ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು: ಕೇಂದ್ರ ಸಚಿವ ಕುಮಾರಸ್ವಾಮಿ
ನಿರುದ್ಯೋಗಿ ಮಹಿಳೆಯರಿಗೆ, ಯುವಕರಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವುದಕ್ಕೆ ಕೇಂದ್ರದ ಯೋಜನೆಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ದೊರಕಿಸಿಕೊಡುವುದಕ್ಕೆ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ
ಮಂಡ್ಯ(ಡಿ.27): ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ವಿವಿಧ ವರ್ಗಗಳ ಜನರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಯೋಜನೆಗಳಿವೆ. ಅವುಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಕ್ಕೆ ಸಿದ್ಧನಿದ್ದೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಟಿಟಿಡಿ ಉದ್ಯೋಗ ನೇಮಕಾತಿ; ಸಂಬಳ ಪಡೆದು ಶ್ರೀನಿವಾಸನ ಸೇವೆ ಮಾಡೋ ಚಾನ್ಸ್!
ನಿರುದ್ಯೋಗಿ ಮಹಿಳೆಯರಿಗೆ, ಯುವಕರಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವುದಕ್ಕೆ ಕೇಂದ್ರದ ಯೋಜನೆಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ದೊರಕಿಸಿಕೊಡುವುದಕ್ಕೆ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು. ಪಶುಪಾಲನೆ, ಮೀನುಗಾರಿಕೆ ಇಲಾಖೆಯಡಿ ದೊರೆಯುವ ಸಾಲ ಸೌಲಭ್ಯಗಳು, ಬೀದಿ ಬದಿ ವ್ಯಾಪಾರಿಗಳಿಗೆ ೨೦ ಸಾವಿರ ರು.ವರೆಗೆ ಸಾಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ಅವಕಾಶಗಳಿವೆ. ಜಿಲ್ಲೆಯಲ್ಲಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಹೆಚ್ಚಿನ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ಬೇಸಿಗೆ ಬೆಳೆಗೆ ನೀರಿನ ಕೊರತೆ ಇಲ್ಲ:
ಕೃಷ್ಣರಾಜಸಾಗರ ಜಲಾಶಯ ಭರ್ತಿ ಹಂತ ಕಾಯ್ದುಕೊಂಡಿರುವುದು ಮತ್ತು ಜಿಲ್ಲೆಯ ಕೆರೆ- ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಬೇಸಿಗೆ ಬೆಳೆಗಳಿಗೆ ನೀರಿನ ಕೊರತೆ ಇಲ್ಲ. ಕೆಆರ್‌ಎಸ್‌ನಲ್ಲಿ ೧೨೪.೮೦ ಅಡಿ ಗರಿಷ್ಠ ಮಟ್ಟದ ನೀರಿದ್ದು, ಅಣೆಕಟ್ಟೆಗೆ ೫೬೦೦ ಕ್ಯುಸೆಕ್ ಒಳಹರಿವಿದೆ. ಕೆರೆಗಳಲ್ಲೂ ಸಾಕಷ್ಟು ನೀರು ಸಂಗ್ರಹವಾಗಿರುವುದರಿಂದ ಬೇಸಿಗೆ ಬೆಳೆಗಳಿಗೆ ನೀರು ಹರಿಸುವುದಕ್ಕೆ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಚಿವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿರುವ ೯೬೮ ಕೆರೆಗಳಲ್ಲಿ ೫೪೮ ಕೆರೆಗಳು ಶೇ.೧೦೦ರಷ್ಟು ನೀರಿನಿಂದ ಭರ್ತಿಯಾಗಿವೆ. ೧೭೪ ಕೆರೆಗಳಲ್ಲಿ ಶೇ.೭೫ರಷ್ಟು, ೯೨ ಕೆರೆಗಳಲ್ಲಿ ಶೇ.೫೦ರಷ್ಟು, ೮೦ ಕೆರೆಗಳಲ್ಲಿ ಶೇ.೨೫ರಷ್ಟು ಹಾಗೂ ೭೪ ಕೆರೆಗಳಲ್ಲಿ ಅದಕ್ಕಿಂತಲೂ ಕಡಿಮೆ ನೀರು ಸಂಗ್ರಹವಿರುವುದಾಗಿ ವಿವರಣೆ ನೀಡಿದರು.
ಕೆರೆಗಳ ಹೂಳೆತ್ತಿಲ್ಲ:
ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನಾಲಾ ವ್ಯಾಪ್ತಿಯಿಂದ ಕೆರೆಗಳಿಗೆ ನೀರು ಹರಿದುಹೋಗುತ್ತಿದ್ದು, ನಾಲೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯದಿರುವುದರಿಂದ ನೀರು ಹರಿಯದೆ ಕೆರೆಗಳು ಖಾಲಿ ಉಳಿದಿರುವುದಾಗಿ ಶಾಸಕ ಎಚ್.ಟಿ.ಮಂಜು ಕೇಂದ್ರ ಸಚಿವರ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಇಂಜಿನಿಯರ್ ಆನಂದ್, ಹೂಳನ್ನು ತೆಗೆಯುವುದಕ್ಕೆ ಹೆಚ್ಚುವರಿ ಅನುದಾನದ ಅಗತ್ಯವಿದೆ. ಅನುದಾನ ಬಿಡುಗಡೆಯಾಗುವುದು ವಿಳಂಬವಾಗಿದೆ. ಸಕಾಲಕ್ಕೆ ಅನುದಾನ ಸಿಗದಿರುವುದರಿಂದ ಹೂಳೆತ್ತಿಸಲು ಸಾಧ್ಯವಾಗಿಲ್ಲ ಎಂದಾಗ, ಮತ್ತೆ ಶಾಸಕ ಎಚ್.ಟಿ.ಮಂಜು, ಸೂಪರಿಂಟೆಂಡೆಂಟ್ ಇಂಜಿನಿಯರ್ ಬಂದ ಸಮಯದಲ್ಲಿ ಅನುದಾನ ಕೊಡುವುದಾಗಿ ಹೇಳಿದ್ದರಲ್ಲ. ತೆಗೆದುಕೊಂಡು ಮಾಡಬೇಕಿತ್ತು ಎಂದು ತಿರುಗೇಟು ಕೊಟ್ಟರು. ಆಗ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಹೂಳೆತ್ತುವುದಕ್ಕೆ ಅನುದಾನದ ಕೊರತೆ ಇದ್ದರೆ ನಮಗೆ ಪ್ರಸ್ತಾವನೆ ಸಲ್ಲಿಸಿ. ನಾಗಮಂಗಲ ತಾಲೂಕು ಹೊರತುಪಡಿಸಿದಂತೆ ಜಿಲ್ಲೆಯ ಯಾವ ತಾಲೂಕುಗಳಿಂದಲೂ ಪ್ರಸ್ತಾವನೆ ಬಂದಿಲ್ಲ. ಕೆ.ಆರ್.ಪೇಟೆಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಾಕಷ್ಟು ಅನುಕೂಲಗಳಿವೆ ಎಂದು ಹೇಳಿದರು.
ತುಮಕೂರಿಗೆ ಹೇಮಾವತಿ ನೀರು:
ಹೇಮಾವತಿ ಜಲಾಶಯದ ನೀರನ್ನು ಜಿಲ್ಲೆಯ ನಾಲ್ಕು ತಾಲೂಕಿನ ಜನರು ಆಶ್ರಯಿಸಿದ್ದಾರೆ. ಸಮರ್ಪಕವಾಗಿ ನಾಲೆಗಳಲ್ಲಿ ನೀರನ್ನು ಹರಿಸಿದ್ದರೆ ಎಲ್ಲಾ ಕೆರೆಗಳನ್ನು ತುಂಬಿಸಿ ಬೇಸಿಗೆ ಬೆಳೆಗೆ ನೀರು ಕೊಡಬಹುದಿತ್ತು. ತುಮಕೂರಿನವರು ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಮಗೆ ನೀರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಮಾವತಿ ನಾಲಾ ವಿಭಾಗದ ಇಂಜಿನಿಯರ್‌ಗೆ ನೀವು ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುವಿರೋ ಅಥವಾ ಹೊರಗೆ ಹೋಗಿ ಕೆರೆಗಳ ಸ್ಥಿತಿ- ಗತಿಗಳು ಹೇಗಿವೆ ಎನ್ನುವುದನ್ನು ಗಮನಿಸುತ್ತಿದ್ದೀರೋ. ಏಕೆಂದರೆ, ಹೊರಗಡೆ ಹೋದರಷ್ಟೇ ಕೆರೆಗಳ ಪರಿಸ್ಥಿತಿಯನ್ನು ತಿಳಿಯಲು ಸಾಧ್ಯ ಎಂದು ಚುಚ್ಚಿದರು. ನಂತರ ಅಧಿಕಾರಿಯು ಜನವರಿ ೩೧ಕ್ಕೆ ಹೇಮಾವತಿ ನಾಲೆಗೆ ನೀರನ್ನು ಸ್ಥಗಿತಗೊಳಿಸಲಿದ್ದು, ಮುಂದಿನ ೧೫ ದಿನಗಳೊಳಗೆ ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
೫೨ ಕೋಟಿ ರು.ಗೆ ಪ್ರಸ್ತಾವನೆ:
೪೨ ಕೆರೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ೫೨ ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಅಧಿಕಾರಿ ಕೇಂದ್ರ ಸಚಿವರ ಗಮನಕ್ಕೆ ತಂದರು.
ಯಾವ ಡಿಗ್ರಿ ಬೇಡ, ಈ ಸ್ಟಾರ್ಟ್‌ಅಪ್‌ಗೆ ಕೆಲ್ಸ ಮಾಡಿ 15 ಲಕ್ಷ ರೂ ಸಂಪಾದಿಸಿ ಎಂದ ರೆಡ್ಡಿಟ್ ಬಳಕೆದಾರ!
ಶಾಸಕ ಎಚ್.ಟಿ.ಮಂಜು ಮಾತನಾಡಿ, ಕೆ.ಆರ್.ಪೇಟೆ ತಾಲೂಕಿನ ಬಂಡೇನಹಳ್ಳಿ ಕೆರೆಯನ್ನು ಫುಡ್‌ಪಾರ್ಕ್‌ನವರು ಒತ್ತುವರಿ ಮಾಡಿಕೊಂಡು ಮೂಲ ರಸ್ತೆಗೆ ಕಾಂಪೌಂಡ್ ಹಾಕಿದ್ದಾರೆ ಎಂಬುದನ್ನು ಸಚಿವರ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಡಿಡಿಎಲ್‌ಆರ್ ಅವರಿಗೆ ಪ್ರಕರಣದ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.