು ಒದಗಿಸುತ್ತದೆ ಎಂಬುದನ್ನೂ ವಿವರಿಸಬೇಕು. ಈ ಹೊಸ ಉದ್ಯೋಗದಲ್ಲಿ ಯಾವೆಲ್ಲ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನಿಮಗೆ ಅವಕಾಶವಾಗಲಿದೆ ಎಂದು ಹೇಳಿ. ಹಳೆಯ ಕಂಪನಿ ನೀಡದ ಪ್ರಾಜೆಕ್ಟ್‌ಗಳನ್ನು ಹೊಸ ಕಂಪನಿ ನೀಡುತ್ತದೆ ಎಂದಾದರೆ ಅವನ್ನೇ ಉತ್ತರದ ಸರಕಾಗಿಸಿ.

ನಿಮ್ಮ ಬೆಳವಣಿಗೆಯಾದ್ರೆ ಸಾಲದು ಕೇವಲ ನಿಮ್ಮ ಬೆಳವಣಿಗೆ ಕುರಿತೇ ಮಾತನಾಡುತ್ತಿದ್ದರೆ, ಸಂದರ್ಶಕರಿಗೆ ನೆಗೆಟಿವ್ ಇಂಪ್ರೆಶನ್ ಮೂಡಬಹುದು. ಪ್ರತಿ ಕೆಲ ವರ್ಷಗಳಿಗೊಮ್ಮೆ ವೈಯಕ್ತಿಕ ಬೆಳವಣಿಗಾಗಿ ನೀವು ಕಂಪನಿ ಬದಲಿಸುವವರು ಎನಿಸಬಿಡಬಹುದು.

ಹಾಗಾಗಿ, ನಿಮ್ಮೊಂದಿಗೆ ನೀವು ಹೋಗುವ ಕಂಪನಿಯ ಬೆಳವಣಿಗೆಗಾಗಿ ನೀವು ಶ್ರಮ ವಹಿಸುವುದಾಗಿಯೂ ತಿಳಿಸಿ. ಕ್ಲೈಂಟ್ಸ್ ಜೊತೆ ದೀರ್ಘಕಾಲದ ಸಂಬಂಧ ನಿರ್ವಹಿಸುವ ಮನಸ್ಸಿದೆ ಎಂಬುದನ್ನು ಸ್ಪಷ್ಟಪಡಿಸಿ. ಯಾವಾಗಲೂ ಬದಲಿಸುವ ಕೆಲಸಕ್ಕಾಗಿ ನೀವು ಹೇಗೆ ತಯಾರಿ ನಡೆಸುತ್ತಿದ್ದೀರಾ ಎಂಬುದನ್ನು ಕೇಳಲು ಸಂದರ್ಶಕರು ಇಷ್ಟ ಪಡುತ್ತಾರೆಂಬುವುದು ನೆನಪಿನಲ್ಲಿಡಿ.