ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯದ ವೆಚ್ಚವನ್ನು ಸರಿದೂಗಿಸಲು ಮೈಕ್ರೋಸಾಫ್ಟ್ ತನ್ನ 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಘೋಷಿಸಿದೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳ ಅರ್ಹ ಉದ್ಯೋಗಿಗಳಿಗೆ ಈ ಅವಕಾಶ ನೀಡಲಾಗಿದ್ದು, ಡಿಸೆಂಬರ್ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದೇ ಸಂದರ್ಭದಲ್ಲಿ ಟೆಕ್ಕಿಯೊಬ್ಬರ ಕಣ್ಣೀರಿನ ಪೋಸ್ಟ್ ವೈರಲ್ ಆಗಿದೆ.
ಮೈಕ್ರೋಸಾಫ್ಟ್ ಕಂಪೆನಿ ಅಮೆರಿಕ, ಕೆನಡಾ, ಭಾರತ ಮತ್ತು ಯುಕೆಯಲ್ಲಿನ ತನ್ನ ಹೆಚ್ಚಿನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಪ್ರಾರಂಭಿಸಿದೆ. ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯದ ಮೇಲಿನ ಹೆಚ್ಚುತ್ತಿರುವ ವೆಚ್ಚವನ್ನು ಆರ್ಥಿಕ ದಕ್ಷತೆಯೊಂದಿಗೆ ಸಮತೋಲನಗೊಳಿಸಲು ಕಂಪೆನಿಯು ಈ ಕ್ರಮವನ್ನು ತೆಗೆದುಕೊಂಡಿದೆ. ಸ್ವಯಂಪ್ರೇರಿತ ನಿವೃತ್ತಿ (Voluntary Retirement) ಕೊಡುಗೆ ಎಂದು ಕರೆಯಲ್ಪಡುವ ಕಂಪೆನಿಯ ಹೊಸ ಯೋಜನೆಯು 70 ಅಥವಾ ಅದಕ್ಕಿಂತ ಕಡಿಮೆ ಮಟ್ಟದ ಅರ್ಹ ಉದ್ಯೋಗಿಗಳಿಗೆ ಕಂಪೆನಿಯನ್ನು ತೊರೆಯುವ ಆಯ್ಕೆಯನ್ನು ನೀಡುತ್ತಿದೆ. ಇದರ ಅರ್ಥ ಉದ್ಯೋಗಿಗಳ ಗುಣಮಟ್ಟ, ಅವರು ಕೆಲಸ ಮಾಡುವ ರೀತಿ ಎಲ್ಲವನ್ನೂ ಪರಿಗಣಿಸಿ ಅರ್ಹತೆ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಯಾರಿಗೆ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಬೇಕು ಎಂದು ಯೋಜನೆ ರೂಪಿಸಿದೆ ಕಂಪೆನಿ. ಈ ಹಿನ್ನೆಲೆಯಲ್ಲಿ ಸರಿಸುಮಾರು 60,000 ಉದ್ಯೋಗಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ, ಇದು ಮೈಕ್ರೋಸಾಫ್ಟ್ನ ಒಟ್ಟು 2,23,000 ಉದ್ಯೋಗಿಗಳ ಪೈಕಿ ಸುಮಾರು 22 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
AI ಯ ಬೆಳೆಯುತ್ತಿರುವ ಕಂಪ್ಯೂಟಿಂಗ್ ಅಗತ್ಯಗಳನ್ನು ಪೂರೈಸಲು ಮೈಕ್ರೋಸಾಫ್ಟ್ ಡೇಟಾ ಕೇಂದ್ರಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುತ್ತಿದೆ. ಕಂಪೆನಿಯು ಆಂಥ್ರೊಪಿಕ್, ಓಪನ್ಎಐ ಮತ್ತು ಇತರ ಹಲವಾರು ಕಂಪೆನಿಗಳಿಗೆ ಕ್ಲೌಡ್ ಸೇವೆಗಳನ್ನು ಸಹ ಒದಗಿಸುತ್ತದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದರ ಬಂಡವಾಳ ವೆಚ್ಚಗಳು $50 ಬಿಲಿಯನ್ ಮೀರುವ ನಿರೀಕ್ಷೆಯಿದೆ ಎಂದು ಮೈಕ್ರೋಸಾಫ್ಟ್ ಜುಲೈನಲ್ಲಿ ಹೇಳಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚಗಳು ಮತ್ತು ಹಣಕಾಸು ಗುತ್ತಿಗೆಗಳು ಒಟ್ಟು $34.9 ಬಿಲಿಯನ್ ಆಗಿದ್ದವು. ಈ ಹೆಚ್ಚಿದ ಖರ್ಚು ಕಂಪೆನಿಯ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಏಪ್ರಿಲ್ನಲ್ಲಿ, ಮೈಕ್ರೋಸಾಫ್ಟ್ ಯುಎಸ್ನಲ್ಲಿ ತನ್ನ ಮೊದಲ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಕಾರ್ಯಕ್ರಮವನ್ನು ಘೋಷಿಸಿತು. ಸರಿಸುಮಾರು 7% ಅಮೆರಿಕದ ಉದ್ಯೋಗಿಗಳು ಒಳಗೊಂಡಿದ್ದರು. ತರುವಾಯ, ಜುಲೈನಲ್ಲಿ, ಕಂಪೆನಿಯು 4,800 ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಪ್ರಕಟಿಸಿತು.
ಟೆಕ್ಕಿಯ ಕಣ್ಣೀರು
ಇದರ ಬೆನ್ನಲ್ಲೇ ಈಚೆಗೆ, ಉದ್ಯೋಗ ಸೇರಿದ ಯುವಕನೊಬ್ಬ ರೆಡ್ಡಿಟ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಯಾವ ರೀತಿ ತಮ್ಮ ಜೀವನ ಅನಿಶ್ಚಿತತೆಯಿಂದ ಕೂಡಿದೆ ಎನ್ನುವುದನ್ನು ಹೇಳಿದ್ದಾರೆ. ತಮಗೆ ನಿವೃತ್ತಿ ಯೋಜನೆಯ ಇ-ಮೇಲ್ ಬಂದಾಗ ಆದ ಆತಂಕವನ್ನು ಅವರು ವಿವರಿಸಿದ್ದಾರೆ. 60 ಸಾವಿರ ಉದ್ಯೋಗಿಗಳಿಗೆ ಸ್ವಯಪ್ರೇರಿತ ನಿವೃತ್ತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಆಫರ್ ಅನ್ನು ಸ್ವೀಕರಿಸುವವರು ಡಿಸೆಂಬರ್ 31 ರೊಳಗೆ ಹಣವನ್ನು ಸ್ವೀಕರಿಸಿ ಕಂಪೆನಿಯಲ್ಲಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 1 ಅನ್ನು ಕೊನೆಯ ದಿನಾಂಕವೆಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ನೋಡಿ ಶಾಕ್ ಆಗಿರುವ ಬಗ್ಗೆ ವಿವರಿಸಿದ್ದಾರೆ.
ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಉದ್ಯೋಗಿ, ಉದ್ಯೋಗ ಮಾರುಕಟ್ಟೆಯ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ತಮ್ಮ ಕಠಿಣ ಪರಿಶ್ರಮದ ಮೌಲ್ಯವನ್ನು ಪ್ರಶ್ನಿಸಿದರು. "ನಾನು ಏಕೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲಿಲ್ಲ ಎಂದು ನನಗೆ ಅನಿಸುತ್ತದೆ. ಚೆನ್ನಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೊಂದುಕೊಂಡಿದ್ದಾರೆ. ಮುಂದಿನ ಪರಿಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ. ಕೇವಲ ಮೂರು ತಿಂಗಳ ಹಿಂದೆ ಉದ್ಯೋಗಗಕ್ಕೆ ಸೇರಿಕೊಂಡೆ. ಕಂಪೆನಿಯ ಕೋಡ್ಬೇಸ್ ಬಗ್ಗೆ ತಮಗೆ ಸೀಮಿತ ಜ್ಞಾನವಿತ್ತು ಮತ್ತು ತಮ್ಮ ಮುಂದಿನ ವೃತ್ತಿಜೀವನದ ಬದಲಾವಣೆಯ ಬಗ್ಗೆ ಅನಿಶ್ಚಿತತೆ ಹೊಂದಿರುವುದಾಗಿ ಹೇಳಿದ್ದಾರೆ. ನನಗೆ ಕೇವಲ ಮೂರು ವರ್ಷಗಳ ಅನುಭವ ಇರೋದು. ಆದರೆ ಈಗಲೇ ಈ ಸ್ಥಿತಿಗೆ ಬಂದಿದ್ದೇನೆ ಎಂದು ನೊಂದು ನುಡಿದಿದ್ದಾರೆ.
AI ಯುಗದಲ್ಲಿ ಬದಲಾಗುತ್ತಿರುವ ವ್ಯವಹಾರ ಮಾದರಿ
ಮೈಕ್ರೋಸಾಫ್ಟ್ ತನ್ನ ವ್ಯವಹಾರ ಮಾದರಿಯನ್ನು ಸಹ ಬದಲಾಯಿಸುತ್ತಿದೆ. AI ಸೇವೆಗಳ ನಿಜವಾದ ಬಳಕೆಯ ಆಧಾರದ ಮೇಲೆ ಗ್ರಾಹಕರಿಂದ ಶುಲ್ಕ ವಿಧಿಸುವತ್ತ ಕಂಪೆನಿಯು ಸಾಗುತ್ತಿದೆ. ಇದು ಪ್ರೋಗ್ರಾಮರ್ಗಳು, ಮಾರಾಟ ಸಿಬ್ಬಂದಿ ಮತ್ತು ಪೂರೈಕೆ ಸರಪಳಿ ಉದ್ಯೋಗಿಗಳಿಗೆ AI ಪರಿಕರಗಳನ್ನು ಒದಗಿಸಿದೆ ಮತ್ತು ಅವುಗಳ ಬಳಕೆಯಿಂದ ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿದೆ. ಹೊಸ AI-ಸಂಬಂಧಿತ ಬೆಳವಣಿಗೆಯ ಅವಕಾಶಗಳನ್ನು ಬಂಡವಾಳ ಮಾಡಿಕೊಳ್ಳಲು ಮತ್ತು ಅದರ ವೆಚ್ಚಗಳನ್ನು ನಿಯಂತ್ರಿಸಲು ಅಗತ್ಯವಿರುವ ಪ್ರತಿಭೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಕಂಪೆನಿ ಹೊಂದಿದೆ. ಜೂನ್ ತ್ರೈಮಾಸಿಕದಲ್ಲಿ ಮೈಕ್ರೋಸಾಫ್ಟ್ $19.64 ಬಿಲಿಯನ್ನಷ್ಟು ಸಕಾರಾತ್ಮಕ ಉಚಿತ ನಗದು ಹರಿವನ್ನು ವರದಿ ಮಾಡಿದೆ, ಆದಾಗ್ಯೂ ಇದು ಹಿಂದಿನ ವರ್ಷಕ್ಕಿಂತ 23 ಪ್ರತಿಶತದಷ್ಟು ಇಳಿಕೆಯಾಗಿದೆ. ಅದರ ಕ್ಲೌಡ್ ಪ್ರತಿಸ್ಪರ್ಧಿಗಳಾದ ಆಲ್ಫಾಬೆಟ್ ಮತ್ತು ಅಮೆಜಾನ್ ಇದೇ ಅವಧಿಯಲ್ಲಿ ನಕಾರಾತ್ಮಕ ಉಚಿತ ನಗದು ಹರಿವನ್ನು ವರದಿ ಮಾಡಿವೆ.
ಡಿಸೆಂಬರ್ನಲ್ಲಿ ಉದ್ಯೋಗಿ ಭಾಗವಹಿಸುವಿಕೆ ನಿರ್ಧಾರ
ಕಂಪೆನಿಯ ಕೆಲವು ಮಾರ್ಕೆಟಿಂಗ್, ಮಾರಾಟ ಮತ್ತು ಎಂಜಿನಿಯರಿಂಗ್ ತಂಡಗಳು ಹೊಸ ಯೋಜನೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ಅರ್ಹ ಉದ್ಯೋಗಿಗಳು ಡಿಸೆಂಬರ್ ಆರಂಭದೊಳಗೆ ಈ ಕೊಡುಗೆಯನ್ನು ಸ್ವೀಕರಿಸಬೇಕೆ ಎಂದು ನಿರ್ಧರಿಸಬೇಕಾಗುತ್ತದೆ. ಯೋಜನೆಯನ್ನು ಆಯ್ಕೆ ಮಾಡುವ ಉದ್ಯೋಗಿಗಳನ್ನು ಡಿಸೆಂಬರ್ 31 ರಂದು ವಜಾಗೊಳಿಸಲಾಗುತ್ತದೆ. ಜುಲೈನಲ್ಲಿ, ಸ್ವಯಂಪ್ರೇರಿತ ನಿವೃತ್ತಿ ಕಾರ್ಯಕ್ರಮಕ್ಕೆ ಅರ್ಹರಾಗಿರುವ ಶೇಕಡಾ 30 ಕ್ಕಿಂತ ಹೆಚ್ಚು ಉದ್ಯೋಗಿಗಳು ಅದನ್ನು ತೆಗೆದುಕೊಂಡಿದ್ದಾರೆ ಎಂದು ಮೈಕ್ರೋಸಾಫ್ಟ್ ವರದಿ ಮಾಡಿದೆ. ಆದಾಗ್ಯೂ, ಆ ಯೋಜನೆಯು 67 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಿರ್ದೇಶಕರಿಗೆ ಸೀಮಿತವಾಗಿತ್ತು, ಆದರೆ ಹೊಸ ಯೋಜನೆಯು ವೈಸ್ ಪ್ರೆಸಿಡೆಂಡ್ ಹಂತದವರೆಗೆ ವಿಸ್ತರಿಸುತ್ತದೆ. ಮೂಲದ ಪ್ರಕಾರ, ಈ ಬಾರಿ ಎಷ್ಟು ಉದ್ಯೋಗಿಗಳು ಈ ಕೊಡುಗೆಯನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ಮೈಕ್ರೋಸಾಫ್ಟ್ ಯಾವುದೇ ಗುರಿಯನ್ನು ನಿಗದಿಪಡಿಸಿಲ್ಲ.







