5 ನಿಮಿಷ ಅಪ್ಪುಗೆಗೆ ₹600 ಪಡೆಯುವ ಈ ಪುರುಷರು ಹೊಸ ಉದ್ಯೋಗ ಸೃಷ್ಟಿಸಿದ್ದಾರೆ.
ಬೀಜಿಂಗ್: ಡಿಗ್ರಿ ಮುಗಿಯುತ್ತಿದ್ದಂತೆ ಯಾವ ಕೆಲಸ ಮಾಡಬೇಕು ಅನ್ನೋ ಗೊಂದಲ ಎಲ್ಲರಲ್ಲಿಯೂ ಇರುತ್ತದೆ. ಖಾಸಗಿ ಅಥವಾ ಸರ್ಕಾರಿ ಕೆಲಸ ಅಂದ್ರೆ ಅದು 9 ಟು 5 ಜಾಬ್ ಎಂಬ ಹಣೆಪಟ್ಟಿಯನ್ನು ಹೊಂದಿದೆ. 9 ಟು 5 ಜಾಬ್ ಮಾಡಲು ಇಷ್ಟಪಡದ ಜನರು ತಮ್ಮದೇ ಆದ ಸ್ವಂತ ವ್ಯವಹಾರ ಆರಂಭಿಸುತ್ತಾರೆ. ಆದ್ರೆ ಎಷ್ಟೋ ಜನರಿಗೆ ತಿಳಿಯದ ಹಲವು ವಿಚಿತ್ರ ಕೆಲಸಗಳು ಜಗತ್ತಿನಲ್ಲಿವೆ. ಈ ಕೆಲಸ ನೋಡಿದ್ರೆ ಇಷ್ಟೆನಾ ಮಾಡೋದು ಅಂತ ಶ್ರಮಜೀವಿಗಳು ಹುಬ್ಬೇರಿಸುತ್ತಾರೆ. ಇದೀಗ ಇಂತಹವುದೇ ಒಂದು ವಿಶೇಷ ಮತ್ತು ವಿಚಿತ್ರವಾದ ಕೆಲಸ ಚೀನಾದಲ್ಲಿ ಟ್ರೆಂಡ್ ಆಗುತ್ತಿದೆ. ಇಲ್ಲಿಯ ಪುರುಷರು/ಯುವಕರು 5 ನಿಮಿಷದ ಕೆಲಸಕ್ಕೆ 600 ರೂಪಾಯಿ ಸಂಪಾದಿಸುತ್ತಿದ್ದಾರೆ. ಕೆಲವರು 5 ನಿಮಿಷಕ್ಕೆ 600 ರೂ.ಗಿಂತಲೂ ಹೆಚ್ಚು ಹಣವನ್ನು ಚಾರ್ಜ್ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ವಿಚಿತ್ರ ಆದರೆ ಆಸಕ್ತಿದಾಯಕ ಪ್ರವೃತ್ತಿಯೊಂದು ವೇಗ ಪಡೆದುಕೊಳ್ಳುತ್ತಿದೆ. ಇಲ್ಲಿನ ಯುವತಿಯರು ಒತ್ತಡದಿಂದ ಪಾರಾಗಲು 'ಪುರುಷ ಅಮ್ಮಂದಿರ' (Men Moms) ಮೇಲೆ ಅವಲಂಬಿತರಾಗುತ್ತಿದ್ದಾರೆ. ಈ ಪುರುಷ ಅಮ್ಮಂದಿರು ಮಹಿಳೆ/ಯುವತಿಯರನ್ನು ಅಪ್ಪಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನಿಗಧಿಪಡಿಸುತ್ತಾರೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವ ಯುವಕರು 'ಪುರುಷ ಅಮ್ಮಂದಿರಾಗಿ' ಬದಲಾಗುತ್ತಿದ್ದಾರೆ.
ಅಪ್ಪುಗೆ ಮಾಡಿಕೊಳ್ಳುವ ಬ್ಯುಸಿನೆಸ್
ಇಂದಿನ ಜೀವನಶೈಲಿಯಲ್ಲಿ ಒತ್ತಡ ಅನ್ನೋದು ಎಲ್ಲರಲ್ಲಿರುತ್ತದೆ. ಕೆಲವರು ಒತ್ತಡ ನಿವಾರಣೆಗೆ ಕಾಫಿ/ಟೀ ಕುಡಿದ್ರೆ, ಒಂದಿಷ್ಟು ಮಂದಿ ಸಿಗರೇಟ್ ಸೇದುತ್ತಾರೆ. ಒತ್ತಡ ನಿವಾರಣೆಗಾಗಿ ಯೋಗ, ಕಣ್ತುಂಬ ನಿದ್ದೆ ಮಾಡಲು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ. ಕೆಲವು ಅಧ್ಯಯನಗಳು, ನಿಮ್ಮ ಆಪ್ತರನ್ನು ಅಪ್ಪಿಕೊಳ್ಳುವುದರಿಂದ ಒತ್ತಡ ನಿವಾರಣೆ ಆಗುತ್ತೆ ಎಂದು ಹೇಳಿವೆ. ಹಾಗಾಗಿ ಚೀನಾದಲ್ಲಿ ಅಪ್ಪುಗೆ ಮಾಡಿಕೊಳ್ಳುವ ಬ್ಯುಸಿನೆಸ್ ಶುರುವಾಗಿದೆ.
ವಿದ್ಯಾರ್ಥಿನಿಯ ಪೋಸ್ಟ್ ವೈರಲ್
ಚೀನಾದ ಯುವತಿಯರು ತಮ್ಮ ಒತ್ತಡ ನಿವಾರಿಸಿಕೊಳ್ಳಲು 'ಪುರುಷ ಅಮ್ಮಂದಿರನ್ನು' ನೇಮಿಸಿಕೊಳ್ಳುತ್ತಾರೆ. ಪುರುಷ ಅಮ್ಮಂದಿರು ಒಂದು ಅಪ್ಪುಗೆಗೆ 20 ರಿಂದ 50 ಯುವಾನ್ (ಅಂದರೆ 250 ರಿಂದ 600 ರೂಪಾಯಿ) ಶುಲ್ಕ ವಿಧಿಸುತ್ತಾರೆ ಮತ್ತು ಅಪ್ಪುಗೆಯ ಸಮಯ ಸಾಮಾನ್ಯವಾಗಿ 5 ನಿಮಿಷ ಆಗಿರುತ್ತದೆ. ವಿದ್ಯಾರ್ಥಿನಿಯೊಬ್ಬಳು ನಾನು ಒತ್ತಡದಲ್ಲಿದ್ದು, ನನಗೆ ಯಾರನ್ನಾದರನ್ನು ತಬ್ಬಿಕೊಳ್ಳಲು ಸಹಾಯ ಮಾಡಿ. ಇದಕ್ಕಾಗಿ ನಾನು ಸಾಕಷ್ಟು ಹಣ ಖರ್ಚು ಮಾಡಲು ಸಿದ್ಧಳಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಳು. ಈ ಪೋಸ್ಟ್ ಚೀನಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಈ ಪೋಸ್ಟ್ ಬಳಿಕ ವಿದ್ಯಾರ್ಥಿನಿ ಓರ್ವ ಪುರುಷ ಅಮ್ಮನನ್ನು ತಬ್ಬಿಕೊಂಡಿದ್ದಾಳೆ. ನಂತರ ಪುರುಷನ ಅಪ್ಪುಗೆಯಿಂದ ತನ್ನ ಒತ್ತಡ ನಿವಾರಣೆಯಾಯ್ತು ಎಂದು ಹೇಳಿಕೊಂಡಿದ್ದಳು. ವಿದ್ಯಾರ್ಥಿನಿಯ ಈ ಪೋಸ್ಟ್ ಬಳಿಕ ಚೀನಾದಲ್ಲಿ ಮೆನ್ಸ್ ಮಾಮ್ ಗಳ ಬೇಡಿಕೆ ಹೆಚ್ಚಾಯ್ತು. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಒತ್ತಡ ನಿವಾರಿಸಿಕೊಳ್ಳಲು ಪುರುಷ ಅಮ್ಮಂದಿರನ್ನು ಹುಡುಕುತ್ತಿದ್ದಾರೆ.
ಅಪ್ಪುಗೆಗಾಗಿ ಒಪ್ಪಂದ
ವರದಿಯ ಪ್ರಕಾರ, ಮೆಟ್ರೋ ನಿಲ್ದಾಣಗಳು ಅಥವಾ ಶಾಪಿಂಗ್ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನೀವು 'ಪುರುಷ ಅಮ್ಮಂದಿರು' ಕಾಣಬಹುದು. ಅನೇಕ ಬಾರಿ ಹುಡುಗಿಯರು ಅವರನ್ನು ಅಪ್ಪಿಕೊಂಡು ತಮ್ಮ ಹೃದಯದ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ, ಇದು ಅವರ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಉತ್ತಮ ದೇಹ ಹೊಂದಿರುವ ಪುರುಷ ಅಮ್ಮಂದಿರು ಹೆಚ್ಚು ಬೇಡಿಕೆಯನ್ನು ಹೊಂದಿದ್ದಾರೆ. ಇಂತಹ ಪುರುಷರು 5 ನಿಮಿಷಕ್ಕಾಗಿ ಹೆಚ್ಚು ಚಾರ್ಜ್ ಮಾಡುತ್ತಾರೆ. ತಮ್ಮ ಅಪ್ಪುಗೆಯಲ್ಲಿ ವಿಶೇಷವಾದ ಒತ್ತಡ ನಿವಾರಿಸುವ ಮ್ಯಾಜಿಕ್ ಇದೆ ಎಂದು ಹೇಳಿಕೊಳ್ಳುತ್ತಾರೆ. ಒಪ್ಪಂದ ಅಂತಿಮಗೊಂಡ ನಂತರ, ಅಪ್ಪುಗೆಯ ಸ್ಥಳ ಮತ್ತು ಸಮಯವನ್ನು ನಿರ್ಧರಿಸಲಾಗುತ್ತದೆ.
