ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮುನ್ನ 12 ಬಾರಿ ರಿಜೆಕ್ಟ್ ಆಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸೌಮ್ಯದೀಪ್ ಪಾಲ್ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಮೈಕ್ರೋಸಾಫ್ಟ್‌ನಲ್ಲಿ 16 ಹಾಗೂ ಅಮೆಜಾನ್‌ನಲ್ಲಿ 3 ಬಾರಿ ತಿರಸ್ಕೃತರಾಗಿದ್ದ ಇವರು, ಸತತ ಪ್ರಯತ್ನ, ರೆಫರಲ್ ಹಾಗೂ ಸರಿಯಾದ ರೆಸ್ಯೂಮ್ ತಂತ್ರದಿಂದ ಯಶಸ್ಸು ಸಾಧಿಸಬಹುದು ಎಂದು ಉದ್ಯೋಗಾಕಾಂಕ್ಷಿಗಳಿಗೆ ಧೈರ್ಯ ತುಂಬಿದ್ದಾರೆ.

ಬೆಂಗಳೂರು: ಟೆಕ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಪ್ರತಿಯೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಕನಸು. ಆದರೆ ಅಡೆತಡೆಗಳಿಗೆ ಹೆದರದೆ ಸತತ ಪ್ರಯತ್ನ ನಡೆಸಿದರೆ ಯಶಸ್ಸು ಖಂಡಿತ ಎಂಬುದಕ್ಕೆ 27 ವರ್ಷದ ಸೌಮ್ಯದೀಪ್ ಪಾಲ್ ಅವರ ಕಥೆಯೇ ಸಾಕ್ಷಿ. ಪ್ರಸ್ತುತ ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿರುವ ಸೌಮ್ಯದೀಪ್, ಬರೋಬ್ಬರಿ 12 ಬಾರಿ ರಿಜೆಕ್ಟ್ (Rejection) ಆದ ಬಳಿಕ 13ನೇ ಪ್ರಯತ್ನದಲ್ಲಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.

ಟೆಕ್ ಕಂಪನಿಗಳಲ್ಲಿ 'ರಿಜೆಕ್ಷನ್'ಗಳ ಸುರಿಮಳೆ..!

ಅವರ ಈ ಕಠಿಣ ಪಯಣ ಗೂಗಲ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಅಮೆಜಾನ್‌ನಿಂದ 3 ಬಾರಿ ಹಾಗೂ ಮೈಕ್ರೋಸಾಫ್ಟ್‌ನಿಂದ 16 ಬಾರಿ ತಿರಸ್ಕರಿಸಲ್ಪಟ್ಟ ನಂತರವೇ ಅವರಿಗೆ ಆಫರ್ ಲೆಟರ್‌ಗಳು ಸಿಕ್ಕಿದ್ದವು. ಇನ್ನು ಆಪಲ್ ಮತ್ತು ಒರಾಕಲ್ ಕಂಪನಿಗಳಿಂದ ಅವರಿಗೆ ಎಂದಿಗೂ ಕರೆ ಬರಲೇ ಇಲ್ಲ. ಈ ಅನುಭವದಿಂದ ಕಲಿತದ್ದನ್ನು ಹಂಚಿಕೊಂಡ ಪಾಲ್, ಬಿಗ್‌ಟೆಕ್ ಕಂಪನಿಗಳಲ್ಲಿ ಕೆಲಸ ಪಡೆಯುವುದು "ಅಕ್ಷರಶಃ ಸಂಖ್ಯೆಗಳ ಆಟ" (Numbers Game) ಎಂದಿದ್ದಾರೆ.

Scroll to load tweet…

ಉದ್ಯೋಗಾಕಾಂಕ್ಷಿಗಳಿಗೆ ಸೌಮ್ಯದೀಪ್ ನೀಡಿದ ಚಾಣಾಕ್ಷ ಸಲಹೆಗಳು!

ಉದ್ಯೋಗಾಕಾಂಕ್ಷಿಗಳಿಗೆ ಅತ್ಯಮೂಲ್ಯ ಸಲಹೆ ನೀಡಿದ ಅವರು, "ಕೇವಲ ಸಿಕ್ಕ ಸಿಕ್ಕ ಹುದ್ದೆಗಳಿಗೆ ರೆಸ್ಯೂಮ್ ಕಳುಹಿಸಬೇಡಿ. ನಿಮ್ಮ ಕೌಶಲ್ಯ ಮತ್ತು ಉದ್ಯೋಗದ ವಿವರಣೆಗೆ (Job Description) ಸರಿಯಾದ ಹೊಂದಾಣಿಕೆ ಇದೆಯೇ ಎಂದು ಪರಿಶೀಲಿಸಿ. ಕಂಪನಿಯಲ್ಲಿ ಕೆಲಸ ಮಾಡುವ ಪರಿಚಿತರಿಂದ ರೆಫರಲ್ ಪಡೆದು, ಎಚ್‌ಆರ್ ಮತ್ತು ಹೈರಿಂಗ್ ಮ್ಯಾನೇಜರ್‌ಗಳಿಗೆ ನೇರವಾಗಿ ಇಮೇಲ್ ಅಥವಾ ಲಿಂಕ್ಡ್‌ಇನ್‌ನಲ್ಲಿ ಸಂದೇಶ ಕಳುಹಿಸಿ" ಎಂದು ತಿಳಿಸಿದ್ದಾರೆ.

ಸೋಲಿನ ಭಯ ಬಿಟ್ಟು ಮುನ್ನಡೆಯಲು ನೆಟ್ಟಿಗರಿಗೆ ಸ್ಪೂರ್ತಿ!

ಯಾವುದೇ ಒಂದೆರಡು ಇಂಟರ್‌ವ್ಯೂಗಳಲ್ಲಿ ಸೋತ ತಕ್ಷಣವೇ ಧೃತಿಗೆಟ್ಟು ಆತಂಕಕ್ಕೊಳಗಾಗುವ ಇಂದಿನ ಉದ್ಯೋಗಾಕಾಂಕ್ಷಿಗಳಿಗೆ ಸೌಮ್ಯದೀಪ್ ಅವರ ಈ ಅನುಭವ ದೊಡ್ಡ ಪಾಠವಾಗಿದೆ. ಪ್ರತಿಯೊಂದು ನಿರಾಕರಣೆಯೂ (Rejection) ತಮ್ಮ ಲೋಪದೋಷಗಳನ್ನು ತಿದ್ದುಕೊಂಡು, ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಿಕ್ಕ ಅವಕಾಶ ಎಂದು ಅವರು ಪರಿಗಣಿಸಿದ್ದರು. ನಿರಂತರವಾಗಿ ಕಷ್ಟಪಟ್ಟು ಪ್ರಯತ್ನಿಸಿದರೆ ಹಾಗೂ ಸರಿಯಾದ ತಂತ್ರಗಳನ್ನು ಬಳಸಿದರೆ, ಎಷ್ಟೇ ದೊಡ್ಡ ಕಂಪನಿಯಾಗಿದ್ದರೂ ಬಾಗಿಲು ತೆರೆಯುತ್ತದೆ ಎಂಬುದಕ್ಕೆ ಇವರ ಈ ದೀರ್ಘ ಪಯಣವೇ ಜೀವಂತ ಸಾಕ್ಷಿಯಾಗಿದೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ..!

ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇವರ ಹಠ ಹಾಗೂ ಸತತ ಪ್ರಯತ್ನವನ್ನು ಮೆಚ್ಚಿದ್ದಾರೆ. ಇನ್ನು ಕೆಲವರು "ಐಐಟಿ, ಎನ್‌ಐಟಿಯಂತಹ ಟೈಯರ್-1 ಕಾಲೇಜು ಅಥವಾ ಪ್ರಸಿದ್ಧ ಬ್ರಾಂಡ್ ಕಂಪನಿಯ ಹೆಸರು ರೆಸ್ಯೂಮ್‌ನಲ್ಲಿದ್ದರೆ ಮಾತ್ರ ಇಷ್ಟೊಂದು ಆಫರ್‌ಗಳು ಮತ್ತು ಅವಕಾಶಗಳು ಸಿಗಲು ಸಾಧ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.